Schneider Electric: ಬೆಂಗಳೂರಿನಲ್ಲಿ ಸ್ಮಾರ್ಟ್ ಫ್ಯಾಕ್ಟರಿ ಆರಂಭಿಸಲಿದೆ ಫ್ರಾನ್ಸ್ ಮೂಲದ ಷ್ನಾಯ್ಡರ್ ಎಲೆಕ್ಟ್ರಿಕ್
ಸ್ಮಾರ್ಟ್ ಫ್ಯಾಕ್ಟರಿಯಿಂದ 1,000 ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯ ಬೆಂಗಳೂರು ಘಟಕದ ಒಟ್ಟು ಉದ್ಯೋಗಿಗಳ ಸಂಖ್ಯೆ 3,000ಕ್ಕೆ ಹೆಚ್ಚಳವಾಗಲಿದೆ ಎಂದು ಷ್ನಾಯ್ಡರ್ ಎಲೆಕ್ಟ್ರಿಕ್ ತಿಳಿಸಿದೆ.
ನವದೆಹಲಿ: ಬೆಂಗಳೂರಿನಲ್ಲಿ (Bengaluru) 425 ಕೋಟಿ ರೂ. ಹೂಡಿಕೆ ಮಾಡಿ ಸ್ಮಾರ್ಟ್ ಫ್ಯಾಕ್ಟರಿ ಆರಂಭಿಸಲು ಉದ್ದೇಶಿಸಿರುವುದಾಗಿ ಫ್ರಾನ್ಸ್ ಮೂಲದ ಷ್ನಾಯ್ಡರ್ ಎಲೆಕ್ಟ್ರಿಕ್ (Schneider Electric) ಕಂಪನಿಯ ಭಾರತ ಘಟಕ ತಿಳಿಸಿದೆ. ಹೊಸ ಸ್ಮಾರ್ಟ್ ಫ್ಯಾಕ್ಟರಿಯು ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ 10 ಘಟಕಗಳ ಪೈಕಿ 6 ಅನ್ನು ಒಂದೇ ಸೂರಿನಡಿ ತರಲಿದೆ. ಈಗಿರುವ 5 ಲಕ್ಷ ಚದರ ಅಡಿಯ ಫ್ಯಾಕ್ಟರಿಯ ಬದಲಿಗೆ 10 ಲಕ್ಷ ಚದರ ಅಡಿಯಲ್ಲಿ ಹೊಸ ಸ್ಮಾರ್ಟ್ ಫ್ಯಾಕ್ಟರಿ ನಿರ್ಮಾಣವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
‘ಭಾರತದಲ್ಲಿರುವ ನಮ್ಮ ಉತ್ಪಾದನಾ ಕ್ಯಾಂಪಸ್ ಜಾಗತಿಕವಾಗಿ ಅತಿದೊಡ್ಡ ಸ್ಮಾರ್ಟ್ ಫ್ಯಾಕ್ಟರಿಗಳಲ್ಲಿ ಒಂದಾಗಿರಲಿದೆ. ಇದು ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಲಿದೆ. ಆತ್ಮ ನಿರ್ಭರ ಭಾರತದ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆ ನೀಡಲಿದೆ’ ಎಂದು ಕಂಪನಿಯ ಭಾರತದ ಘಟಕದ ಸಿಇಒ, ವಿಭಾಗೀಯ ಅಧ್ಯಕ್ಷ ಅನಿಲ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: Xiaomi: ಶವೋಮಿಗೆ ಬಿಗ್ ರಿಲೀಫ್; 3,700 ಕೋಟಿ ವಶಕ್ಕೆ ಪಡೆಯುವ ಐಟಿ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಹೊಸ ಫ್ಯಾಕ್ಟರಿಯಲ್ಲಿ ಸಿಂಗಲ್ ಫೇಸ್ ಯುಪಿಎಸ್, ತ್ರೀ ಫೇಸ್ ಯುಪಿಎಸ್, ಪವರ್ ಡಿಸ್ಟ್ರಿಬ್ಯೂಷನ್ ಯೂನಿಟ್ಸ್, ಲೋ ವೋಲ್ಟೇಜ್ ಡ್ರೈವ್ಸ್, ಮೀಟರ್, ಪ್ರಿ ಫ್ಯಾಬ್ರಿಕೇಟೆಡ್ ಡಾಟಾ ಸೆಂಟರ್ಗಳು ಸೇರಿದಂತೆ ಡಿಜಿಟಲ್ ಎನರ್ಜಿ ಪ್ರಾಡಕ್ಟ್ಸ್, ನವೀಕರಿಸಬಹುದಾದ ಇಂಧನ ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದು ಕಂಪನಿ ಹೇಳಿದೆ.
ಬೆಂಗಳೂರಿನಲ್ಲಿ ಸಾವಿರ ಉದ್ಯೋಗ ಸೃಷ್ಟಿ
ಸ್ಮಾರ್ಟ್ ಫ್ಯಾಕ್ಟರಿಯಿಂದ 1,000 ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯ ಬೆಂಗಳೂರು ಘಟಕದ ಒಟ್ಟು ಉದ್ಯೋಗಿಗಳ ಸಂಖ್ಯೆ 3,000ಕ್ಕೆ ಹೆಚ್ಚಳವಾಗಲಿದೆ ಎಂದು ಷ್ನಾಯ್ಡರ್ ಎಲೆಕ್ಟ್ರಿಕ್ ತಿಳಿಸಿದೆ. ಅಲ್ಲದೆ, 30 ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಶೇಕಡಾ 80ಕ್ಕೆ ವೃದ್ಧಿಯಾಗಲಿದೆ. ಪ್ರಸ್ತಾವಿತ ಸ್ಮಾರ್ಟ್ ಫ್ಯಾಕ್ಟರಿ ಮೂರು ವಿಭಿನ್ನ ರೀತಿಯ ಉತ್ಪಾದನಾ ಸಾಮರ್ಥ್ಯಗಳ ಒಕ್ಕೂಟವಾಗಿದೆ ಎಂದು ಕಂಪನಿ ಹೇಳಿದೆ.
2026ರ ವೇಳೆಗೆ 5,200 ಕೋಟಿ ರೂ. ಮಾರಾಟದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಉತ್ಪಾದನೆ ಹೆಚ್ಚಿಸುವುದು ಮಾರಾಟದ ಗುರಿಗೆ ಪೂರಕವಾಗಿರಲಿದೆ ಎಂದು ಕಂಪನಿಯ ಜಾಗತಿಕ ಪೂರೈಕೆ ವಿಭಾಗದ ಹಿರಿಯ ಉಪಾಧ್ಯಕ್ಷ ಜಾವೇದ್ ಅಹ್ಮದ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Thu, 22 December 22