UPI Rules Change: ವಹಿವಾಟು ಮಿತಿಯಿಂದ ಎಟಿಎಂವರೆಗೆ, ಜನವರಿ 1ರಿಂದ ಯುಪಿಐ ಹೊಸ ನಿಯಮಗಳು ಜಾರಿಗೆ ಬರಲಿವೆ; ತಿಳಿದಿರಿ

|

Updated on: Jan 01, 2024 | 2:44 PM

Unified Payment Interface, New Updates: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಯುಪಿಐನಲ್ಲಿ ಕಾಲ ಕಾಲಕ್ಕೆ ಸುಧಾರಣೆಗಳು ಮತ್ತು ನಿಯಮ ಬದಲಾವಣೆಗಳು ಆಗುತ್ತಿರುತ್ತವೆ. ಒಂದು ವರ್ಷದಿಂದ ಸಕ್ರಿಯ ಇಲ್ಲದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ 2024ರ ಜನವರಿ 1ರಿಂದ ನಡೆಯಲಿದೆ. ಅಚಾತುರ್ಯದಿಂದ ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿ ಕಳೆದುಕೊಳ್ಳುವುದನ್ನು ತಪ್ಪಿಸಲು ನಾಲ್ಕು ಗಂಟೆ ಕಾಲಮಿತಿ ನಿಯಮ ತರಲಾಗಿದೆ.

UPI Rules Change: ವಹಿವಾಟು ಮಿತಿಯಿಂದ ಎಟಿಎಂವರೆಗೆ, ಜನವರಿ 1ರಿಂದ ಯುಪಿಐ ಹೊಸ ನಿಯಮಗಳು ಜಾರಿಗೆ ಬರಲಿವೆ; ತಿಳಿದಿರಿ
ಯುಪಿಐ
Follow us on

ಜನವರಿ 1: ಭಾರತದಲ್ಲಿ ಜಾರಿಯಲ್ಲಿರುವ ಹಲವು ಪಾವತಿ ವ್ಯವಸ್ಥೆಗಳಲ್ಲಿ ಯುಪಿಐ (UPI- Unified Payment Interface) ಕಳೆದ ಮೂರ್ನಾಲ್ಕು ವರ್ಷಗಳಿಂದ ಅತೀವ ಜನಪ್ರಿಯತೆ ಪಡೆದುಕೊಂಡಿದೆ. ಸಣ್ಣ ಮೊತ್ತದ ವಹಿವಾಟು ಬಹುತೇಕ ಯುಪಿಐನಲ್ಲೇ ನಡೆಯುತ್ತದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಸಹಕಾರಿಯಾಗಿರುವ ಯುಪಿಐ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಅಭಿವೃದ್ಧಿಪಡಿಸಿದೆ. ಯುಪಿಐ ವ್ಯಾಪ್ತಿ ಮತ್ತು ಕ್ರಮದಲ್ಲಿ ಸುಧಾರಣೆ ಮತ್ತು ಬದಲಾವಣೆಗಳನ್ನು ಆಗಾಗ್ಗೆ ಮಾಡಲಾಗುತ್ತಿರುತ್ತದೆ. ಕೆಲ ಪ್ರಮುಖ ಬದಲಾವಣೆಗಳು ಇವತ್ತಿನಿಂದ (ಜನವರಿ 1) ಚಾಲನೆಗೆ ಬರುತ್ತಿವೆ.

ಯುಪಿಐ ವಹಿವಾಟು ಮಿತಿ ಹೆಚ್ಚಳ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ಒಂದು ದಿನದಲ್ಲಿ ನಡೆಸಬಹುದಾದ ಯುಪಿಐ ವಹಿವಾಟಿಗೆ ಇರುವ ಮಿತಿಯನ್ನು 1 ಲಕ್ಷ ರೂಗೆ ಏರಿಸಿದೆ. ಅಂದರೆ ಯುಪಿಐ ಮೂಲಕ ದಿನಕ್ಕೆ ಒಂದು ಲಕ್ಷ ರೂವರೆಗೆ ವಹಿವಾಟು ನಡೆಸಬಹುದು.

ಹಾಗೆಯೇ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಯುಪಿಐ ವಹಿವಾಟು ಮಿತಿಯನ್ನು ಒಂದು ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಯುಪಿಐ ಇಂಟರ್​ಚೇಂಜ್ ಫೀ

ಆನ್ಲೈನ್ ವ್ಯಾಲಟ್ ಇತ್ಯಾದಿ ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್​ಗಳ ಮೂಲಕ ನಡೆಸಲಾದ ವಹಿವಾಟಿಗೆ, ಹಾಗು ಎರಡು ಸಾವಿರ ರೂ ಮೀರುವ ನಿರ್ದಿಷ್ಟ ವರ್ತಕ ಯುಪಿಐ ವಹಿವಾಟಿಗೆ ಶೇ. 1.1ರಷ್ಟು ಇಂಟರ್​ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ.

ಇದನ್ನೂ ಓದಿ: UPA vs NDA: ಯುಪಿಎ 10 ವರ್ಷದ ಆಡಳಿತ ಮತ್ತು ಎನ್​ಡಿಎ 10 ವರ್ಷದ ಆಡಳಿತ; ಹಣಕಾಸು ಆದ್ಯತೆಗಳಲ್ಲಿ ಏನು ವ್ಯತ್ಯಾಸ?

ನಾಲ್ಕು ಗಂಟೆಯ ಕಾಲಮಿತಿ

ಅಚಾತುರ್ಯದಿಂದ ತಪ್ಪಾದ ಯುಪಿಐ ಐಡಿಗೆ ಅಥವಾ ನಂಬರ್​ಗೆ ಹಣ ಕಳುಹಿಸಿ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದನ್ನು ತಪ್ಪಿಸಲು ಯುಪಿಐ ವಹಿವಾಟಿಗೆ ನಾಲ್ಕು ಗಂಟೆ ಕಾಲಮಿತಿ ಕ್ರಮ ಹಾಕಲಾಗಿದೆ. ಇದು ಮೊದಲ ಬಾರಿಗೆ ಒಂದು ಯುಪಿಐ ಐಡಿ ಜೊತೆ ಮಾಡಲಾಗುವ 2,000 ರೂಗೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಅನ್ವಯ ಆಗುತ್ತದೆ. ಅಂದರೆ, ನೀವು ಕಳುಹಿಸಿದ ಹಣವನ್ನು ಹಿಂಪಡೆಯಲು 4 ಗಂಟೆಯವರೆಗೆ ಕಾಲಾವಕಾಶ ಇರುತ್ತದೆ.

ಯುಪಿಐ ಎಟಿಎಂ

ಎಟಿಎಂಗಳಲ್ಲಿ ಕ್ಯುಅರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ವಿತ್​ಡ್ರಾ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ದೇಶಾದ್ಯಂತ ಹಲವು ಎಟಿಎಂಗಳಲ್ಲಿ ಈ ಫೆಸಿಲಿಟಿ ಜಾರಿಗೆ ಬರಲಿದೆ. ಇದರೊಂದಿಗೆ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಕಾರ್ಡ್ ಬಳಸಬೇಕಾದ ಅಗತ್ಯತೆ ಇರುವುದಿಲ್ಲ.

ಇದನ್ನೂ ಓದಿ: Financial Changes: ಬ್ಯಾಂಕ್ ಲಾಕರ್​ನಿಂದ ಸಿಮ್ ಕಾರ್ಡ್​ವರೆಗೆ, ಜ. 1ರಿಂದ ಆಗುವ ಈ ಹಣಕಾಸು ಬದಲಾವಣೆಗಳು ತಿಳಿದಿರಲಿ

ನಿಷ್ಕ್ರಿಯ ಯುಪಿಐ ಐಡಿಗಳ ರದ್ದು

ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಕೆಯಾಗದೇ ಇರುವ ಯುಪಿಐ ಐಡಿ ಮತ್ತು ನಂಬರ್​ಗಳನ್ನು ಡಿಸೇಬಲ್ ಮಾಡಲಾಗುತ್ತದೆ. ಪೇಟಿಎಂ, ಗೂಗಲ್ ಪೇ, ಫೋನ್​ಪೆ ಇತ್ಯಾದಿ ಪೇಮೆಂಟ್ ಆ್ಯಪ್​ಗಳು ಮತ್ತು ಬ್ಯಾಂಕುಗಳಿಗೆ ಎನ್​ಪಿಸಿಐನಿಂದ ನಿರ್ದೇಶನ ಹೋಗಿದೆ. ಈ ಪ್ರಕ್ರಿಯೆ ಇವತ್ತಿನಿಂದಲೇ ಚಾಲನೆಗೆ ಬರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ