ಭಾರತ್ ಮಾಲಾ ಯೋಜನೆಯಡಿ ಅ. 31ರವರೆಗೆ 18,714 ಕಿಮೀ ಹೆದ್ದಾರಿಗಳ ನಿರ್ಮಾಣ: ಸರ್ಕಾರದಿಂದ ಮಾಹಿತಿ
Bharatmala Pariyojana implementation: ಭಾರತ್ಮಾಲಾ ಪರಿಯೋಜನೆ ಅಡಿಯಲ್ಲಿ ಅ. 31ರವರೆಗೆ 18,714 ಕಿಮೀ ರಾಹೆ ನಿರ್ಮಾಣ ಆಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. 2017ರಲ್ಲಿ ಆರಂಭವಾದ ಭಾರತ್ಮಾಲಾ ಯೋಜನೆಯಲ್ಲಿ ವಿವಿಧ ಪ್ರದೇಶಗಳ ನಡುವೆ ಸಂಪರ್ಕಜಾಲ ಗಟ್ಟಿಗೊಳಿಸುವ ಗುರಿ ಇದೆ. ಕರಾವಳಿ ರಾಜ್ಯಗಳಲ್ಲಿನ ವಿವಿಧ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಜಾಲವನ್ನೂ ಗಟ್ಟಿಗೊಳಿಸಲಾಗುತ್ತಿದೆ.
ನವದೆಹಲಿ, ಡಿಸೆಂಬರ್ 19: ಭಾರತಮಾಲ ಪರಿಯೋಜನಾ ಸ್ಕೀಮ್ ಅಡಿಯಲ್ಲಿ ಮಾಡಲಾಗುತ್ತಿರುವ 26,425 ಕಿಮೀವರೆಗಿನ ಹೆದ್ದಾರಿ ಪೈಕಿ ಅಕ್ಟೋಬರ್ 31ರವರೆಗೆ 18,714 ಕಿಮೀಯಷ್ಟು ಹೆದ್ದಾರಿಯ ನಿರ್ಮಾಣವಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಮಾಹಿತಿಯನ್ನು ಸಂಸತ್ತಿಗೆ ನೀಡಿದ್ದಾರೆ. 2024ರ ಅಕ್ಟೋಬರ್ 30ರವರೆಗೆ ಭಾರತ್ಮಾಲ ಪರಿಯೋಜನೆ ಅಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 4.72 ಲಕ್ಷ ಕೋಟಿ ರೂ ಹೂಡಿಕೆ ಮಾಡಿದೆ ಎಂದು ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2017ರಲ್ಲಿ ಆರಂಭವಾದ ಭಾರತ್ಮಾಲ ಪರಿಯೋಜನೆಯು ದೇಶದಲ್ಲಿ ವಿವಿಧ ಪ್ರದೇಶಗಳ ನಡುವಿನ ಸಂಪರ್ಕತೆ ಹೆಚ್ಚಿಸಲು ಮತ್ತು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಈ ಯೋಜನೆ ಅಡಿ 34,800 ಕಿಮೀಯಷ್ಟು ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಅನುಮೋದನೆ ಇದೆ. ನಿತಿನ್ ಗಡ್ಕರಿ ನೀಡಿದ ಮಾಹಿತಿ ಪ್ರಕಾರ ಬಂದರು ಮತ್ತು ಕರಾವಳಿ ಸಂಪರ್ಕ ರಸ್ತೆಗಳ ವಿಭಾಗದಲ್ಲಿ 18 ಪ್ರಾಜೆಕ್ಟ್ಗಳು ಚಾಲನೆಯಲ್ಲಿದ್ದು, ಒಟ್ಟಾರೆ 424 ಕಿಮೀ ಉದ್ದದ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈ ಪೈಕಿ ಇಲ್ಲಿಯವರೆಗೆ 189 ಕಿಮೀಯಷ್ಟು ರಸ್ತೆ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಏ. 1ರಿಂದ ಡಿ. 17ರವರೆಗೆ ನೇರ ತೆರಿಗೆ ಸಂಗ್ರಹ 19,21,508 ಕೋಟಿ ರೂ
ಈಶಾನ್ಯ ಭಾರತದ ಭಾಗದಲ್ಲಿ 81,540 ಕೋಟಿ ರೂ ವೆಚ್ಚದ 190 ಯೋಜನೆಗಳಲ್ಲಿ 3,856 ಕಿಮೀಯಷ್ಟು ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 2024-25ರ ಸಾಲಿನಲ್ಲಿ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆಂದು 19,338 ಕೋಟಿ ರೂ ಮೀಸಲಿಡಲಾಗಿದೆ. ಈಗಾಗಲೇ ಆರಂಭವಾಗಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳು 2028ರ ಸೆಪ್ಟಂಬರ್ನೊಳಗೆ ಪೂರ್ಣಗೊಳ್ಳಲು ಯೋಜಿಸಲಾಗಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ,. ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ಕರಾವಳಿ ರಾಜ್ಯಗಳಲ್ಲಿನ ದೊಡ್ಡ ಬಂದರು, ಸಣ್ಣ ಬಂದರು ಸೇರಿದಂತೆ ವಿವಿಧ ಪೋರ್ಟ್ಗಳಿಗೆ ಸಂಪರ್ಕ ವ್ಯವಸ್ಥೆ ಬಲಪಡಿಸಲು ಭಾರತ್ಮಾಲ ಯೋಜನೆ ಅಡಿ ಹಲವಾರು ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕಕ್ಕೆ ಮತ್ತೊಮ್ಮೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಈ ಯೋಜನೆಗಳನ್ನು ಸಮರ್ಪಕವಾಗಿ ಮತ್ತು ವೇಗವಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳ ಮಧ್ಯೆ ನಿಕಟ ಸಮನ್ವಯ ನಡೆಯುತ್ತಿದೆ. ವಿವಿಧ ಹಂತಗಳಲ್ಲಿ ಕಾಮಗಾರಿಗಳ ಪರಿಶೀಲನೆ, ಪರಾಮರ್ಶೆ ನಡೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ