ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ

30,213 ಕೋಟಿ ರೂ ಮೊತ್ತದ ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒಗೆ ಸಾಂಸ್ಥಿಕ ಹೂಡಿಕೆದಾರರಿಂದ ಸಖತ್ ಸ್ಪಂದನೆ ಸಿಕ್ಕಿದೆ. ಆಂಕರ್ ಇನ್ವೆಸ್ಟರ್​ಗಳಿಗೆ ಮೀಸಲಾದ ಷೇರುಗಳಿಗೆ 30 ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿತ್ತು. ಈಗ ಇತರ ಸಾಂಸ್ಥಿಕ ಹೂಡಿಕೆದಾರರಿಗೆ (ಕ್ಯೂಐಬಿ) ಮೀಸಲಾದ ಷೇರುಗಳಿಗೆ ಎರಡು ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಇದರೊಂದಿಗೆ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾದ ಶೇ. 45ರಷ್ಟು ಷೇರುಗಳು ಸಂಪೂರ್ಣ ಹೂಡಿಕೆ ಪಡೆದಿವೆ.

ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ
ಜಿಯೋ
Image Credit source: Getty Images

Updated on: Oct 21, 2026 | 11:54 AM

ಮುಂಬೈ, ಅಕ್ಟೋಬರ್ 21: ಜಿಯೋ ಪ್ಲಾಟ್​ಫಾರ್ಮ್​ ಐಪಿಒಗೆ ಆಂಕರ್ ಇನ್ವೆಸ್ಟರ್​ಗಳಿಂದ ಸಿಕ್ಕಾಪಟ್ಟೆ ಬಿಡ್ಡಿಂಗ್ ನಡೆದ ಬೆನ್ನಲ್ಲೇ ಈಗ ಸಾಂಸ್ಥಿಕ ಹೂಡಿಕೆದಾರರಿಗೆ (ಕ್ಯೂಐಬಿ) ಮೀಸಲಾದ ಷೇರುಗಳೂ ಕೂಡ ಕ್ಷಣಮಾತ್ರದಲ್ಲಿ ಸಬ್​ಸ್ಕ್ರೈಬ್ ಆಗಿವೆ. ಎನ್​ಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯವಾಗಿರುವ ದತ್ತಾಂಶದ ಪ್ರಕಾರ ಸಾಂಸ್ಥಿಕ ಹೂಡಿಕೆದಾರರ ಪಾಲಿನ ಷೇರುಗಳು ಎರಡು ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿವೆ. ಅದೂ ಕೇವಲ 28 ನಿಮಿಷದಲ್ಲಿ ಪೂರ್ಣಗೊಂಡಿದೆ. ಎನ್​ಐಐ ಮತ್ತು ರೀಟೇಲ್ ಪಾಲಿನ್ ಷೇರುಗಳಿಗೂ ಕೂಡ ಉತ್ತಮ ಬೇಡಿಕೆ ಇದೆ.

ಕ್ವಾಲಿಫೈಡ್ ಇನ್ಸ್​ಟಿಟ್ಯೂಶನಲ್ ಬಯರ್ಸ್ ಎಂದು ವರ್ಗೀಕರಿಸಲಾಗುವ ಸಾಂಸ್ಥಿಕ ಹೂಡಿಕೆದಾರರಿಗೆ ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ 4.86 ಕೋಟಿ ಷೇರುಗಳನ್ನು ಮೀಸಲಿರಿಸಲಾಗಿದೆ. 1.95 ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಕ್ಯೂಐಬಿಗಳಿಂದ ಈ ಐಪಿಒದಲ್ಲಿ ಜಿಯೋ 5,442 ಕೋಟಿ ರೂ ಹೂಡಿಕೆ ಸಂಗ್ರಹಿಸುತ್ತಿದೆ.

ಎನ್​ಐಐ ಅಥವಾ ನಾನ್-ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್​ಗಳಿಗೆ ಶೇ. 13.51 ರಷ್ಟು ಷೇರುಗಳು (3.65 ಕೋಟಿ ಷೇರು) ಮೀಸಲಾಗಿವೆ. ಇವುಗಳಿಗೂ ಉತ್ತಮ ಸ್ಪಂದನೆ ಸಿಗುತ್ತಿದೆ. ಇನ್ನು ವೈಯಕ್ತಿಕ ಹೂಡಿಕೆದಾರರಿಗೆ ಶೇ. 31.52ರಷ್ಟು ಷೇರುಗಳು ಮೀಸಲಾಗಿವೆ. ಅಂದರೆ, 8.51 ಕೋಟಿ ಷೇರುಗಳು ರೀಟೇಲ್ ಹೂಡಿಕೆದಾರರಿಗೆ ಖರೀದಿಸಲು ಲಭ್ಯ ಇವೆ.

ಇದನ್ನೂ ಓದಿ: ಆಂಕರ್ ಬುಕ್‌ಗೆ 30 ಪಟ್ಟು ಹೆಚ್ಚು ಬೇಡಿಕೆ: ಮ್ಯೂಚುವಲ್ ಫಂಡ್‌ಗಳು, ವಿಮಾ ಕಂಪನಿಗಳಿಂದ ಹೂಡಿಕೆ

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ: ಷೇರುಗಳ ಹಂಚಿಕೆ ಹೀಗಿದೆ

ಒಟ್ಟು ವಿತರಣೆಯಾಗುವ ಷೇರುಗಳು: 26,99,99,999 ಷೇರುಗಳು (27 ಕೋಟಿ)

ಒಟ್ಟು ಹೂಡಿಕೆ ನಿರೀಕ್ಷೆ: 30,213 ಕೋಟಿ ರೂ

  • ರೀಟೇಲ್ ಹೂಡಿಕೆದಾರರು: 8,51,16,622 ಷೇರುಗಳು (ಶೇ. 31.52)
  • ಆಂಕರ್ ಇನ್ವೆಸ್ಟರ್ಸ್: 7,29,57,105 ಷೇರು (ಶೇ. 27.02)
  • ಕ್ಯೂಐಬಿ (ಅರ್ಹ ಸಾಂಸ್ಥಿಕ ಹೂಡಿಕೆದಾರರು): 4,86,28,069 ಷೇರುಗಳು (ಶೇ. 18.01)
  • ನಾನ್-ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್: 3,64,78,552 ಷೇರುಗಳು (ಶೇ. 13.51)
  • ಉದ್ಯೋಗಿಗಳಿಗೆ ಮೀಸಲಾದ ಷೇರುಗಳು: 44,68,275 (ಶೇ. 1.65)

ಆಂಕರ್ ಇನ್ವೆಸ್ಟರ್​ಗಳಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್

ಅಕ್ಟೋಬರ್ 19ರಂದು ಜಿಯ ಪ್ಲಾಟ್​ಫಾರ್ಮ್ಸ್ ಬರೋಬ್ಬರಿ 212 ಆಂಕರ್ ಇನ್ವೆಸ್ಟರ್​ಗಳಿಂದ 8,109.84 ಕೋಟಿ ರೂ ಹೂಡಿಕೆ ಪಡೆದಿದೆ. ಆದರೆ, ಅದಕ್ಕೆ ಸಲ್ಲಿಕೆಯಾದ ಬಿಡ್ಡಿಂಗ್ ಮೊತ್ತ ಬರೋಬ್ಬರಿ ಎರಡೂವರೆ ಲಕ್ಷ ಕೋಟಿ ರೂನಷ್ಟು. ಬ್ಲ್ಯಾಕ್​ರಾಕ್, ಕ್ಯಾಪಿಟಲ್ ಗ್ರೂಪ್, ಜೆಪಿ ಮಾರ್ಗನ್ ಅಸೆಟ್ ಮ್ಯಾನೇಜ್ಮೆಂಟ್, ಫ್ರಾಂಕ್ಲಿನ್ ಟೆಂಪಲ್ಟನ್ ಇತ್ಯಾದಿ ಅಂತರರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆಗಳು ಹೂಡಿಕೆ ಮಾಡಿವೆ. ಭಾರತದ ಹಲವು ಮ್ಯೂಚುವಲ್ ಫಂಡ್ ಹೌಸ್​ಗಳಿಂದಲೂ ಹೂಡಿಕೆ ಬಂದಿದೆ.

ಆಂಕರ್ ಇನ್ವೆಸ್ಟರ್ಸ್, ಕ್ಯೂಐಬಿ, ಎನ್​ಐಐಗಳೆಂದರೆ ಯಾರು?

ಇಲ್ಲಿ ಆಂಕರ್ ಇನ್ವೆಸ್ಟರ್ಸ್ ಮತ್ತು ಕ್ಯೂಐಬಿಗಳು ಸಾಂಸ್ಥಿಕ ಹೂಡಿಕೆದಾರರಾಗಿರುತ್ತವೆ. ಅಂದರೆ, ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು, ಮ್ಯೂಚುವಲ್ ಫಂಡ್​ಗಳು, ಪೆನ್ಷನ್ ಫಂಡ್​ಗಳು, ಇನ್ಷೂರೆನ್ಸ್ ಫಂಡ್​ಗಳು, ಕಮರ್ಷಿಯಲ್ ಬ್ಯಾಂಕುಗಳು, ಸಾರ್ವಜನಿಕ ಹಣಕಾಸು ಸಂಸ್ಥೆಗಳು ಮೊದಲಾದವನ್ನು ಸಾಂಸ್ಥಿಕ ಹೂಡಿಕೆದಾರರೆಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಜಿಯೋ ಐಪಿಒ: 2ಜಿ ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಎಐವರೆಗೆ ವ್ಯವಹಾರ ವೃದ್ಧಿಸಲು ಜಿಯೋಗೆ ವಿಫುಲ ಅವಕಾಶ

ಐಪಿಒದಲ್ಲಿ ಆಂಕರ್ ಇನ್ವೆಸ್ಟರ್ ಆಗಬೇಕಾದರೆ ಕೆಲ ಷರತ್ತುಗಳಿವೆ. ಆಂಕರ್ ಇನ್ವೆಸ್ಟರ್ ಎನಿಸಬೇಕಾದರೆ ಮೊದಲು ಅದು ಸಾಂಸ್ಥಿಕ ಹೂಡಿಕೆದಾರನಾಗಿರಬೇಕು, ಮತ್ತು ಕನಿಷ್ಠ 10 ಕೋಟಿ ರೂ ಮೊತ್ತದಷ್ಟು ಹೂಡಿಕೆ ಮಾಡಬೇಕು. ಹಾಗು ಸಾಂಸ್ಥಿಕ ಹೂಡಿಕೆದಾರರನ್ನು ಆಂಕರ್ ಇನ್ವೆಸ್ಟರ್ ಆಗಿ ವರ್ಗೀಕರಿಸುವ ಅಂತಿಕ ನಿರ್ಧಾರ ಐಪಿಒ ನಡೆಸುವ ಸಂಸ್ಥೆಯದ್ದಾಗಿರುತ್ತದೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಆಂಕರ್ ಇನ್ವೆಸ್ಟರ್ಸ್ ಮತ್ತು ಕ್ಯೂಐಬಿಗಳಿಗೆ ಶೇ. 45ರಷ್ಟು ಷೇರುಗಳು ಮೀಸಲಾಗಿವೆ.

ಇನ್ನು, ಎನ್​ಐಐ ಎಂದರೆ ನಾನ್ ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್ಸ್. ಇವರು ವೈಯಕ್ತಿಕ ಹೂಡಿಕೆದಾರರು. ಆದರೆ, ಅನಿವಾಸಿ ಭಾರತೀಯರು ಮತ್ತು ಶ್ರೀಮಂತ ಭಾರತೀಯರು (ಎಚ್​ಎನ್​ಐ) ಎನ್​ಐಐಗಳೆಂದು ವರ್ಗೀಕರಣಗೊಳ್ಳುತ್ತಾರೆ. ರೀಟೇಲ್ ಹೂಡಿಕೆದಾರರು ಶ್ರೀಮಂತರಾಗಿದ್ದರೆ ರೀಟೇಲ್ ಮತ್ತು ಎನ್​ಐಐ ಈ ಎರಡೂ ಕೆಟಗರಿಯಿಂದ ಐಪಿಒದಲ್ಲಿ ಬಿಡ್ಡಿಂಗ್ ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us