
ನವದೆಹಲಿ, ಅಕ್ಟೋಬರ್ 16: ಭಾರತದ ಜಿಡಿಪಿ (GDP) ಲೆಕ್ಕಾಚಾರದ ಪರಿಷ್ಕೃತ ವಿಧಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಧಿಕೃತವಾಗಿ ಬೆಂಬಲ ವ್ಯಕ್ತಪಡಿಸಿದೆ. ಭಾರತದ ಆರ್ಥಿಕ ದತ್ತಾಂಶ ಹಾಗೂ ಜಿಡಿಪಿ ವಿಧಾನದಲ್ಲಿ ಮಾಡಲಾಗಿರುವ ಬದಲಾವಣೆಗಳು ಅತ್ಯಂತ ಸಮರ್ಪಕವಾಗಿದ್ದು, ಇವು ಜಾಗತಿಕ ಉತ್ತಮ ಅಭ್ಯಾಸಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ಐಎಂಎಫ್ ಬಣ್ಣಿಸಿದೆ.
ಭಾರತ ಸರ್ಕಾರವು ತನ್ನ ಜಿಡಿಪಿ ಲೆಕ್ಕಾಚಾರದ ಕ್ರಮಗಳಲ್ಲಿ ತಂದಿರುವ ಬದಲಾವಣೆಗಳು ಮತ್ತು ನವೀಕೃತ ವಿಧಾನಗಳು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಐಎಂಎಫ್ ಸಂಸ್ಥೆಯ ಸ್ಟಾಟಿಸ್ಟಿಕ್ಸ್ ವಿಭಾಗದ ಸಲಹೆಗಳಿಗೂ ಇದು ಅನುಗುಣವಾಗಿದೆ ಎಂದು ಐಎಂಎಫ್ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ತಿಳಿಸಿದ್ದಾರೆ. ಮಲೇಷ್ಯಾ ರಾಜಧಾನಿ ಬ್ಯಾಂಕಾಕ್ನಿಂದ ಅವರು ಈ ಕುರಿತು ಮಾತನಾಡುತ್ತಿದ್ದರು.
ಇದನ್ನೂ ಓದಿ: ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ
ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳು ಮತ್ತು ಜಿಡಿಪಿ ಲೆಕ್ಕಾಚಾರದ ವಿಧಾನಗಳ ಬಗ್ಗೆ ಕೇಳಿಬಂದಿದ್ದ ಚರ್ಚೆಗಳು ಹಾಗೂ ಅನುಮಾನಗಳ ನಡುವೆ ಐಎಂಎಫ್ ಈ ಸ್ಪಷ್ಟನೆ ನೀಡಿದೆ. ಭಾರತದ ಆರ್ಥಿಕ ವಿಸ್ತರಣೆ ಮತ್ತು ದತ್ತಾಂಶ ಸಂಗ್ರಹಣೆಯ ಕ್ರಮಗಳು ವಿಶ್ವಾಸಾರ್ಹವಾಗಿವೆ ಎಂದು ಐಎಂಎಫ್ ಸಮರ್ಥಿಸಿಕೊಂಡಿದೆ.
ಭಾರತದ ರುಪಾಯಿ ಕರೆನ್ಸಿ ಮೌಲ್ಯ ಕುಸಿತಗೊಂಡಿದ್ದು, ಇದು ಆರ್ಥಿಕ ನೀತಿಗಳ ವೈಫಲ್ಯವನ್ನು ತೋರಿಸುತ್ತದೆ ಎನ್ನುವ ಟೀಕೆಗಳನ್ನು ಶ್ರೀನಿವಾಸನ್ ಅಲ್ಲಗಳೆದಿದ್ದಾರೆ. ‘ಇಂಧನ ಪೂರೈಕೆಯ ಆಘಾತದ ಪರಿಸ್ಥಿತಿಯನ್ನು ಭಾರತ ಉತ್ತಮವಾಗಿ ನಿಭಾಯಿಸಿದೆ. ಈ ಇಂಧನ ಬಿಕ್ಕಟ್ಟಿನ ಪರಿಣಾಮವು ಕರೆನ್ಸಿ ಮೌಲ್ಯದ ಮೇಲೆ ಆಗಿದೆ. ಅದನ್ನು ಆರ್ಥಿಕ ವೈಫಲ್ಯವೆಂದು ಭಾವಿಸಲು ಆಗುವುದಿಲ್ಲ’ ಎಂದು ಐಎಂಎಫ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು
‘ವಿನಿಮಯ ದರವು ಜಾಗತಿಕ ಬಡ್ಡಿದರ, ಹೂಡಿಕೆದಾರರ ರಿಸ್ಕ್ ತಾಳಿಕೆ ಮತ್ತು ತೈಲ ಬೆಲೆಗಳ ಸಂಯೋಗವಾಗಿರುತ್ತದೆ. ವಿನಿಮಯ ದರದ ಮೇಲೆ ಒತ್ತಡ ಇದೆ ಎಂದಲ್ಲಿ ಅದು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದಂತಾಗುವುದಿಲ್ಲ’ ಎಂದು ಕೃಷ್ಣ ಶ್ರೀನಿವಾಸನ್ ವಿವರಿಸಿದ್ದಾರೆ.
ಐಎಂಎಫ್ ತನ್ನ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಡೇಟಾ ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 7ರಷ್ಟು ಆಗಬಹುದು ಎಂದು ಅಂದಾಜಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದ ಬೆಳವಣಿಗೆ ಸಾಧಿಸಲಿದೆ. ಚೀನಾದ ಜಿಡಿಪಿ ದರ ಶೇ. 5ಕ್ಕಿಂತಲೂ ಕಡಿಮೆ ಇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ