ಶಸ್ತ್ರಾಸ್ತ್ರ ತಯಾರಿಕೆಗೆ ಭಾರತವನ್ನು ಪಾರ್ಟ್ನರ್ ಮಾಡಿಕೊಳ್ಳಲು ಯೂರೋಪ್, ಇಸ್ರೇಲ್ ಆಸಕ್ತಿ?
Europe, Israel interested in making India as their defence partner: ಯುದ್ಧಕಾಲದಲ್ಲಿ ಕ್ಷಿಪ್ರವಾಗಿ ಮತ್ತು ಅಧಿಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆ ಬೇಕು. ಯೂರೋಪ್ ಮತ್ತು ಇಸ್ರೇಲ್ ದೇಶಗಳು ಭಾರತವನ್ನು ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಭಾರತದಲ್ಲಿ ಕೈಗಾರಿಕೋದ್ಯಮ ಪ್ರಬಲವಾಗಿರುವುದು, ಕೌಶಲ್ಯವಂತ ಕಾರ್ಮಿಕರು ಲಭ್ಯ ಇರುವುದು, ಖಾಸಗಿ ಕಂಪನಿಗಳೂ ಪ್ರೊಡಕ್ಷನ್ನಲ್ಲಿ ಇರುವುದು ಎಲ್ಲರ ಚಿತ್ತ ಹರಿಯಲು ಕಾರಣ.

ನವದೆಹಲಿ, ಡಿಸೆಂಬರ್ 29: ಜಾಗತಿಕವಾಗಿ ಸಂಘರ್ಷಗಳು ಹೆಚ್ಚುತ್ತಿದ್ದು, ಮಿಲಿಟರಿ ತಂತ್ರ ಮತ್ತು ಹೂರಣಗಳ ಸ್ವರೂಪವೇ ಬದಲಾಗುತ್ತಿದೆ. ದೀರ್ಘಾವಧಿ ಯುದ್ಧದಲ್ಲಿ ಉಳಿಯಬೇಕಾದರೆ ಶಸ್ತ್ರಾಸ್ತ್ರಗಳು ಪ್ರಮಾಣ ಬಹಳಷ್ಟು ಬೇಕು. ಹೆಚ್ಚಿನ ದೇಶಗಳಲ್ಲಿರುವ ಶಸ್ತ್ರಾಸ್ತ್ರಗಳು ಕೆಲವೇ ದಿನಗಳ ಯುದ್ಧಕ್ಕೆ ಖಾಲಿಯಾಗುತ್ತವೆ. ಯುದ್ಧ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಸರಬರಾಜು ಬಹಳ ಅಗತ್ಯವಾಗಿರುತ್ತದೆ. ಇದು ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಜಗತ್ತು ಕಲಿತಿರುವ ಪಾಠ. ಅಂತೆಯೇ, ಯೂರೋಪ್ ಮತ್ತು ಇಸ್ರೇಲ್ ದೇಶಗಳು ತಮ್ಮ ಶಸ್ತ್ರಾಸ್ತ್ರ ಅಗತ್ಯಗಳಿಗೆ ಭಾರತದತ್ತ ಮುಖ ಮಾಡಹೊರಟಿವೆ.
ಯೂರೋಪ್ ಮತ್ತು ಇಸ್ರೇಲ್ ದೇಶಗಳು ಭಾರತವನ್ನು ತಮ್ಮ ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಭಾರತವು ಡಿಫೆನ್ಸ್ ಪಾರ್ಟ್ನರ್ ಆಗಲು ಸೂಕ್ತವಾದ ಮತ್ತು ವಿಶ್ವಾಸಾರ್ಹವಾದ ದೇಶವಾಗಿ ಯೂರೋಪ್ ಮತ್ತು ಇಸ್ರೇಲ್ ಕಣ್ಣಿಗೆ ಕಾಣುತ್ತಿದೆ. ಇದರಲ್ಲಿ ಅಚ್ಚರಿಯ ಅಂಶವೇನೂ ಇಲ್ಲ.
ಯುದ್ಧದ ವೇಳೆ ಮದ್ದುಗುಂಡುಗಳು, ಕ್ಷಿಪಣಿಗಳು, ಡ್ರೋನ್, ಏರ್ ಡಿಫೆನ್ಸ್ ಇಂಟರ್ಸೆಪ್ಟರ್ ಇತ್ಯಾದಿಗಳು ಎಷ್ಟು ಬಂದರೂ ಸಾಲದು. ಯೂರೋಪ್ ಮತ್ತು ಇಸ್ರೇಲ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ತಯಾರಿಕೆ ವ್ಯವಸ್ಥೆ ಇದೆ. ಆದರೂ ಕೂಡ ಭಾರತವನ್ನು ಡಿಫೆನ್ಸ್ ಪಾರ್ಟ್ನರ್ ಆಗಿ ಮಾಡಿಕೊಳ್ಳಲು, ಮತ್ತು ಭಾರತದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಇವು ಆಸಕ್ತಿ ತೋರುತ್ತಿರುವುದಕ್ಕೆ ಸಕಾರಣಗಳಿವೆ.
ಮೊದಲಿಗೆ, ಯೂರೋಪ್ನಲ್ಲಿ ಡಿಫೆನ್ಸ್ ಇಂಡಸ್ಟ್ರಿಗಳು ಇವೆ. ಆದರೆ, ದೀರ್ಘಕಾಲದ ಯುದ್ಧವನ್ನು ನಿರ್ವಹಿಸಲು ಬೇಕಾದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಕ್ಷಿಪ್ರವಾಗಿ ತಯಾರಿಸಲು ಆಗುವುದಿಲ್ಲ. ಇಸ್ರೇಲ್ಗೆ ಇದಕ್ಕಿಂತ ದೊಡ್ಡ ಸಮಸ್ಯೆ ಇದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ತಯಾರಿಸುವ ವ್ಯವಸ್ಥೆ ಇಲ್ಲ. ಅದರ ಜೊತೆಗೆ, ಸುತ್ತಮುತ್ತ ವೈರಿ ದೇಶಗಳೇ ಇರುವುದರಿಂದ ಮತ್ತು ಇಸ್ರೇಲ್ ಪುಟ್ಟ ಪ್ರದೇಶವಾಗಿರುವುದರಿಂದ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳನ್ನು ವೈರಿಗಳು ಸುಲಭವಾಗಿ ಗುರಿಯಾಗಿಸಿ ನಾಶ ಮಾಡಬಹುದು. ಹೀಗಾಗಿ, ಬೇರೆ ಕಡೆ ಶಸ್ತ್ರಾಸ್ತ್ರಗಳ ತಯಾರಿಕೆಯ ವ್ಯವಸ್ಥೆ ಮಾಡುವುದು ಅನಿವಾರ್ಯ.
ಇದನ್ನೂ ಓದಿ: ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು…
ಭಾರತವನ್ನು ಯಾಕೆ ನಂಬುತ್ತವೆ ಈ ದೇಶಗಳು…?
ಭಾರತದಲ್ಲಿ ಬಹಳ ವ್ಯಾಪಕವಾಗಿರುವ ಉದ್ಯಮಗಳಿವೆ. ಕಾರ್ಮಿಕ ಸಮೂಹ ದೊಡ್ಡದಿದೆ. ಕೌಶಲ್ಯವಂತ ಕಾರ್ಮಿಕರು, ಅರೆಕೌಶಲದ ಕಾರ್ಮಿಕರು ಹೇರಳ ಸಂಖ್ಯೆಯಲ್ಲಿ ಸಿಗುತ್ತಾರೆ. ಇಲ್ಲಿಯ ಡಿಫೆನ್ಸ್ ಸೆಕ್ಟರ್ ಖಾಸಗಿಯವರಿಗೂ ತೆರೆದಿದೆ. ಕ್ಷಿಪಣಿ, ರಾಡಾರ್, ಯುಎವಿ, ಮದ್ದುಗುಂಡು ಇತ್ಯಾದಿಗಳನ್ನು ತಯಾರಿಸಬಲ್ಲ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ ಎನ್ನುವುದು ಯೂರೋಪ್ ಮತ್ತು ಇಸ್ರೇಲ್ ದೇಶಗಳಿಗೆ ತಿಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




