ನವದೆಹಲಿ, ಡಿಸೆಂಬರ್ 22: ಜಿಎಸ್ಟಿ ಕೌನ್ಸಿಲ್ನಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಣ್ಣ ಉದ್ದಿಮೆಗಳಿಗೆ ಜಿಎಸ್ಟಿ ರಿಜಿಸ್ಟ್ರೇಶನ್ಗೆ ಇದ್ದ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಟ್ರೈನಿಂಗ್ ಪಾರ್ಟ್ನರ್ಸ್ಗೆ ತೆರಿಗೆ ವಿನಾಯಿತಿ, ಇವಿಗಳಿಗೆ ತೆರಿಗೆ ಇಳಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ನಡೆದ 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕಾನ್ಸೆಪ್ಟ್ ನೋಟ್ಗೆ ಅನುಮೋದನೆ ಸಿಕ್ಕಿದೆ. ಜಿಎಸ್ಟಿ ನೊಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಕಾನ್ಸೆಪ್ಟ್ ನೋಟ್ ಅನುಕೂಲವಾಗಲಿದೆ.
ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಕೌಶಲ್ಯವಂತ ಟ್ರೈನಿಂಗ್ ಪಾರ್ಟ್ನರ್ಸ್ಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುತ್ತಿರುವುದನ್ನು ಹಣಕಾಸು ಸಚಿವೆ ತಿಳಿಸಿದ್ದಾರೆ. ಈ ವಿನಾಯಿತಿ ಕ್ರಮವನ್ನು ಅಧಿಕೃತವಾಗಿ ಪ್ರಕಟಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಎಷ್ಟು ಥರದ ಇಟಿಎಫ್ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಜಿಎಸ್ಟಿ ಸಭೆಯಲ್ಲಿ ಕಾಂಪೆನ್ಸೇಶನ್ ಸೆಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇತ್ತು. ಈ ಬಗ್ಗೆ ಮಾತನಾಡಿದ ಸಚಿವರು, ಈ ಸೆಸ್ ವಿಚಾರ ಇತ್ಯರ್ಥಪಡಿಸಲು ಗ್ರೂಪ್ ಆಫ್ ಮಿನಿಸ್ಟರ್ಸ್ ತಂಡಕ್ಕೆ ಯಾವುದೆ ಕಾಲಮಿತಿ ನಿಗದಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಂದರೆ ಕಾಂಪೆನ್ಸೇಶನ್ ಸೆಸ್ನಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
ಎಸ್ಯುವಿಗಳಿಗೆ ಹಿಮ್ಮುಖವಾಗಿ ಕಾಂಪೆನ್ಸೇಶನ್ ಸೆಸ್ ಅನ್ನು ಹಾಕಬೇಕೋ ಬೇಡವೋ ಎಂಬ ಗೊಂದಲ ಇದೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಪ್ರಕಾರ ಹಿಮ್ಮುಖವಾಗಿ ಸೆಸ್ ವಿಧಿಸುವುದರ ಬದಲು ಘೋಷಣೆ ದಿನಾಂಕದಿಂದ ಸೆಸ್ ಜಾರಿಗೆ ಬರಬಹುದು ಎನ್ನಲಾಗಿದೆ.
ಇವಿಗಳಿಗೆ ಶೇ. 5ರಷ್ಟು ಜಿಎಸ್ಟಿ
ಹೊಸ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 5ರಷ್ಟು ಜಿಎಸ್ಟಿ ಹಾಕಲು ನಿರ್ಧರಿಸುತ್ತಿರುವುದಾಗಿ ಸಚಿವೆ ತಿಳಿಸಿದ್ದಾರೆ. ಆದರೆ, ವ್ಯಕ್ತಿಯಿಂದ ವ್ಯಕ್ತಿ ನಡುವೆ ಮಾರಾಟವಾಗುವ ಇವಿಗಳಿಗೆ (ಸೆಕೆಂಡ್ ಹ್ಯಾಡ್ ವಾಹನ) ಯಾವುದೇ ಜಿಎಸ್ಟಿ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 2024ರಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದ ದೇಶಗಳಲ್ಲಿ ಭಾರತ ಮೊದಲು; 129 ಬಿಲಿಯನ್ ಡಾಲರ್ ರೆಮಿಟೆನ್ಸ್ ಹರಿವು
ಇದೇ ವಿಚಾರದಲ್ಲಿ ಮತ್ತೊಂದು ಸಂಗತಿ ಎಂದರೆ, ಸೆಕೆಂಡ್ ಹ್ಯಾಂಡ್ ಇವಿಗಳನ್ನು ಕಂಪನಿಗಳು ಖರೀದಿಸಿ ನಂತರ ಮಾರಿದರೆ ಅಂಥ ವಾಹನಗಳ ಲಾಭದ ಹಣಕ್ಕೆ ಶೇ. 18ರಷ್ಟು ಜಿಎಸ್ಟಿ ಇರುತ್ತದೆ. ಅಥವಾ ಹಳೆಯ ಇವಿಗಳನ್ನು ಖರೀದಿಸಿ ಅದನ್ನು ಮಾರ್ಪಡಿಸಿ ಮಾರಿದಾಗಲೂ ಇದೇ ರೀತಿ ಲಾಭದ ಮೇಲೆ ಶೇ. 18ರಷ್ಟು ಜಿಎಸ್ಟಿ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ