IIP: ಜುಲೈ ತಿಂಗಳ ಕೈಗಾರಿಕೆ ಉತ್ಪಾದನೆ ಸೂಚ್ಯಂಕ ಶೇ 11.5ರಷ್ಟು ಏರಿಕೆ

ಜುಲೈ ತಿಂಗಳ ಐಐಪಿ ಶೇ 11.5ರಷ್ಟು ಏರಿಕೆ ಆಗಿದೆ. ಕಳೆದ ವರ್ಷದ ಬೇಸ್ ಕಡಿಮೆ ಆಗಿದ್ದರ ಪರಿಣಾಮ ಈ ಹೆಚ್ಚಳ ದಾಖಲಾಗಿದೆ.

IIP: ಜುಲೈ ತಿಂಗಳ ಕೈಗಾರಿಕೆ ಉತ್ಪಾದನೆ ಸೂಚ್ಯಂಕ ಶೇ 11.5ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 10, 2021 | 6:52 PM

ಜುಲೈ ತಿಂಗಳ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (IIP) ಶೇ 11.5ರಷ್ಟು ಏರಿಕೆ ಆಗಿದೆ. ಕಳೆದ ವರ್ಷ ಕೊರೊನಾ ಕಾರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದ ಕಡಿಮೆ ಬೇಸ್​ ಪರಿಣಾಮವಾಗಿ ಈ ರೀತಿಯ ಬೆಳವಣಿಗೆ ಆಗಿದೆ. ಉತ್ಪಾದನೆ ವಲಯವು ಐಐಪಿಯ ಶೇ 75ಕ್ಕೂ ಹೆಚ್ಚು ಒಳಗೊಂಡಿದೆ. ಅದು ಶೇ 10.5ರಷ್ಟು ಮೇಲೇರಿದೆ. ಗಣಿಗಾರಿಕೆ ಮತ್ತು ವಿದ್ಯುಚ್ಛಕ್ತಿ ಕ್ರಮವಾಗಿ ಶೇ 9.5 ಹಾಗೂ ಶೇ 11.1ರಷ್ಟು ಏರಿಕೆ ಕಂಡಿದೆ. ಗ್ರಾಹಕ ಬಳಕೆ ವಸ್ತುಗಳು ಪರಿಣಾಮಕಾರಿಯಾದ ಹೆಚ್ಚಳ ಕಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 20.2ರಷ್ಟು ಹೆಚ್ಚಳವನ್ನು ಕಂಡಿದೆ. ಗ್ರಾಹಕ ಬಳಕೆಯೇತರ ವಸ್ತುಗಳು ಮಾತ್ರ ಶೇ 1.8ರಷ್ಟು ಕುಗ್ಗಿದೆ. ಈ ವರ್ಷದ ಜುಲೈನಲ್ಲಿ ಪ್ರಮುಖ ವಲಯಗಳು ಶೇ 9.4ರಷ್ಟು ಬೆಳವಣಿಗೆ ಕಂಡಿವೆ. ಐಐಪಿಯಲ್ಲಿ ಶೇ 40ರಷ್ಟು ಪ್ರಮುಖ ವಲಯಗಳು ಇವೆ.

ಎಂಟು ಮುಖ್ಯ ಕೈಗಾರಿಕೆಗಳು ಭಾರೀ ಏರಿಕೆ ಕಂಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 7.6ರಷ್ಟು ಕುಸಿತ ಕಂಡಿತ್ತು. ಹಣಕಾಸು ಸಚಿವಾಲಯವು ಆರ್ಥಿಕ ಚೇತರಿಕೆ ಬಗ್ಗೆ ಸಕಾರಾತ್ಮಕವಾಗಿದೆ. ಕೊರೊನಾ ಎರಡನೇ ಅಲೆಯು ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಆದರೆ V ಆಕಾರದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದಿಂದ ಹೇಳಲಾಗಿದೆ.

ಈಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿ, ಹಣಕಾಸು ವರ್ಷ22ರಲ್ಲಿ ಶೇ 9.5ರಷ್ಟು ಬೆಳವಣಿಗೆ ಸಾಧಿಸುವುದಾಗಿ ಹೇಳಿದ್ದಾರೆ. ಈ ಹಂತದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 9.5ರಷ್ಟು ಬೆಳವಣಿಗೆ ಸಾಧಿಸುವ ಬಗ್ಗೆ ಆಶಾದಾಯಕ ಆಗಿದ್ದೇವೆ. ಆದರೆ ಕೊರೊನಾ ಮೂರನೇ ಅಲೆಯ ಅನಿಶ್ಚಿತತೆ ಇದ್ದೇ ಇದೆ ಎಂದು ಅವರು ಆತಂಕವನ್ನೂ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ

(July IIP Increased By 11.5 Percent Here Is The Details)