ಮುಂಬೈ, ಏಪ್ರಿಲ್ 7: ಭಾರತದ ಷೇರು ಮಾರುಕಟ್ಟೆಗೆ ಇಂದು ಬ್ಲ್ಯಾಕ್ ಮಂಡೆ. ಬಿಎಸ್ಇ ಮತ್ತು ಎನ್ಎಸ್ಇಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಇಂದು ಕುಸಿತ ಕಂಡಿವೆ. ಸೆನ್ಸೆಕ್ಸ್ (BSE sensex) ಬರೋಬ್ಬರಿ 2,227 ಅಂಕಗಳನ್ನು ಕಳೆದುಕೊಂಡಿದೆ. ದಿನದ ಒಂದು ಹಂತದಲ್ಲಿ ಸೆನ್ಸೆಕ್ಸ್ 4,000 ಅಂಕಗಳಷ್ಟು ಇಳಿಮುಖಗೊಂಡಿತ್ತು. ಬಳಿಕ ಚೇತರಿಸಿಕೊಂಡು 73,137.90 ಅಂಕಗಳೊಂದಿಗೆ ದಿನಾಂತ್ಯಗೊಳಿಸಿತು. ಆದರೂ ಕೂಡ ಒಂದೇ ದಿನದಲ್ಲಿ ಶೇ. 2.95ರಷ್ಟು ನಷ್ಟ ಕಂಡಿದೆ ಸೆನ್ಸೆಕ್ಸ್.
ನಿಫ್ಟಿ ಇನ್ನೂ ಹೆಚ್ಚಿನ ಆಘಾತ ಅನುಭವಿಸಿದೆ. ಶೇ. 3.24 ಅಥವಾ 742 ಅಂಕಗಳನ್ನು ನಿಫ್ಟಿ ಕಳೆದುಕೊಂಡು 22,161.60 ಅಂಕಗಳಲ್ಲಿದೆ. ಬೆಳಗಿನ ವಹಿವಾಟಿನ ಒಂದು ಹಂತದಲ್ಲಿ ಅದು 21,900 ಅಂಕಗಳ ಒಳಗೆ ಕುಸಿದುಹೋಗಿತ್ತು.
ಭಾರತದ ಷೇರು ಮಾರುಕಟ್ಟೆಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಕುಸಿತಗಳಾಗಿವೆ. ಒಂದೇ ದಿನದಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಕುಸಿತವಾದ ನಿದರ್ಶನಗಳಿವೆ. ಭಾರತದಲ್ಲಿ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಅತಿದೊಡ್ಡ ಕುಸಿತಗೊಂಡ ಐದು ಸಂದರ್ಭಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ಭಾರತ ಮಾತ್ರವಲ್ಲ, ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ; ಏನು ಕಾರಣ?
1992ರಲ್ಲಿ ಹರ್ಷದ್ ಮೆಹ್ತಾ ಹಗರಣವು ಷೇರು ಮಾರುಕಟ್ಟೆಯನ್ನು ಅಲುಗಾಡಿಸಿತ್ತು. ಆಗ 1992ರ ಏಪ್ರಿಲ್ 28ರಂದು ಸೆನ್ಸೆಕ್ಸ್ ಶೇ. 12.7ರಷ್ಟು ಕುಸಿತ ಕಂಡಿತ್ತು. ಅದು ಶೇಕಡಾವಾರು ಲೆಕ್ಕದಲ್ಲಿ ಸೆನ್ಸೆಕ್ಸ್ ಒಂದು ದಿನದಲ್ಲಿ ಕಂಡ ಬೃಹತ್ ಕುಸಿತ.
2001ರಲ್ಲೂ ಕೇತನ್ ಪರೇಖ್ ಎನ್ನುವ ಬ್ರೋಕರ್ ಮಾಡಿದ ಹಗರಣ ಬೆಳಕಿಗೆ ಬಂದು, ಮಾರುಕಟ್ಟೆ ಅಲುಗಾಡಿತು. 2001ರ ಮಾರ್ಚ್ 2ರಂದು ಸೆನ್ಸೆಕ್ಸ್ ಶೇ. 4.13ರಷ್ಟು ಕುಸಿದಿತ್ತು.
2004ರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸೋತು ಯುಪಿಎ ಗೆದ್ದು ಅಧಿಕಾರ ಹಿಡಿಯಿತು. ವಾಜಪೇಯಿ ನೇತೃತ್ವದ ಹಿಂದಿನ ಎನ್ಡಿಎ ಸರ್ಕಾರದ ಆರ್ಥಿಕ ನೀತಿ ಇಲ್ಲಿಗೇ ನಿಂತುಬಿಡಬಹುದು ಎನ್ನುವ ಭೀತಿಯಲ್ಲಿ ಮಾರುಕಟ್ಟೆ ಅಲುಗಾಡಿತು. ಪರಿಣಾಮವಾಗಿ 2004ರ ಮೇ 17ರಂದು ಸೆನ್ಸೆಕ್ಸ್ ಒಂದೇ ದಿನದಲ್ಲಿ ಶೇ. 11.1ರಷ್ಟು ಕುಸಿಯಿತು.
ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
2008ರಲ್ಲಿ ಜಾಗತಿಕ ಹಣಕಾಸು ಹಿಂಜರಿತ ಉಂಟಾಯಿತು. ಆ ವರ್ಷದ ಜನವರಿ 21ರಂದು ಸೆನ್ಸೆಕ್ಸ್ ಶೇ. 7.4ರಷ್ಟು ಕುಸಿಯಿತು. ಅದು ಇನ್ನೂ ದೊಡ್ಡ ಕುಸಿತಕ್ಕೆ ನಾಂದಿ ಹಾಡಿತು. ಸೆನ್ಸೆಕ್ಸ್ ಗರಿಷ್ಠ ಮಟ್ಟದಿಂದ ಶೇ. 60ರಷ್ಟು ನಷ್ಟ ಕಂಡಿತು. ಇದು ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಹಿನ್ನಡೆ ಎನಿಸಿದೆ.
2020ರಲ್ಲಿ ಕೋವಿಡ್ ರೋಗ ಜಗತ್ತನ್ನು ತಲ್ಲಣಗೊಳಿಸಿತು. ಷೇರು ಮಾರುಕಟ್ಟೆಗೂ ಇದರ ಪರಿಣಾಮವಾಯಿತು. 2020ರ ಮಾರ್ಚ್ 23ರಂದು ಸರ್ಕಾರ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿತು. ಆ ದಿನ ಷೇರು ಮಾರುಕಟ್ಟೆ ಶೇ. 13.2ರಷ್ಟು ಕುಸಿಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ