ನವದೆಹಲಿ: ಸಕ್ಕರೆ ರಫ್ತಿನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು (Sugar Export Ban) ಕೇಂದ್ರ ಸರ್ಕಾರ 2023ರ ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಪ್ರಮಾಣ ಹೆಚ್ಚಿಸುವುದು ಮತ್ತು ಬೆಲೆ ಏರಿಕೆ ತಡೆಯುವುದಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಹಿಂದೆ ಈ ವರ್ಷ ಅಕ್ಟೋಬರ್ 31ರ ವರೆಗೆ ಸಕ್ಕರೆ ರಫ್ತಿನ ಮೇಲೆ ಕೇಂದ್ರ ನಿರ್ಬಂಧ ಹೇರಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಹಿಂದಿನ ಅಧಿಸೂಚನೆಯಲ್ಲಿ ಸರ್ಕಾರ ತಿಳಿಸಿತ್ತು.
‘ಸಕ್ಕರೆಯ ರಫ್ತಿನ ಮೇಲೆ (ಕಚ್ಚಾ, ಸಂಸ್ಕರಿತ ಹಾಗೂ ಬಿಳಿ ಸಕ್ಕರೆ) ವಿಧಿಸಲಾಗಿದ್ದ ನಿರ್ಬಂಧವನ್ನು 2023ರ ಅಕ್ಟೋಬರ್ 31ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ವಿಸ್ತರಿಸಲಾಗಿದೆ. ಇತರ ಷರತ್ತುಗಳು ಈಗಿರುವಂತೆಯೇ ಮುಂದುವರಿಯಲಿವೆ’ ಎಂದು ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯದ (DGFT) ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಯುರೋಪ್, ಅಮೆರಿಕಕ್ಕೆ ರಫ್ತು ಮಾಡಬಹುದು
ಸಿಎಲ್ಕ್ಯೂ ಹಾಗೂ ಟಿಆರ್ಕ್ಯೂ (ಟಾರಿಫ್ ರೇಟ್ ಕೋಟಾ) ತೆರಿಗೆ ವಿನಾಯಿತಿ ಕೋಟಾ ಅಡಿಯಲ್ಲಿ ಬರುವ, ಯುರೋಪ್ ಒಕ್ಕೂಟ, ಅಮೆರಿಕಗಳಿಗೆ ರಫ್ತು ಮಾಡುವುದಕ್ಕೆ ಈ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದೂ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಕ್ಕರೆ ರಫ್ತಿಗೆ ಭಾರತ ಸರ್ಕಾರ ನಿರ್ಬಂಧ: ಕಳೆದ 6 ವರ್ಷಗಳಲ್ಲಿ ಇದೇ ಮೊದಲು
ಭಾರತವು ವಿಶ್ವದಲ್ಲೇ ಅತಿಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ದೇಶವಾಗಿದ್ದು, ಎರಡನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ನಿರ್ಬಂಧಿತ ಪಟ್ಟಿಯಲ್ಲಿರುವ ದೇಶಗಳಿಗೆ ರಫ್ತು ಮಾಡಬೇಕಿದ್ದರೆ ಸರ್ಕಾರದಿಂದ ಪರವಾನಗಿ ಪಡೆಯಬೇಕಿದೆ.
3.65 ಕೋಟಿ ಟನ್ ಉತ್ಪಾದನೆ ನಿರೀಕ್ಷೆ
2022-23ನೇ ಮಾರುಕಟ್ಟೆ ಅವಧಿಯಲ್ಲಿ ದೇಶದಲ್ಲಿ 3.65 ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 2ರಷ್ಟು ಹೆಚ್ಚಾಗಿದೆ ಎಂದು ‘ಭಾರತೀಯ ಸಕ್ಕರೆ ಮಿಲ್ಲುಗಳ ಸಂಘ’ ತಿಳಿಸಿದೆ.
2021-22ರ ಅಕ್ಟೋಬರ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಸಕ್ಕರೆ ಉತ್ಪಾದನೆ 3.58 ಕೋಟಿ ಟನ್ ಆಗಿತ್ತು. ಎಥೆನಾಲ್ ಉತ್ಪಾದನೆಗೆ ಬೇಡಿಕೆಯ ಹೊರತಾಗಿಯೂ ಈ ಬಾರಿ 90 ಲಕ್ಷ ಟನ್ ಸಕ್ಕರೆ ರಫ್ತಾಗಬಹುದು ಎಂದು ಸಂಘ ಅಂದಾಜಿಸಿದೆ.
ಒಟ್ಟು ಉತ್ಪಾದನೆಯ 45 ಲಕ್ಷ ಟನ್ ಕಬ್ಬನ್ನು ಕಬ್ಬಿನ ಹಾಲು / ಸಿರಪ್ ಹಾಗೂ ಎಥೆನಾಲ್ಗೆ ವ್ಯಯಿಸಿದ ಹೊರತಾಗಿಯೂ 2022-23ನೇ ಸಾಲಿನಲ್ಲಿ 3.65 ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಜನವರಿಯಲ್ಲಿ ‘ಭಾರತೀಯ ಸಕ್ಕರೆ ಮಿಲ್ಲುಗಳ ಸಂಘ’ ಮೊದಲ ಅಂದಾಜು ವರದಿಯನ್ನು ಪ್ರಕಟಿಸಿತ್ತು.
ಉತ್ಪಾದನೆ, ಬಳಕೆ, ರಫ್ತು, ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಬೆಲೆ ಪ್ರವೃತ್ತಿಗಳೂ ಸೇರಿದಂತೆ ಸಕ್ಕರೆ ಉತ್ಪಾದನೆ ವಲಯಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಇದರ ಉಪಕ್ರಮವಾಗಿಯೇ ರಫ್ತಿನ ಮೇಲಿನ ನಿರ್ಬಂಧವನ್ನು ವಿಸ್ತರಣೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ