
ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಇಂಡಸ್ಟ್ರೀಸ್ನ ಡಿಜಿಟಲ್ ಮತ್ತು ಟೆಲಿಕಾಂ ವಿಭಾಗವಾದ ಜಿಯೋ ಪ್ಲಾಟ್ಫಾರ್ಮ್ಸ್ ಲಿ ಸಂಸ್ಥೆಯ ಐಪಿಒದಲ್ಲಿ ಪ್ರೈಸ್ ಬ್ಯಾಂಡ್ ನಿಗದಿಯಾಗಿದೆ. ಸಾರ್ವಜನಿಕರಿಗೆ ಅಕ್ಟೋಬರ್ 21ರಿಂದ 23ರವರೆಗೆ ಐಪಿಒ ಸಬ್ಸ್ಕ್ರಿಪ್ಷನ್ ತೆರೆಯಲಿದ್ದು, ಒಟ್ಟು 30,213 ಕೋಟಿ ರೂ ಬಂಡವಾಳ ಸಂಗ್ರಹಣೆಯ ನಿರೀಕ್ಷೆ ಇದೆ. ಪ್ರತೀ ಷೇರಿಗೆ 1,065 ರೂನಿಂದ 1,119 ರೂವರೆಗೆ ಪ್ರೈಸ್ ಬ್ಯಾಂಡ್ ನಿಗದಿ ಮಾಡಲಾಗಿದೆ. ಇದು ಎಲ್ಐಸಿ, ಹ್ಯೂಂಡಾಯ್ ಸಂಸ್ಥೆಯದಕ್ಕಿಂತಲೂ ದೊಡ್ಡ ಐಪಿಒ ಆಗಿದೆ. ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನ್ನುವ ದಾಖಲೆ ಬರೆಯಲಿದೆ.
ಸಾರ್ವಜನಿಕರಿಗೆ ಅಕ್ಟೋಬರ್ 21ರಿಂದ 23ರವರೆಗೆ ಸಬ್ಸ್ಕ್ರಿಪ್ಷನ್ ತೆರೆಯಲಿದೆಯಾದರೂ, ಆಂಕರ್ ಇನ್ವೆಸ್ಟರ್ ಅಥವಾ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಅಕ್ಟೋಬರ್ 19ರಂದು ಬಿಡ್ಡಿಂಗ್ ಸಲ್ಲಿಸಲು ಅವಕಾಶ ಕೊಡಲಾಗಿದೆ.
ಜಿಯೋ ಪ್ಲಾಟ್ಫಾರ್ಮ್ಸ್ನ ಐಪಿಒದಲ್ಲಿ 27 ಕೋಟಿ ಸಂಖ್ಯೆಯಷ್ಟು ಶೇರುಗಳು ವಿತರಣೆ ಆಗುತ್ತಿವೆ. ಎಲ್ಲವೂ ಕೂಡ ಹೊಸದಾಗಿ ವಿತರಿಸಲಾಗುತ್ತಿದೆ. ರೀಟೇಲ್ ಹೂಡಿಕೆದಾರರಿಗೆ ಕನಿಷ್ಠ ಶೇ. 35ರಷ್ಟು ಶೇರುಗಳು ಲಭ್ಯ ಇರುತ್ತವೆ. ಸಾಂಸ್ಥಿಕ ಹೂಡಿಕೆದಾರರಿಗೆ ಗರಿಷ್ಠ ಶೇ. 50ರವರೆಗೆ ಶೇರುಗಳು ಖರೀದಿಗೆ ಲಭ್ಯ ಇರುತ್ತವೆ.
ಇದನ್ನೂ ಓದಿ: ಅಂಬಾನಿ ಮತ್ತು ರಿಲಯನ್ಸ್ನ ಮೂರು ತಲೆಮಾರಿನ ಕಥೆ; ಗುರಿ, ಛಲ, ಕನಸುಗಳೊಂದಿಗೆ ಹೆಜ್ಜೆ
ರೀಟೇಲ್ ಹೂಡಿಕೆದಾರರು ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದಲ್ಲಿ ಪಾಲ್ಗೊಳ್ಳಬೇಕಾದರೆ ಕನಿಷ್ಠ 1 ಲಾಟ್ ಖರೀದಿಸಬೇಕು. ಒಂದು ಲಾಟ್ನಲ್ಲಿ 12 ಶೇರುಗಳಿರುತ್ತವೆ. 13,428 ರೂ ಆಗುತ್ತದೆ. ಇದು ಕನಿಷ್ಠ ಹೂಡಿಕೆ.
ಒಬ್ಬ ರೀಟೇಲ್ ಹೂಡಿಕೆದಾರ ಗರಿಷ್ಠ 14 ಲಾಟ್ ಖರೀದಿಸಲು ಅವಕಾಶ ಇರುತ್ತದೆ. 14 ಲಾಟ್ಗಳಲ್ಲಿ ಒಟ್ಟು 168 ಶೇರುಗಳಿರುತ್ತವೆ. ಒಟ್ಟು ಹೂಡಿಕೆ 1,87,992 ರೂ ಆಗುತ್ತದೆ. ಒಬ್ಬ ಹೂಡಿಕೆದಾರ 1ರಿಂದ 14ರವರೆಗೆ ಎಷ್ಟು ಲಾಟ್ ಬೇಕಾದರೂ ಖರೀದಿಸಬಹುದು.
ಇದನ್ನೂ ಓದಿ: ಅಪ್ಪನ ಕನಸು ಸಾಕಾರಗೊಳಿಸಿದ ಮುಕೇಶ್ ಅಂಬಾನಿ; ಕೋಟ್ಯಂತರ ಕನಸುಗಳನ್ನು ಬೆಸೆದ ಜಿಯೋ
ಜಿಯೋ ಪ್ಲಾಟ್ಫಾರ್ಮ್ಸ್ನ ಕೆಲ ಅರ್ಹ ಉದ್ಯೋಗಿಗಳಿಗೆ ಷೇರು ಖರೀದಿ ಸೌಲಭ್ಯ ನೀಡಲಾಗಿರುತ್ತದೆ. ಇವರಿಗೆಂದೇ 500 ಕೋಟಿ ರೂ ಮೊತ್ತದವರೆಗೆ ಷೇರುಗಳನ್ನು ರಿಸರ್ವ್ ಮಾಡಲಾಗಿರುತ್ತದೆ. ಪ್ರತೀ ಷೇರಿಗೆ ಇವರಿಗೆ 54 ರೂ ರಿಯಾಯಿತಿ ಇರುತ್ತದೆ.
ಇನ್ನು, ರಿಲಯನ್ಸ್ ಇಂಡಸ್ಟ್ರೀಸ್ನ ಕೆಲ ಅರ್ಹ ಷೇರುದಾರರಿಗೂ ಡಿಸ್ಕೌಂಟ್ ದರದಲ್ಇ 2,500 ಕೋಟಿ ರೂವರೆಗೂ ರಿಸರ್ವೇಶನ್ ಕೊಡಲಾಗಿದೆ.
ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆ ಈ ಐಪಿಒದಿಂದ ಬರುವ ಬಂಡವಾಳವನ್ನು ತನ್ನ ಕೆಲ ಬಾಧ್ಯತೆಗಳಿಗೆ ಬಳಸಲಿದೆ. ತನ್ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ (ಆರ್ಜೆಐಎಲ್) ಪಡೆದ ಸಾಲಗಳನ್ನು ತೀರಿಸಲು 27,500 ಕೋಟಿ ರೂ ಬಳಸಲಾಗುವುದು ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ