Income Tax Notice: ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಏಕೆ ಬರುತ್ತದೆ? ಆಗ ತೆರಿಗೆ ಪಾವತಿದಾರರು ಏನು ಮಾಡಬೇಕು?
ನೀವು ಸಲ್ಲಿಸಿರುವ ರಿಟರ್ನ್ನಲ್ಲಿ ದೋಷಗಳಿದ್ದರೆ ಆದಾಯ ಇಲಾಖೆ ನಿಮ್ಮ ಖಾತೆಗಳನ್ನು ಪರಿಶೀಲಿಸುತ್ತದೆ. ನಂತರ ಇಲಾಖೆಯು ಸೆಕ್ಷನ್ 143 (2)ರ ಅಡಿಯಲ್ಲಿ ನೋಟಿಸ್ ಜಾರಿ ಮಾಡುತ್ತದೆ. ಇಂಥ ಸಂದರ್ಭದಲ್ಲಿ ನೀವು ಲೆಕ್ಕ ಪರಿಶೋಧಕರನ್ನು ಬೇಟಿಯಾಗಿ ನಿಮ್ಮ ಪ್ರತಿಕ್ರಿಯೆ ನೀಡಬಹುದು.
ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಮೊತ್ತವನ್ನು ಒಳಗೊಂಡ ವ್ಯವಹಾರಗಳನನ್ನು ನಡೆಸುವವರು ಸರ್ಕಾರಕ್ಕೆ ಅದಕ್ಕೆ ತಕ್ಕ ಪ್ರಮಾಣದಲ್ಲಿ, ಕಾನೂನಿನ ಅನ್ವಯ ತೆರಿಗೆ(Tax)ಯನ್ನು ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆ (Income Tax Department)ಯಿಂದ ನೋಟಿಸ್ ಜಾರಿಯಾಗುತ್ತದೆ. ಇದರ ಗಂಭೀರತೆ ಅರಿಯದ ಕೆಲವರು ನಿರ್ಲಕ್ಷ್ಯ ಮಾಡುವುದುಂಟು. ಮತ್ತೆ ಕೆಲವರು ಇದು ಯಾಕೆ ಬಂತು ಎಂದು ಅರ್ಥವಾಗದೆ ಗಾಬರಿ ಆಗಿಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು? ವಕೀಲರನ್ನು ನೇಮಿಸಕೊಳ್ಳಬೇಕೇ? – ಹೀಗೆ ಪ್ರಶ್ನೆ ಮೂಡುತ್ತದೆ. ಆದರೆ ನಿಮಗೆ ಗೊತ್ತಿರಲಿ, ಕೆಲವೊಮ್ಮೆ ಇದರ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ನೋಟಿಸ್(Notice)ಗಳಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ತಾಣ (https://eportal.incometax.gov.in/iec/foservices)ದಲ್ಲಿ ಉತ್ತರ ನೀಡಬಹುದು.
ನೀವೇನಾದರೂ ಬ್ಯಾಂಕ್ಗೆ ತೆರಿಗೆ ಇಲಾಖೆ ನಿಗದಿ ಮಾಡಿದ ಮೊತ್ತಕ್ಕಿಂತ ದೊಡ್ಡ ಪ್ರಮಾಣದಲ್ಲಿ ಏನಾದರೂ ಹಣ ಜಮಾ ಮಾಡಿದರೆ ಅಥವಾ ಆಸ್ತಿ ಖರೀದಿಸಿ ಐಟಿಆರ್ ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ಐಟಿ ಕಾಯ್ದೆ 143(1)ರ ಪ್ರಕಾರ ನೋಟಿಸ್ ಜಾರಿ ಆಗುತ್ತದೆ. ಇಂಥ ಸಂದರ್ಭದಲ್ಲಿ ನೀವು ಇ-ಫೈಲಿಂಗ್ ತಾಣಕ್ಕೆ ಭೇಟಿ ನೀಡಿ ಉತ್ತರ ನೀಡಬಹುದು. ಆದರೆ ನೋಟಿಸ್ ಅನ್ನು ನಿರ್ಲಕ್ಷಿಸಿದರೆ ಮಾತ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಅಂದಹಾಗೆ ಜಾರಿಯಾದ ನೋಟಿಸ್ ನಿಮ್ಮ ರಿಟರ್ನ್ನಲ್ಲಿ ನೀಡಿರುವ ಎಲ್ಲ ವಿವರಗಳನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಇಲಾಖೆಗೆ ನೀಡಿದ ವಿವರ ಇಲಾಖೆಯ ಮಾಹಿತಿಯೊಂದಿಗೆ ಹೊಂದಾಣಿಕೆ ಆದರೆ ಆತಂಕಪಡಬೇಕಿಲ್ಲ. ಮಾಹಿತಿ ಹೊಂದಾಣಿಕೆ ಆಗದಿದ್ದಲ್ಲಿ ಅದಕ್ಕೆ ವಿವರಣೆ ನೀಡಬೇಕಾಗುತ್ತದೆ.
ಉದಾಹರಣೆಗೆ, ನೀವು ರಿಟರ್ನ್ಸ್ ಸಲ್ಲಿಸುವಾಗ ಫಿಕ್ಸೆಡ್ ಡಿಪಾಸಿಟ್ ಮೇಲೆ ಗಳಿಸಿದ ಬಡ್ಡಿಯ ಆದಾಯವನ್ನು ಇತರ ತೆರಿಗೆ ವ್ಯಾಪ್ತಿಯೊಳಗೆ ಬರುವ ಆದಾಯದ ವಿವರದೊಂದಿಗೆ ನೀಡದಿದ್ದರೆ ಇಲಾಖೆಯು ಇದನ್ನು ಗುರುತಿಸಿ, ಬಾಕಿ ಇರುವ ತೆರಿಗೆ ಮೊತ್ತವನ್ನು ನೋಟಿಸ್ನಲ್ಲಿ ತೋರಿಸುತ್ತದೆ. ಈ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಲೆಕ್ಕ ಪರಿಶೋಧಕರಾದ ಅಂಕಿತ್ ಗುಪ್ತಾ ಹೇಳುವಂತೆ, ಇಲಾಖೆಯ ಜಾಲತಾಣದಲ್ಲಿರುವ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಸೂಕ್ತ ಮಾಹಿತಿ ನೀಡಿ, ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕು. ಒಂದು ವೇಳೆ ತಪ್ಪಾಗಿ ಫೈಲ್ ಮಾಡಿದರೆ ಹೆಚ್ಚುವರಿ ತೆರಿಗೆ ಹಾಕಬಹುದು.
ನೋಟಿಸ್ಗೆ ಉತ್ತರಿಸದಿದ್ದರೆ ಏನಾಗುತ್ತದೆ?:
ಅದಾಯ ತೆರಿಗೆ ಇಲಾಖೆಯ ಕೇಂದ್ರೀಯ ಸಂಸ್ಕರಣಾ ಕೇಂದ್ರವು ನೀಡಿದ ನೋಟಿಸ್ಗೆ ಸರಿಯಾದ ಸಮಯದಲ್ಲಿ ಉತ್ತರ ನೀಡದಿದ್ದರೆ ಪ್ರಕರಣವನ್ನು ಅಸೆಸ್ಮೆಂಟ್ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ. ಹೀಗಾದಲ್ಲಿ ನೀವು ಆ ಅಧಿಕಾರಿಯನ್ನು ಭೇಟಿಯಾಗಿ, ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಒಮ್ಮೆ ಅಸೆಸ್ಮೆಂಟ್ ಮುಗಿದ ನಂತರ ಮತ್ತೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಒಂದು ವೇಳೆ ನೀವು ಸಲ್ಲಿಸಿರುವ ರಿಟರ್ನ್ಸ್ನಲ್ಲಿ ದೋಷಗಳಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ಖಾತೆಗಳನ್ನು ಪರಿಶೀಲಿಸುತ್ತದೆ. ಆ ನಂತರ ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 143 (2)ರ ಅಡಿಯಲ್ಲಿ ನೋಟಿಸ್ ಜಾರಿ ಮಾಡುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಲೆಕ್ಕ ಪರಿಶೋಧಕರ ಮೂಲಕ ಪ್ರತಿಕ್ರಿಯೆ ನೀಡಬಹುದು.
ಹೆಚ್ಚುವರಿ ತೆರಿಗೆ ಬೇಡಿಕೆಗೆ ನೋಟಿಸ್:
ನೀವೇನಾದರೂ ಹೆಚ್ಚುವರಿಗೆ ತೆರಿಗೆ ಕಟ್ಟಬೇಕು ಎಂದು ಇಲಾಖೆಯು ಇಟ್ಟ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 245ರ ಅಡಿಯಲ್ಲಿ ನೋಟಿಸ್ ಜಾರಿ ಆಗುತ್ತದೆ. ಈ ಹೆಚ್ಚುವರಿ ತೆರಿಗೆ ಬಾಕಿಯ ಮೇಲೆ ಪ್ರತಿ ತಿಂಗಳು ಶೇಕಡಾ 2ರಷ್ಟು ಚಕ್ರಬಡ್ಡಿಯನ್ನು ಹಾಕಲಾಗುತ್ತದೆ. ಅದನ್ನು ಪಾವತಿ ಮಾಡುವವರೆಗೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಅಲ್ಲದೆ, ನಿಮಗೆ ಬರಬೇಕಾದ ತೆರಿಗೆ ರಿಫಂಡ್ ಹಣದಲ್ಲಿ ನೀಡಬೇಕಾಗಿರುವ ಹೆಚ್ಚುವರಿ ಬಾಕಿಯ ತೆರಿಗೆಯನ್ನು ಹೊಂದಿಸಲಾಗುತ್ತದೆ.
Published On - 12:23 pm, Fri, 13 May 22