ವಾಷಿಂಗ್ಟನ್, ಜನವರಿ 28: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಬಾಂಬ್ ಸಿಡಿಸಲು ಸಜ್ಜಾಗಿದ್ದಾರೆ. ಅದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬಲ್ಲಂತಹ ನಡೆ. ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವಾಗಿ ಮಾಡುತ್ತೇವೆ ಎನ್ನುವ ಘೋಷ ವಾಕ್ಯದಂದಿಗೆ ಚುನಾವಣಾ ಪ್ರಚಾರ ಮಾಡಿ, ಗೆದ್ದು ಗದ್ದುಗೆಗೆ ಏರಿರುವ ಡೊನಾಲ್ಡ್ ಟ್ರಂಪ್ ಇದೀಗ ವಿವಿಧ ಕ್ರಮಗಳ ಪ್ರಯೋಗ ಮಾಡಲು ಸಿದ್ಧರಾಗಿದ್ದಾರೆ. 19ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಇದ್ದಂತಹ ರೀತಿಯ ತೆರಿಗೆ ವ್ಯವಸ್ಥೆ ತರುವುದಾಗಿ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ನಾಗರಿಕರಿಗೆ ಆದಾಯ ತೆರಿಗೆ ರದ್ದುಗೊಳಿಸಲಾಗುವುದು; ವಿದೇಶಗಳ ಮೇಲೆ ತೆರಿಗೆ ಹಾಕಲಾಗುವುದು. ಇದು ಟ್ರಂಪ್ ಅವರು ಪ್ರಸ್ತಾಪಿಸಿರುವ ತೆರಿಗೆ ಮಾದರಿಯಾಗಿದೆ. ಟ್ರಂಪ್ ಪ್ರಕಾರ ಕ್ರಿ.ಶ. 1870ರಿಂದ 1913ರವರೆಗೆ ಅಮೆರಿಕದ ಶ್ರೀಮಂತಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆಗ ಅಮೆರಿಕದಲ್ಲಿ ಟ್ಯಾರಿಫ್ ಅಥವಾ ಆಮದು ಸುಂಕ ಆಧಾರಿತವಾದ ಆರ್ಥಿಕತೆ ಇತ್ತು. ಸರ್ಕಾರಕ್ಕೆ ಆದಾಯ ತೆರಿಗೆ ಬದಲಾಗಿ ಹೊರ ದೇಶಗಳಿಂದ ಬರುತ್ತಿದ್ದ ಸರಕುಗಳಿಗೆ ತೆರಿಗೆ ವಿಧಿಸಿ ಸಿಗುತ್ತಿದ್ದ ಹಣವೇ ಪ್ರಮುಖ ಆದಾಯ ಮೂಲವಾಗಿತ್ತು. ಈಗ ಮತ್ತೆ ಅಂಥದ್ದೇ ವ್ಯವಸ್ಥೆ ತರುವುದಾಗಿ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ; ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಚರ್ಚೆ
ಚೀನಾದ ಹೆಚ್ಚಿನ ಉತ್ಪನ್ನಗಳಿಗೆ ಅಮೆರಿಕವೇ ದೊಡ್ಡ ಮಾರುಕಟ್ಟೆಯಾಗಿದೆ. ಅಮೆರಿಕವೇನಾದರೂ ಟ್ಯಾರಿಫ್ ಹೆಚ್ಚಿಸಿದಲ್ಲಿ ಚೀನಾ ಮೇಲೆ ಒತ್ತಡ ಬೀಳಬಹುದು. ಅಮೆರಿಕಕ್ಕೆ ಆದಾಯ ಹೆಚ್ಚುತ್ತದೆ, ಅಥವಾ ಆಮದು ಪ್ರಮಾಣ ಕಡಿಮೆ ಆಗುತ್ತದೆ. ಆಮದು ಕಡಿಮೆ ಆದಲ್ಲಿ, ಆ ಕೊರತೆಯನ್ನು ನೀಗಿಸಲು ಅಮೆರಿಕದಲ್ಲಿ ಸ್ಥಳೀಯ ಉದ್ಯಮ ಬಲಗೊಳ್ಳುತ್ತದೆ.
ಆದಾಯ ತೆರಿಗೆಯನ್ನು ನಿರ್ಮೂಲನೆ ಮಾಡಿದಾಗ ಯಾವುದೇ ಮುಚ್ಚುಮರೆ ಇಲ್ಲದೇ ಯಾವುದೇ ವ್ಯಕ್ತಿ ಹಣ ಸಂಪಾದಿಸಿ ಇಟ್ಟುಕೊಳ್ಳಬಹುದು. ಅತ್ಯಧಿಕ ಆದಾಯ ತೆರಿಗೆ ಇರುವ ಭಾರತದಂತಹ ದೇಶಗಳಿಂದ ಶ್ರೀಮಂತ ಉದ್ಯಮಿಗಳು ಅಮೆರಿಕಕ್ಕೆ ವಲಸೆ ಹೋಗಬಹುದು. ಇದರಿಂದ ಭಾರತದ ಆರ್ಥಿಕತೆಗೆ ಹೊಡೆತ ಬೀಳಬಹುದು. ಸರ್ಕಾರಕ್ಕೆ ಕಾರ್ಪೊರೇಟ್ ಟ್ಯಾಕ್ಸ್ನ ಆದಾಯ ಇಳಿಕೆ ಆಗಬಹುದು.
ಇದನ್ನೂ ಓದಿ: ಇನ್ಷೂರೆನ್ಸ್ ಪ್ರೀಮಿಯಮ್ಗೆ ತೆರಿಗೆಯೇ ಇಲ್ಲದಿದ್ದರೆ ಏನಾಗುತ್ತೆ? ಊಹಿಸಲೂ ಕಷ್ಟವಾದ ಸೋಜಿಗದ ಸಂಗತಿ
ಅಮೆರಿಕದಲ್ಲಿ ಆದಾಯ ತೆರಿಗೆ ಇಲ್ಲದಿರುವುದು, ಮತ್ತು ಉದ್ದಿಮೆಗಳು ಪ್ರಬಲವಾಗಿರುವುದು, ಭಾರತದಂತಹ ದೇಶಗಳಿಂದ ಉನ್ನತ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ಅಮೆರಿಕಕ್ಕೆ ವಲಸೆ ಹೋಗಬಹುದು. ಇವೆಲ್ಲಾ ಸಾಧ್ಯತೆಗಳು ಇವೆ.
ಆದಾಯ ತೆರಿಗೆ ರದ್ಧತಿ ಮತ್ತು ಆಮದು ಸುಂಕ ಹೆಚ್ಚಳದಿಂದ ಅಮೆರಿಕದಲ್ಲಿ ಹಣದುಬ್ಬರ ಗಣನೀಯವಾಗಿ ಹೆಚ್ಚಬಹುದು. ಬಡ್ಡಿದರಗಳೂ ಹೆಚ್ಚಬಹುದು ಎಂದು ಅಮೆರಿಕದ ಕೆಲ ಸಂಸದರು ಆಕ್ಷೇಪಿಸಿದ್ದಾರೆ. ಹಾಗೆಯೇ, ಈ ಕ್ರಮಗಳನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ. ಪ್ರಾಯೋಗಿಕವಾಗಿ ಇದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ವಿರೋಧಿಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ