ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ
India forex reserves down by 4 billion USD: ಏಪ್ರಿಲ್ 24ಕ್ಕೆ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 698 ಬಿಲಿಯನ್ ಡಾಲರ್ಗೆ ಇಳಿದಿದೆ ಎಂದು ಆರ್ಬಿಐನ ದತ್ತಾಂಶ ಹೇಳುತ್ತಿದೆ. ಹಾಗೆಯೇ, ಮಾರ್ಚ್ 31ಕ್ಕೆ ಫಾರೆಕ್ಸ್ ರಿಸರ್ವ್ಸ್ನಲ್ಲಿ ಚಿನ್ನದ ಪಾಲು ಶೇ. 16.7ಕ್ಕೆ ಏರಿದೆ. ಇನ್ನು, ಕಳೆದ ಎರಡು ವರ್ಷಗಳಿಂದ ಆರ್ಬಿಐ ವಿದೇಶಗಳಲ್ಲಿ ಇರಿಸಲಾಗಿದ್ದ ತನ್ನ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ.

ನವದೆಹಲಿ, ಮೇ 3: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ 700 ಬಿಲಿಯನ್ ಡಾಲರ್ ಮಟ್ಟಕ್ಕಿಂತ ತುಸು ಕೆಳಗೆ ಇಳಿದಿದೆ. ಆರ್ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ 24ರಂದು ಅಂತ್ಯಗೊಂಡ ವಾರದಲ್ಲಿ (ಏಪ್ರಿಲ್ 18-24) 4.82 ಬಿಲಿಯನ್ ಡಾಲರ್ನಷ್ಟು ಕುಸಿದಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 698.49 ಬಿಲಿಯನ್ ಡಾಲರ್ ಆಗಿದೆ. ಫಾರೆಕ್ಸ್ ರಿಸರ್ವ್ಸ್ನ ಎಲ್ಲಾ ಭಾಗಗಳೂ ಇಳಿದಿವೆ. ಫಾರೀನ್ ಕರೆನ್ಸಿ ಅಸೆಟ್ಗಳು 2.84 ಬಿಲಿಯನ್ ಡಾಲರ್ನಷ್ಟು ಕಡಿಮೆ ಆದರೆ, ಚಿನ್ನದ ನಿಧಿ 1.90 ಬಿಲಿಯನ್ ಡಾಲರ್ ತಗ್ಗಿದೆ. ಎಸ್ಡಿಆರ್ ಮತ್ತು ಐಎಂಎಫ್ ಪಾಲು ಕೂಡ ಕಡಿಮೆಗೊಂಡಿವೆ.
ಭಾರತದ ಫಾರೆಕ್ಸ್ ರಿಸರ್ವ್ಸ್ (ಏಪ್ರಿಲ್ 24ಕ್ಕೆ)
ಒಟ್ಟು ಫಾರೆಕ್ಸ್ ರಿಸರ್ವ್ಸ್: 698.49 ಬಿಲಿಯನ್ ಡಾಲರ್
- ವಿದೇಶೀ ಕರೆನ್ಸಿ: 554.62 ಬಿಲಿಯನ್ ಡಾಲರ್
- ಚಿನ್ನದ ನಿಧಿ: 120.24 ಬಿಲಿಯನ್ ಡಾಲರ್
- ಎಸ್ಡಿಆರ್: 18.77 ಬಿಲಿಯನ್ ಡಾಲರ್
- ಐಎಂಎಫ್ ನಿಧಿ: 4.85 ಬಿಲಿಯನ್ ಡಾಲರ್
ಇದನ್ನೂ ಓದಿ: ಆರ್ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ
ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಹೆಚ್ಚಳ
ಆರ್ಬಿಐ ಬಿಡುಗಡೆ ಮಾಡಿದ ಮತ್ತೊಂದು ವರದಿ ಪ್ರಕಾರ ಫಾರೆಕ್ಸ್ ರಿಸರ್ವ್ಸ್ನಲ್ಲಿ ಚಿನ್ನದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2026ರ ಮಾರ್ಚ್ 31ಕ್ಕೆ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಶೇ. 16.7ಕ್ಕೆ ಏರಿದೆ. ಆರು ತಿಂಗಳ ಹಿಂದೆ (2025ರ ಸೆಪ್ಟೆಂಬರ್) ಇದು ಶೇ. 13.92ರಷ್ಟು ಇತ್ತು. ಆರ್ಬಿಐ ಸತತವಾಗಿ ಚಿನ್ನದ ಖರೀದಿ ಮಾಡುತ್ತಿರುವುದು ಇದಕ್ಕೆ ಕಾರಣ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ಬಿಐ ಮಾತ್ರವಲ್ಲ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಮಾಡುತ್ತಿರುವುದು ಗಮನಾರ್ಹ ಸಂಗತಿ.
ಭಾರತದ ಗೋಲ್ಡ್ ರಿಸರ್ವ್ಗಳಲ್ಲಿ ಹೆಚ್ಚಿನವು ದೇಶದೊಳಗೆಯೇ ಇದೆ. ಆರ್ಬಿಐ ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ. ಇದರಲ್ಲಿ 680 ಮೆಟ್ರಿಕ್ ಟನ್ಗಳಷ್ಟು ಚಿನ್ನವನ್ನು ದೇಶದೊಳಗೆಯೇ ಇರಿಸಿಕೊಳ್ಳಲಾಗಿದೆ. ಉಳಿದವು ವಿದೇಶಗಳಲ್ಲಿ ಇವೆ.
ಇದನ್ನೂ ಓದಿ: ಆರ್ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್ಗೆ ಒಟಿಪಿ ಬೇಕಿಲ್ಲ
ಭಾರತ ಚಿನ್ನವನ್ನು ಯಾಕೆ ತರುತ್ತಿದೆ?
ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಸದ್ದುಗದ್ದಲವಿಲ್ಲದೆ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸಾಗಿಸುತ್ತಿದೆ. ಸಾಮಾನ್ಯವಾಗಿ ಆರ್ಬಿಐ ತಾನು ಖರೀದಿಸಿದ ಚಿನ್ನವನ್ನು ವಿದೇಶಗಳಲ್ಲಿ ಇರಿಸುತ್ತದೆ. ಆದರೆ, ಜಾಗತಿಕ ರಾಜಕೀಯ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಚಿನ್ನವನ್ನು ಇರಿಸುವುದು ಸುರಕ್ಷಿತ ಎನಿಸುವುದಿಲ್ಲ. ಹೀಗಾಗಿ, ಭಾರತವು ತನ್ನ ಪಾಲಿನ ಚಿನ್ನವನ್ನು ತನ್ನ ದೇಶದೊಳಗೆಯೇ ಇರಿಸಿಕೊಳ್ಳಲು ಯತ್ನಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




