How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?

ಒಬ್ಬ ಉದ್ಯೋಗಿ ಎಷ್ಟು ಉದ್ಯೋಗ ಬದಲಾಯಿಸಬಹುದು, ಇಪಿಎಫ್​ ಖಾತೆಯ ಗುರುತಿನ ಸಂಖ್ಯೆ ಬದಲಾಗಬಹುದು. ಆದರೆ ಯುಎಎನ್ (ಯೂನಿಕ್ ಐಡೆಂಟಿಫಿಕೇಷನ್ ನಂಬರ್) ಒಂದೇ ಇರಬೇಕು. ಒಂದು ವೇಳೆ ಎರಡಿದ್ದಲ್ಲಿ ಅದು ನಿಯಮ ಬಾಹಿರ ಆಗುತ್ತದೆ. ಹಾಗಾಗಿದ್ದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ವಿವರವಾದ ಮಾಹಿತಿ ಈ ಲೇಖನದಲ್ಲಿದೆ.

How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 28, 2021 | 12:04 PM

ಉದ್ಯೋಗಿಗಳ ನಿವೃತ್ತಿ ಬದುಕಿಗಾಗಿ ಸಾಮಾಜಿಕ ಭದ್ರತೆಯಂತೆ ಇರುವುದು ಪ್ರಾವಿಡೆಂಟ್ ಫಂಡ್ (ಕಾರ್ಮಿಕರ ಭವಿಷ್ಯ ನಿಧಿ). ಇಂಥ ಪ್ರಾವಿಡೆಂಟ್ ಫಂಡ್ ಖಾತೆಯ ಜತೆಗೆ ಪ್ರತಿ ಉದ್ಯೋಗಿಗೂ ಇಪಿಎಫ್​ಒದಿಂದ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್) ಯೂನಿವರ್ಸಲ್ ಐಡಿಂಟಿಫಿಕೇಷನ್ ನಂಬರ್ (ಯುಎಎನ್) ನೀಡಲಾಗುತ್ತದೆ. ಹೀಗೆ ನೀಡುವುದರಿಂದ ಒಬ್ಬ ವ್ಯಕ್ತಿಯ ಉದ್ಯೋಗವನ್ನು ಬದಲಾವಣೆ ಮಾಡಿದರೂ ಈ ಯುಎಎನ್​ನಲ್ಲಿ ಬದಲಾವಣೆ ಆಗಲ್ಲ. ಹೊಸದಾಗಿ ಕೆಲಸಕ್ಕೆ ಸೇರಿದಾಗ ಇಪಿಎಫ್​ಒದಿಂದ ಹೊಸ ಸದಸ್ಯತ್ವ ಗುರುತಿನ ಸಂಖ್ಯೆಯನ್ನು ಪಿಎಫ್ ಅಕೌಂಟ್​ಗೆ ವಿತರಿಸಲಿದ್ದು, ಅದು ಈಗಾಗಲೇ ಇರುವ ಯುಎಎನ್​ ಜತೆಗೆ ಜೋಡಣೆ ಆಗಿರುತ್ತದೆ. ಒಬ್ಬ ಉದ್ಯೋಗಿ ಎಷ್ಟು ಉದ್ಯೋಗವನ್ನು ಬದಲಾವಣೆ ಮಾಡಿಯೂ ವಿವಿಧ ಖಾತೆಗಳನ್ನು ಹೊಂದಿದ್ದರೂ ಅವೆಲ್ಲವೂ ಒಂದೇ ಯುಎಎನ್ ಅಡಿಯಲ್ಲಿ ಬರುತ್ತವೆ. ಉದ್ಯೋಗದಾತರು ಬೇರೆಯವರಾಗಬಹುದು, ಆದರೆ ಯುಎಎನ್ ಒಂದೇ ಇರುತ್ತದೆ. ಆ ಮೂಲಕ ಸದಸ್ಯರಿಗೆ ತಮ್ಮ ಪಿಎಫ್​ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಒಂದೇ ಕಡೆ ಸಿಗುತ್ತದೆ.

ಯುಎಎನ್​ ಹೋಮ್​ಪೇಜ್​ಗೆ ತೆರಳಿ ಆನ್​ಲೈನ್​ನಲ್ಲೇ ಪಿಎಫ್​ ಖಾತೆಯ ಪಾಸ್​ಬುಕ್ ಡೌನ್​ಲೋಡ್​ ಮಾಡಬಹುದು, ವರ್ಗಾವಣೆ ಮನವಿ ಮತ್ತು ಹೊಂದಾಣಿಕೆ (ಅಡ್ಜಸ್ಟ್​ಮೆಂಟ್ಸ್) ಕೂಡ ಮಾಡಬಹುದು. ಈಗಾಗಲೇ ಯುಎಎನ್​​ ಇದೆ ಎಂದಿಟ್ಟುಕೊಳ್ಳೋಣ. ಹೊಸದಾಗಿ ಕೆಲಸಕ್ಕೆ ಸೇರಿದಾಗ ಅಲ್ಲಿ ಅದನ್ನು ತಿಳಿಸಿದರೆ, ಈಗಾಗಲೇ ಇರುವ ಯುಎಎನ್​ ಜತೆಗೆ ಸದಸ್ಯತ್ವ ಗುರುತಿನ ಐ.ಡಿ. ಜೋಡಣೆ ಮಾಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಉದ್ಯೋಗಿಗೆ ಹೊಸ ಯುಎಎನ್ ವಿತರಿಸಲಾಗುತ್ತದೆ. ಈ ಹಿಂದೆ ಉದ್ಯೋಗ ಮಾಡುತ್ತಿದ್ದ ಸ್ಥಳದಲ್ಲಿ ಕೆಲಸ ಬಿಟ್ಟ ದಿನವನ್ನು ಅಪ್​ಡೇಟ್​ ಉದ್ಯೋಗದಾತರು ಮಾಡದಿದ್ದಾಗ ಹಾಗೂ/ಅಥವಾ ಉದ್ಯೋಗಿಯು ತನ್ನ ಯುಎಎನ್​ ಬಗ್ಗೆ ಹೊಸದಾಗಿ ಕೆಲಸಕ್ಕೆ ಸೇರಿದ ಸ್ಥಳದಲ್ಲಿ ಮಾಹಿತಿ ನೀಡದಿದ್ದಾಗ ಈ ಎರಡೂ ಸಂದರ್ಭದಲ್ಲಿ ಎರಡು ಯುಎಎನ್ ವಿತರಣೆ ಆದಂತಾಗುತ್ತದೆ. ಆದ್ದರಿಂದ ಉದ್ಯೋಗ ಬದಲಾವಣೆ ಮಾಡಿದ ಮೇಲೆ ಕಡ್ಡಾಯವಾಗಿ ತಮ್ಮ ಯುಎಎನ್​ ಅನ್ನು ನೀಡಬೇಕು.

ಹೀಗೆ ಎರಡು ಯುಎಎನ್ ಆಗಿದೆ ಎಂದು ಗೊತ್ತಾದ ತಕ್ಷಣ ಒಂದೋ ತಕ್ಷಣವೇ ಎರಡನ್ನೂ ಸೇರಿಸಬೇಕು ಅಥವಾ ಒಂದು ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಬೇಕು. ಹೀಗೆ ಒಂದು ವೇಳೆ ಮಾಡದಿದ್ದಲ್ಲಿ ಪೆನ್ಷನ್ ಅನುಕೂಲ ದೊರೆಯುವುದಿಲ್ಲ ಮತ್ತು ಈ ಹಿಂದಿನ ಕಂಪೆನಿ ಜಮೆ ಮಾಡಿದ ಮೊತ್ತ ಕೂಡ ಹೊಸ ಖಾತೆಗೆ ಸೇರ್ಪಡೆ ಆಗಲ್ಲ. ಒಂದು ವೇಳೆ ಎರಡು ಯುಎಎನ್​ ಇದೆ ಅಂತಾದರೆ ತಕ್ಷಣವೇ ಮೊದಲಿನ ಖಾತೆಯನ್ನು ಡಿ ಆ್ಯಕ್ಟಿವೇಟ್​ ಮಾಡಬೇಕು. ಏಕೆಂದರೆ, ಹೀಗೆ ಎರಡು ಯುಎಎನ್ ಹೊಂದಿರುವುದು ನಿಯಮಗಳಿಗೆ ವಿರುದ್ಧ. ಇಪಿಎಫ್​ ಖಾತೆಯ ಎಲ್ಲ ಸದಸ್ಯರು ಒಂದು ಯುಎಎನ್​ ಮಾತ್ರ ಹೊಂದಿರಬೇಕು. ಮೊದಲೇ ಹೇಳಿದಂತೆ ಯಾರ ಬಳಿ ಎರಡು ಯುಎಎನ್​ ಇದೆಯೋ ಅಂಥವರು ಯಾವುದಾದರೂ ಒಂದು ಖಾತೆಗೆ ಇಪಿಎಫ್​ ವರ್ಗಾವಣೆ ಮಾಡಿ, ಹಿಂದಿನದನ್ನು ಡಿ​ ಆ್ಯಕ್ಟಿವೇಟ್​ ಮಾಡಬೇಕು.

ಎರಡು ಯುಎಎನ್​ ಖಾತೆಯನ್ನು ಒಗ್ಗೂಡಿಸುವುದು ಹೇಗೆ? ಮೊದಲಿಗೆ ಉದ್ಯೋಗದಾತರಿಗೆ ಅಂದರೆ, ಪ್ರಸ್ತುತ ಕೆಲಸ ಮಾಡುವ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಬೇಕು ಅಥವಾ ಇಪಿಎಫ್​ಗೆ ಈ ಬಗ್ಗೆ ಮಾಹಿತಿ ನೀಡಿ, ಹಿಂದಿನ ಯುಎಎನ್ ಬ್ಲಾಕ್​ ಮಾಡಿ, ಅದರಲ್ಲಿ ಇರುವ ಬಾಕಿಯನ್ನು ಸದ್ಯಕ್ಕೆ ಸಕ್ರಿಯವಾಗಿರುವ ಖಾತೆಗೆ ವರ್ಗಾವಣೆ ಮಾಡುವಂತೆ ಕೇಳಿಕೊಳ್ಳಬೇಕು. ಬ್ಲಾಕ್​ ಆದ ಯುಎಎನ್​ಗೆ ಹೊಂದಿಕೊಂಡಿರುವ ಪಿಎಫ್​ ಖಾತೆಯಿಂದ ಸಕ್ರಿಯ ಆಗಿರುವ ಖಾತೆಗೆ ವರ್ಗಾವಣೆ ಆಗಲು ಉದ್ಯೋಗಿಯು ಕ್ಲೇಮ್ ಫೈಲ್ ಮಾಡಬೇಕು. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯುಎಎನ್​ನಿಂದ ದೃಢೀಕರಣ ಆಗುತ್ತದೆ. uanepf@epfindia.gov.in -ಈ ಇಮೇಲ್​ ವಿಳಾಸಕ್ಕೆ Subject (ವಿಷಯ) ಎಂದಿರುವ ಸಾಲಿನಲ್ಲಿ ಹಳೇ ಹಾಗೂ ಹೊಸ ಯುಎಎನ್ ಹಾಕಿ ಮೇಲ್​ ಕಳುಹಿಸಬೇಕು. ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ.

ಹೊಸದಕ್ಕೆ ಹಣದ ವರ್ಗಾವಣೆ ಆಗುವುದರೊಂದಿಗೆ ಹಳೆಯದು ಡಿ ಆ್ಯಕ್ಟಿವೇಟ್ ಆಗುತ್ತದೆ. ವರ್ಗಾವಣೆಗೆ ಮನವಿ ಸಲ್ಲಿಸಿದ ಮೇಲೆ ಇಪಿಎಫ್​ಒದಿಂದ ವರ್ಗಾವಣೆ ಕ್ಲೇಮ್​ ದೃಢೀಕರಣ ಆಗುತ್ತದೆ. ಎರಡೂ ಯುಎಎನ್ ಜೋಡಣೆ ಮಾಡಿ, ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಹಳೆಯದನ್ನು ಇಪಿಎಫ್​ಒದಿಂದ ಡಿ ಆ್ಯಕ್ಟಿವೇಟ್​ ಮಾಡಲಾಗುತ್ತದೆ. ಎರಡು ಯುಎಎನ್​ ಒಗ್ಗೂಡಿಸುವ ಕೆಲಸ ತಾನಾಗಿಯೇ ಮುಗಿಯುತ್ತದೆ. ಒಂದು ಸಲ ಇಪಿಎಫ್​ಒದಿಂದ ಹೊಸ ಯುಎಎನ್​ ದೃಢೀಕರಣವಾದ ನಂತರ ಅದನ್ನು ಪಿಎಫ್​ ಖಾತೆ ಜತೆಗೆ ಜೋಡಿಸಲಾಗುತ್ತದೆ.

ಅಂದಹಾಗೆ, ಎರಡರ ಪೈಕಿ ಒಂದು ಯುಎಎನ್ ಆಟೋಮೆಟಿಕ್ ಆಗಿ ಡಿ ಆ್ಯಕ್ಟಿವೇಟ್ ಆಗುವುದಕ್ಕೆ ಇನ್ನೂ ಒಂದು ವಿಧಾನ ಇದೆ. ಅದು ಈಗಾಗಲೇ ವಿವರಿಸಿದ್ದಕ್ಕಿಂತ ಕಡಿಮೆ ಸಮಯದಲ್ಲಿ ಮುಗಿಯುತ್ತದೆ. ಆ ಬಗ್ಗೆ ಹಂತಹಂತವಾದ ವಿವರಣೆಗೆ ಮುಂದೆ ಓದಿ.

ಹಂತ 1: ಇಪಿಎಫ್​ಒ ಪೋರ್ಟಲ್​ಗೆ ಭೇಟಿ ನೀಡಿ. ಹಂತ 2: ದಾಖಲೆಗಳನ್ನು ಬಳಸಿ ಪ್ರವೇಶಿಸಬೇಕು. ಹಂತ 3: ಮೆನು ಬಾರ್​ನಲ್ಲಿ “Claim” ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹಂತ 4: ಆನ್​ಲೈನ್ ವರ್ಗಾವಣೆ ಕ್ಲೇಮ್​ಗೆ “Request for Transfer of account” ಮೇಲೆ ಕ್ಲಿಕ್ ಮಾಡಬೇಕು. ಹಂತ 5: Captcha ನಮೂದಿಸಿ ಮತ್ತು GET PIN ಎಂಬುದರ ಮೇಲೆ ಕ್ಲಿಕ್ ಮಾಡಿ. ಹಂತ 6: ನೋಂದಾಯಿತ ಮೊಬೈಲ್ ಫೋನ್​ ಸಂಖ್ಯೆಗೆ PIN ಬಂದ ಮೇಲೆ, ಅದನ್ನು ನಮೂದಿಸಿ, ಆನ್​ಲೈನ್ ಕ್ಲೇಮ್ ಅರ್ಜಿಯನ್ನು ಸಲ್ಲಿಸಬಹುದು.

ಗಮನಿಸಬೇಕಾದ ಅಂಶ ಏನು ಗೊತ್ತಾ? ಯಾವಾಗ ಇಪಿಎಫ್​ ವರ್ಗಾವಣೆಗೆ ಮನವಿ ಮಾಡಲಾಗುತ್ತದೋ ಆಗಲೇ ಇಪಿಎಫ್​ಒ ಸಾಧನವು ತಾನಾಗಿಯೇ ನಕಲಿ (ಡೂಪ್ಲಿಕೇಟ್) ಯುಎಎನ್​ ಅನ್ನು ಪತ್ತೆ ಮಾಡಿಬಿಡುತ್ತದೆ. ಒಂದು ಸಲ ಐಡಿಂಟಿಫಿಕೇಷನ್ ಪ್ರಕ್ರಿಯೆಯು ಮುಗಿದ ಮೇಲೆ ಯಾವ ಹಳೆ ಯುಎಎನ್​ನಿಂದ ಹಣ ವರ್ಗಾವಣೆ ಆಗಿರುತ್ತದೋ ಅದು ಡಿ ಆ್ಯಕ್ಟಿವೇಟ್ ಆಗುತ್ತದೆ. ಆ ತಕ್ಷಣವೇ ಹಳೆ ಇಪಿಎಫ್​ ಖಾತೆಯು ಹೊಸ ಯುಎಎನ್​ ಜತೆಗೆ ಜೋಡಣೆ ಆಗುತ್ತದೆ. ಹಳೆ ಯುಎಎನ್ ಡಿ ಆ್ಯಕ್ಟಿವೇಷನ್ ಸ್ಟೇಟಸ್ ಬಗ್ಗೆ ಆ ನಂತರ ಸಂದೇಶ ಬರುತ್ತದೆ. ಒಂದು ವೇಳೆ ಹೊಸ ಯುಎಎನ್ ಆ್ಯಕ್ಟಿವೇಟ್ ಮಾಡಿಲ್ಲ ಎಂದಾದಲ್ಲಿ ಅದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಸೂಚನೆಗಳು ಬರುತ್ತವೆ.

ಇದನ್ನೂ ಓದಿ: EPFO: ವಿಲೀನವಾದ ಬ್ಯಾಂಕ್​ನಲ್ಲಿ ಖಾತೆಯಿದ್ದರೆ ತಕ್ಷಣವೇ ಪಿಎಫ್​ ಅಕೌಂಟ್​ನಲ್ಲಿ ಬ್ಯಾಂಕ್ ಮಾಹಿತಿ ಅಪ್​ಡೇಟ್ ಮಾಡಿ​

ಇದನ್ನೂ ಓದಿ: Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ

(How to merge two UAN of PF account through online? Here is the step by steps to be followed by an account holder)