2024ರಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದ ದೇಶಗಳಲ್ಲಿ ಭಾರತ ಮೊದಲು; 129 ಬಿಲಿಯನ್ ಡಾಲರ್ ರೆಮಿಟೆನ್ಸ್ ಹರಿವು
2024ರಲ್ಲಿ ಭಾರತಕ್ಕೆ ಅತಿಹೆಚ್ಚು ರೆಮಿಟೆನ್ಸ್ ಬಂದಿದೆ. ವಿಶ್ವಬ್ಯಾಂಕ್ ಆರ್ಥಿಕ ತಜ್ಞರ ಬ್ಲಾಗ್ ಪೋಸ್ಟ್ವೊಂದರ ಪ್ರಕಾರ ಈ ವರ್ಷ ಭಾರತಕ್ಕೆ 129 ಬಿಲಿಯನ್ ಡಾಲರ್ ರೆಮಿಟೆನ್ಸ್ ಬಂದಿದೆ. ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರು ಇಷ್ಟು ಹಣವನ್ನು ತಮ್ಮ ಊರುಗಳಿಗೆ ಕಳುಹಿಸಿದ್ದಾರೆ. ಮೆಕ್ಸಿಕೋ, ಚೀನಾ, ಫಿಲಿಪ್ಪೈನ್ಸ್, ಪಾಕಿಸ್ತಾನ, ಬಾಂಗ್ಲಾದೇಶಗಳ ಮೊದಲಾದ ದೇಶಗಳಿಗೂ ಹೆಚ್ಚು ರೆಮಿಟೆನ್ಸ್ ಬಂದಿದೆ.
ನವದೆಹಲಿ, ಡಿಸೆಂಬರ್ 19: ಈ ಕ್ಯಾಲಂಡರ್ ವರ್ಷದಲ್ಲಿ ಅತಿಹೆಚ್ಚು ರಿಮಿಟೆನ್ಸ್ (remittance) ಪಡೆದ ದೇಶಗಳಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ. ವಿಶ್ವಬ್ಯಾಂಕ್ ವರದಿಯೊಂದರ (world bank economists blog post) ಪ್ರಕಾರ ಭಾರತಕ್ಕೆ 2024ರಲ್ಲಿ 129 ಬಿಲಿಯನ್ ಡಾಲರ್ನಷ್ಟು ರಿಮಿಟೆನ್ಸ್ ಬಂದಿದೆ. ಅಂದರೆ, ವಿದೇಶಗಳಲ್ಲಿ ನೆಲಸಿರುವ ಭಾರತೀಯ ಸಮುದಾಯವರು ತಮ್ಮ ತವರೂರುಗಳಿಗೆ ಕಳುಹಿಸಿರುವ ಹಣ 2024ರಲ್ಲಿ ಸುಮಾರು 9-10 ಲಕ್ಷ ಕೋಟಿ ರೂನಷ್ಟಿದೆ. ಮೆಕ್ಸಿಕೋ, ಚೀನಾ, ಫಿಲಿಪ್ಪೈನ್ಸ್ ಮತ್ತು ಪಾಕಿಸ್ತಾನವೂ ಕೂಡ ಹೆಚ್ಚು ರಿಮಿಟೆನ್ಸ್ ಪಡೆದ ದೇಶಗಳ ಸಾಲಿನಲ್ಲಿವೆ.
ಬೇರೆ ಬೇರೆ ದೇಶಗಳಿಗೆ ಹಣ ರವಾನೆಯಾಗುವುದು ಈ ವರ್ಷ ಶೇ. 5.8ರಷ್ಟು ಹೆಚ್ಚಾಗಿದೆ. ಅಧಿಕ ಆದಾಯದ ದೇಶಗಳಲ್ಲಿ ಉದ್ಯೋಗ ಮಾರುಕಟ್ಟೆ ಚೇತರಿಸಿಕೊಂಡಿರುವುದು ಹಣ ರವಾನೆಗೆ ಪುಷ್ಟಿ ಕೊಟ್ಟಿರಬಹುದು ಎಂದು ವಿಶ್ವಬ್ಯಾಂಕ್ ಆರ್ಥಿಕತಜ್ಞರ ಬ್ಲಾಗ್ ಪೋಸ್ಟ್ವೊಂದರಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಈ ಸೀಸನ್ನಲ್ಲಿ 8,126 ಕೋಟಿ ರೂ ಪಾವತಿ
2024ರಲ್ಲಿ ಕೆಳ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಧಿಕೃತವಾಗಿ ಆಗುವ ಹಣ ರವಾನೆ ಅಥವಾ ರೆಮಿಟೆನ್ಸ್ 685 ಬಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಈ ದೇಶಗಳಿಗೆ ವಿದೇಶಗಳಿಂದ ಹರಿದುಬರುವ ಹಣದಲ್ಲಿ ರೆಮಿಟೆನ್ಸ್ ಪಾಲು ಅತಿ ಹೆಚ್ಚು ಎನ್ನಲಾಗಿದೆ. ಎಫ್ಡಿಐಗಿಂತಲೂ ಹೆಚ್ಚು ಮೊತ್ತದ ಹಣ ರೆಮಿಟೆನ್ಸ್ ಮೂಲಕ ಈ ದೇಶಗಳಿಗೆ ಹರಿದುಬರುತ್ತದೆ. ಕಳೆದ ದಶಕದಲ್ಲಿ ರೆಮಿಟನ್ಸ್ ಪ್ರಮಾಣದಲ್ಲಿ ಶೇ. 57ರಷ್ಟು ಹೆಚ್ಚಳ ಆಗಿದೆ. ಅದೇ ವೇಳೆ ಎಫ್ಡಿಐನಲ್ಲಿ ಶೇ. 41ರಷ್ಟು ಇಳಿಕೆ ಆಗಿದೆ.
ಈ ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಜನಸಂಖ್ಯಾ ಬಲ ಇದ್ದು, ಶ್ರೀಮಂತ ದೇಶಗಳಲ್ಲಿ ಕೆಲಸ ಮಾಡಲು ಜನರು ವಲಸೆ ಹೋಗುವುದು ಸಾಮಾನ್ಯ.
ಇದನ್ನೂ ಓದಿ: ಭಾರತ್ ಮಾಲಾ ಯೋಜನೆಯಡಿ ಅ. 31ರವರೆಗೆ 18,714 ಕಿಮೀ ಹೆದ್ದಾರಿಗಳ ನಿರ್ಮಾಣ: ಸರ್ಕಾರದಿಂದ ಮಾಹಿತಿ
2024ರಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದ ದೇಶಗಳು
- ಭಾರತ: 129 ಬಿಲಿಯನ್ ಡಾಲರ್
- ಮೆಕ್ಸಿಕೋ: 68 ಬಿಲಿಯನ್ ಡಾಲರ್
- ಚೀನಾ: 48 ಬಿಲಿಯನ್ ಡಾಲರ್
- ಫಿಲಿಪ್ಪೈನ್ಸ್: 40 ಬಿಲಿಯನ್ ಡಾಲರ್
- ಪಾಕಿಸ್ತಾನ್: 33 ಬಿಲಿಯನ್ ಡಾಲರ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ