ರಷ್ಯಾ-ಉಕ್ರೇನ್ ಸಂಘರ್ಷದಿಂದ ಲೋಹಗಳ ಕೊರತೆ: ವಿಮಾನ, ವಾಹನ, ಚಿಪ್, ಸೆಮಿಕಂಡಕ್ಟರ್ ಉತ್ಪಾದನೆಗೆ ಹಿನ್ನಡೆ
ಈ ಎರಡೂ ದೇಶಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಪರಸ್ಪರ ಕಾದಾಡುತ್ತಿರುವ ಕಾರಣ ಗಣಿಗಾರಿಕೆ, ಅದಿರು ಸಂಸ್ಕರಣೆ ಮತ್ತು ಲೋಹಗಳ ರಫ್ತಿಗೆ ಹಿನ್ನಡೆಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವು ಲೋಹೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ಎರಡೂ ದೇಶಗಳು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಪರಸ್ಪರ ಕಾದಾಡುತ್ತಿರುವ ಕಾರಣ ಗಣಿಗಾರಿಕೆ, ಅದಿರು ಸಂಸ್ಕರಣೆ ಮತ್ತು ಲೋಹಗಳ ರಫ್ತಿಗೆ ಹಿನ್ನಡೆಯಾಗಿದೆ. ಅದು ಅನೇಕ ದೇಶಗಳ ಮೇಲೆ, ವಿಶೇಷವಾಗಿ ಯುರೋಪಿನ ಮೇಲೆ ಬೀರಲಿರುವ ದೂರಗಾಮಿ ಪರಿಣಾಮಗಳ ಕುರಿತು ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು ಚೇತರಿಕೆ ಹಾದಿಯಲ್ಲಿತ್ತು. ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವುದರಿಂದ ಅದೀಗ ಮತ್ತೆ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಸೆಮಿಕಂಡಕ್ಟರ್ ಪೂರೈಕೆಯ ಸಂಪೂರ್ಣ ಸರಪಳಿಯು ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಪ್ರಪಂಚದ ವಿವಿಧ ಪ್ರದೇಶಗಳ ತಯಾರಕರನ್ನು ಒಳಗೊಂಡಿರುತ್ತದೆ. ಅವರು ವಿವಿಧ ಕಚ್ಚಾವಸ್ತುಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಮತ್ತು ಪ್ಯಾಕಿಂಗ್ ಪರಿಹಾರಗಳನ್ನು ಪೂರೈಸುತ್ತಾರೆ. ಒಂದು ಸಣ್ಣ ಅಡ್ಡಿ ಅಥವಾ ಹಾನಿಯೂ ಸಂಪೂರ್ಣ ಸರಪಳಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧವು ಮತ್ತಷ್ಟು ಮುಂದುವರಿದರೆ, ಜಾಗತಿಕ ಸೆಮಿ ಕಂಡಕ್ಟರ್ ಉದ್ಯಮದ ಮೇಲಾಗುವ ಪರಿಣಾಮವು ಹಣದುಬ್ಬರಕ್ಕೂ ಕಾರಣವಾಗುತ್ತದೆ.
ಜಾಗತಿಕವಾಗಿ ಇದು ವಾಹನ ಉದ್ಯಮದ ಮೇಲೂ ಗಮನಾರ್ಹ ಪರಿಣಾಮ ಬೀರಲಿದೆ. ಭೂಮಿಯಲ್ಲಿ ಸಿಗುವ ನಿಯೋಡೈಮಿಯಮ್, ಪ್ರಸೋಡೈಮಿಯಮ್ ಮತ್ತು ಡಿಸ್ಪ್ರೋಸಿಯಂನಂತಹ ವಿರಳವಾದ ಲೋಹಗಳ ಪೂರೈಕೆಯಲ್ಲೂ ಕೊರತೆಯಾಗಿದೆ. ಇದರ ಮೊದಲ ಮತ್ತು ನೇರ ಪರಿಣಾಮವು ಯುರೋಪಿಯನ್ ವಾಹನ ಉದ್ಯಮದ ಮೇಲೆ ಆಗುತ್ತದೆ. ಈಗಾಗಲೇ ಹಲವಾರು ಆಟೋಮೋಟಿವ್ ಕಂಪನಿಗಳು ಸ್ಥಳೀಯ ವಿತರಕರಿಗೆ ವಾಹನಗಳನ್ನು ಕಳುಹಿಸುವುದನ್ನು ನಿಲ್ಲಿಸಿವೆ. ಜರ್ಮನಿಯ ವೋಕ್ಸ್‌ವ್ಯಾಗನ್ ತನ್ನ ಎರಡು ಸ್ಥಾವರಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಕಳೆದ ವಾರ ಘೋಷಿಸಿತು.
ಯುದ್ಧದ ಪ್ರಭಾವವು ಜಾಗತಿಕ ಎಲೆಕ್ಟ್ರಾನಿಕ್ ವಾಹನ ಬ್ಯಾಟರಿ-ಸೆಲ್ ತಯಾರಿಕೆಯ ಮೇಲೆ ಆಗಿದೆ. ನೆನಪಿಡಿ, ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ವಾಹನ ಘಟಕಗಳಲ್ಲಿನ ಎರಡು ಪ್ರಮುಖ ಸಂಪನ್ಮೂಲಗಳಾದ ನಿಕಲ್ ಮತ್ತು ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಉಕ್ರೇನ್ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಚಿಪ್ ಲಿಥೋಗ್ರಫಿಗೆ ಬಳಸಲಾಗುವ ನಿಯಾನ್ ಪೈಕಿ ಸರಿಸುಮಾರು ಶೇ 90ರಷ್ಟು ರಷ್ಯಾದಿಂದಲೇ ಪೂರೈಕೆಯಾಗಬೇಕಿದೆ. ಬೇರೆ ಯಾವ ದೇಶವೂ ಇದನ್ನು ಉತ್ಪಾದಿಸುವುದಿಲ್ಲ. ಇದರಲ್ಲಿ ಶೇ 60ರಷ್ಟು ಪ್ರಮಾಣದ ನಿಯಾನ್ ಉಕ್ರೇನ್ ದೇಶದ ಒಡೆಸ್ಸಾದಲ್ಲಿರುವ ಒಂದು ಕಂಪನಿಯಿಂದ ಶುದ್ಧೀಕರಣಗೊಳ್ಳುತ್ತದೆ.
ನಿಕಲ್ ಅನ್ನು ಸ್ಟೇನ್‌ಲೆಸ್ ಸ್ಟೀಲ್ ತಯಾರಿಕೆಯಲ್ಲಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಟೈಟಾನಿಯಂ ಅತ್ಯಂತ ಹಗುರವಾಗಿದ್ದರೂ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಮತ್ತು ಶಾಖವನ್ನು ತಡೆದುಕೊಳ್ಳುವ ಹಾಗೂ ಪ್ರಕ್ಷುಬ್ಧತೆಯನ್ನು ಎದುರಿಸುವ ಅದರ ಗುಣಲಕ್ಷಣಗಳಿಂದಾಗಿ ವಿಮಾನ ಮತ್ತು ವಾಹನ ತಯಾರಕರು ಈ ಲೋಹಕ್ಕೆ ಆದ್ಯತೆ ನೀಡುತ್ತಿದ್ದಾರೆ.
ವಾಯುಯಾನ ಮತ್ತು ಚಿನ್ನ
ಹಳದಿ ಲೋಹದ ವಿಷಯಕ್ಕೆ ಬಂದರೆ, ರಷ್ಯಾ ವಿಶ್ವದ ಮೂರನೇ ಅತಿದೊಡ್ಡ ಚಿನ್ನ ಉತ್ಪಾದಕ ರಾಷ್ಟ್ರವಾಗಿದ್ದು, ಒಟ್ಟು ಸುಮಾರು 330 ಟನ್‌ಗಳನ್ನು ಉತ್ಪಾದನೆಯನ್ನು ಹೊಂದಿದೆ. ಹಲವು ವರ್ಷಗಳಿಂದ ಚಿನ್ನದ ಬೆಲೆ ಹೆಚ್ಚುತ್ತಲೇ ಇದ್ದು, ಈ ಬಾರಿಯಂತೂ ಅದು ಗಗನಕ್ಕೇರಿದೆ. ಚಿನ್ನವನ್ನು ಆಭರಣಗಳಲ್ಲಿ ಮಾತ್ರ ಬಳಸುತ್ತಾರೆ ಎಂದು ಸಾಮಾನ್ಯರು ಭಾವಿಸಿದ್ದಾರೆ. ಆದರೆ, ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಇದು ನಿರ್ಣಾಯಕ ಲೋಹವಾಗಿದೆ. ಹೆಚ್ಚು ಪರಿಣಾಮಕಾರಿ ವಾಹಕವಾಗಿರುವುದರಿಂದ, ಇದನ್ನು ಕನೆಕ್ಟರ್‌ಗಳು, ಸ್ವಿಚ್‌ಗಳು, ಬೆಸುಗೆ ಹಾಕಿದ ಕೀಲುಗಳು, ಸಂಪರ್ಕಿಸುವ ತಂತಿಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
ರಷ್ಯಾದ ವಿಎಸ್ಎಂಪಿಒ-ಅವಿಸ್ಮಾ (VSMPO-Avisma) ಏರೋಸ್ಪೇಸ್ ಉದ್ಯಮಕ್ಕೆ ಲೋಹಗಳನ್ನು ಪೂರೈಸುತ್ತಿರುವ ಉತ್ಪಾದಕ ಸಂಸ್ಥೆಯಾಗಿದ್ದು, ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಜರ್ಮನಿಯ ವಿಮಾನ ಎಂಜಿನ್ ತಯಾರಕ ಸಂಸ್ಥೆಯಾಗಿರುವ ಎಂಟಿಯು ಏರೋ ಎಂಜಿನ್ಸ್ ಎಜಿ (MTU Aero Engines AG) 2023ರಿಂದ ಕಚ್ಚಾವಸ್ತುಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಪೂರೈಕೆದಾರರನ್ನು ಅನ್ವೇಷಿಸುತ್ತಿದೆ ಎಂದು ಹೇಳಿದೆ. ವಿಮಾನ ಎಂಜಿನ್‌ಗಳನ್ನು ತಯಾರಿಸುವುದಕ್ಕಾಗಿ ಜನರಲ್ ಎಲೆಕ್ಟ್ರಿಕ್ ಕಂಪನಿ (General Electric Company) ಮತ್ತು ರೇಥಿಯಾನ್ (Raytheon)ನ ಪ್ರಾಟ್ ಮತ್ತು ವಿಟ್ನಿಯಂತಹ (Pratt & Whitney) ಕಂಪನಿಗಳೊಂದಿಗೆ ಕೆಲಸ ಮಾಡುವ ಎಂಟಿಯು (MTU), ಟೈಟಾನಿಯಂಗೆ ಸಂಬಂಧಿಸಿದ ಕಚ್ಚಾವಸ್ತುಗಳಲ್ಲಿ ಸುಮಾರು ಶೇ 10ರಷ್ಟು ಪ್ರಮಾಣವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.
ವಿಮಾನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯು ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ರಷ್ಯಾದ ವಿರುದ್ಧ ನಿರ್ಬಂಧಗಳು ಹೇರಿಕೆಯಾಗುತ್ತಿರುವುದರಿಂದ ಏರೋಸ್ಪೇಸ್ ಕಂಪನಿಗಳು ಕಚ್ಚಾ ವಸ್ತುಗಳನ್ನು ಪಡೆದುಕೊಳ್ಳುವುದಕ್ಕಾಗಿ ಪರ್ಯಾಯ ಮೂಲಗಳನ್ನು ಹುಡುಕಬೇಕಾಗಿದೆ. ವಿಮಾನಗಳ ತಯಾರಿಕೆಯಲ್ಲಿ ಟೈಟಾನಿಯಂ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ರಷ್ಯಾ ಇದರ ಪ್ರಮುಖ ಪೂರೈಕೆದಾರ ದೇಶ. ರಷ್ಯಾದಿಂದ ಟೈಟಾನಿಯಂ ಖರೀದಿಯನ್ನು ಸ್ಥಗಿತಗೊಳಿಸಿರುವುದಾಗಿ ಬೋಯಿಂಗ್ ಸಂಸ್ಥೆ ಘೋಷಿಸಿದೆ.
ರಷ್ಯಾದ ವಿಎಸ್ಎಂಪಿಒ-ಅವಿಸ್ಮಾ (VSMPO-Avisma) ಕಾರ್ಪೊರೇಶನ್ ಸಫ್ರಾನ್ ಎಸ್ಎ (Safran SA) ಮುಖ್ಯ ಪೂರೈಕೆದಾರ ಸಂಸ್ಥೆಯಾಗಿದೆ. ತನ್ನ ಸಂಗ್ರಹದಲ್ಲಿ ಸರಿಸುಮಾರು ಅರ್ಧಾಂಶ ರಷ್ಯಾದ ಸಂಸ್ಥೆಯ ಪೂರೈಕೆಯೇ ಆಗಿದೆ. ಆದರೆ, ಸದ್ಯ ಜರ್ಮನಿಯ ವಿತರಕರಿಂದ ಸಂಸ್ಥೆಯು ಟೈಟಾನಿಯಂ ಖರೀದಿಸಿದ್ದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಒಲಿವಿಯರ್ ಆಂಡ್ರೀಸ್ ಹೇಳಿದರು. ರೋಲ್ಸ್ ರಾಯ್ಸ್ ಹೋಲ್ಡಿಂಗ್ ಪಿಎಲ್‌ಸಿ (Rolls-Royce Holdings Plc.) ಕೂಡ ಕಚ್ಚಾ ವಸ್ತುಗಳ ದಾಸ್ತಾನನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ವೈವಿಧ್ಯಮಯಗೊಳಿಸುತ್ತಿದೆ. ಟೈಟಾನಿಯಂ ಲೋಹವನ್ನು ಎಂಜಿನ್‌ಗಳು, ಫಾಸ್ಟೆನರ್‌ಗಳು ಮತ್ತು ವಿಮಾನದ ಇತರ ಭಾಗಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ, ಇದರ ತೂಕ ಕಡಿಮೆ. ಆದರೆ, ಹೆಚ್ಚು ಶಕ್ತಿಶಾಲಿ ಹಾಗೂ ತುಕ್ಕು ನಿರೋಧಕವಾಗಿದೆ.
ಜಾಗತಿಕ ಡೇಟಾ ಪೂರೈಕೆದಾರರಾದ ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಪ್ರಕಾರ, ಪ್ರಪಂಚದಾದ್ಯಂತ ಅಂದಾಜು 3,74,000 ವ್ಯವಹಾರಗಳು ರಷ್ಯಾದ ಸರಬರಾಜುಗಳನ್ನು ಅವಲಂಬಿಸಿವೆ. ಈ ವ್ಯವಹಾರಗಳಲ್ಲಿ ಶೇ 90ರಷ್ಟು ಅಮೆರಿಕದಲ್ಲಿವೆ. ಸುಮಾರು 2,41,000 ವ್ಯವಹಾರಗಳು ಉಕ್ರೇನಿಯನ್ ಪೂರೈಕೆದಾರರ ಮೇಲೆ ಅವಲಂಬಿತವಾಗಿವೆ. ಇದರಲ್ಲೂ ಶೇ 93ರಷ್ಟು ಅಮೆರಿಕದವು. ರಷ್ಯಾ ಮತ್ತು ಉಕ್ರೇನ್‌ಗೆ ಪರ್ಯಾಯವೆಂದರೆ ದಕ್ಷಿಣ ಅಮೆರಿಕ, ಚೀನಾ ಅಥವಾ ಜಪಾನ್. ಅವು ದೂರದ ಸ್ಥಳಗಳಾಗಿವೆ. ಇದರಿಂದಾಗಿ, ಸಾಗಾಟ ವೆಚ್ಚವು ಹೆಚ್ಚಾಗಿರುತ್ತದೆ. ಯುದ್ಧ ನಡೆದಾಗ ಅದಕ್ಕೆ ನಿಜವಾಗಿಯೂ ಎಲ್ಲರೂ ಬೆಲೆ ತೆರಬೇಕಾಗುತ್ತದೆ, ಅದೂ ನಾನಾ ರೂಪಗಳಲ್ಲಿ.
ಇದನ್ನೂ ಓದಿ: ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ
ಇದನ್ನೂ ಓದಿ: ರಾಜಧಾನಿ ಕೀವ್ ರಕ್ಷಣೆಗೆ ಸರ್ವಪ್ರಯತ್ನ: ರಷ್ಯಾ ಮುತ್ತಿಗೆಗೆ ಪ್ರತಿರೋಧ ತೋರಲು ಉಕ್ರೇನ್ ಸಜ್ಜು
Published On - 4:02 pm, Sun, 13 March 22