ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

Kaveri Jet Engine Project explained: ಫೈಟರ್ ಜೆಟ್​​ಗಳಿಗೆ ಎಂಜಿನ್ ರೂಪಿಸುವುದು ಅಷ್ಟು ಸರಳ ಸಂಗತಿಯಲ್ಲ. ವಿಶ್ವದ ಎರಡು ಮೂರು ದೇಶಗಳಿಗೆ ಮಾತ್ರವೇ ಸಿದ್ಧಿಸಿರುವ ತಂತ್ರಜ್ಞಾನ ಅದು. ಭಾರತವು ತನ್ನ ತೇಜಸ್ ಫೈಟರ್ ಜೆಟ್​​ಗೆ ಸ್ವಂತ ಎಂಜಿನ್ ನಿರ್ಮಿಸುವ ಸಾಹಸವನ್ನು 1989ರಲ್ಲೇ ಆರಂಭಿಸಲಾಯಿತು. ಆದರೆ, ತಂತ್ರಜ್ಞಾನ ಮತ್ತು ಪ್ರಮುಖ ವಸ್ತುಗಳ ಲಭ್ಯ ಇಲ್ಲದ ಕಾರಣ ಪ್ರಾಜೆಕ್ಟ್ ನಿಂತುಹೋಗಿತ್ತು. ಈಗ ಪುನಾರಂಭಗೊಂಡಿದೆ. ಆದರೆ, ಡ್ರೋನ್​​ಗಳಿಗೆ ಸೂಕ್ತವಾಗುವ ಎಂಜಿನ್ ರೂಪಿಸಲಾಗಿದೆ.

ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
ಕಾವೇರಿ ಎಂಜಿನ್

Updated on: May 28, 2025 | 2:14 PM

ನವದೆಹಲಿ, ಮೇ 28: ಭಾರತದ ಬ್ರಹ್ಮೋಸ್ ಶಕ್ತಿ ಬಗ್ಗೆ ಸಾಕಷ್ಟು ಪ್ರಶಂಸೆಯ ನುಡಿಗಳು ಬಂದಂತೆ, ಈಗ ಕಾವೇರಿ ಎಂಜಿನ್ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕೆಲವೇ ದೇಶಗಳು ಮತ್ತು ಕಂಪನಿಗಳಿಗೆ ಸಿದ್ಧಿಸಿರುವ ತಂತ್ರಜ್ಞಾನ ಪಡೆಯುವ ಸಾಹಸದಲ್ಲಿ ಕಾವೇರಿ ಎಂಜಿನ್ (Kaveri Jet Engine) ಭಾರತದ ಮೊದಲ ಗಂಭೀರ ಪ್ರಯತ್ನ. ಸ್ವಂತವಾಗಿ ಅಭಿವೃದ್ಧಿಪಡಿಸಲಾದ ಕಾವೇರಿ ಜೆಟ್ ಎಂಜಿನ್​​ನ ಪರೀಕ್ಷಾರ್ಥ ಪ್ರಯೋಗಗಳು ಮುಗಿಯಲು ಅಂತಿಮ ಹಂತ ಮಾತ್ರವೇ ಬಾಕಿ ಇರುವುದು. 25 ಗಂಟೆಗಳ ಟ್ರಯಲ್ ಉಳಿದಿದೆ. ರಷ್ಯಾದಿಂದ ಅನುಮತಿ ಸಿಕ್ಕ ಕೂಡಲೇ ಈ ಅಂತಿಮ ಹಂತದ ಪರೀಕ್ಷೆಯೂ ನಡೆದುಹೋಗಲಿದೆ. ಹಿಂದಿನ ಟ್ರಯಲ್​ಗಳೆಲ್ಲವೂ ರಷ್ಯಾದಲ್ಲೇ ನಡೆದಿವೆ.

ಇವತ್ತಿನ ಕಾವೇರಿ ಜೆಟ್ ಎಂಜಿನ್ ಡ್ರೋನ್​​ಗಳಿಗೆ ಮಾತ್ರ ಸೀಮಿತ

ಮೂರ್ನಾಲ್ಕು ದಶಕಗಳ ಹಿಂದೆಯೇ ಬಹಳ ಮಹತ್ವಾಕಾಂಕ್ಷೆಯ ಕಾವೇರಿ ಎಂಜಿನ್ ಪ್ರಾಜೆಕ್ಟ್ ಆರಂಭವಾಗಿತ್ತು. ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತು. ಈಗ ಶತ್ರುಭಯ ಹೆಚ್ಚಾಗಿರುವುದರಿಂದ ಭಾರತವು ತನ್ನದೇ ಸ್ವಂತ ಜೆಟ್ ಎಂಜಿನ್ ಹೊಂದುವ ಗುರಿಯಲ್ಲಿ ಕಾವೇರಿ ಪ್ರಾಜೆಕ್ಟ್ ಅನ್ನು ಪುನಾರಂಭಿಸಿದೆ.

ಫ್ರಾನ್ಸ್ ದೇಶದ ಸಫ್ರಾನ್ ಎನ್ನುವ ಕಂಪನಿಯು ಕಾವೇರಿ ಎಂಜಿನ್ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನ ನೆರವು ನೀಡುತ್ತಿದೆ. ಎಂಜಿನ್ ತಯಾರಿಕೆಯಲ್ಲೂ ಡಿಆರ್​ಡಿಒ ಜೊತೆ ಸಫ್ರಾನ್ ಕೈಜೋಡಿಸಿದೆ.

ಇದನ್ನೂ ಓದಿ
ಕರ್ನಾಟಕದ ಹೆಮ್ಮೆಯ ಎಚ್​​ಎಎಲ್ ಅನ್ನು ಕಸಿಯಲು ಹೊರಟಿತಾ ಆಂಧ್ರ?
ಕರ್ನಾಟಕಕ್ಕೆ ದಕ್ಕಿದ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ
ವಿಶ್ವದ ಬಲಿಷ್ಠ ಫೈಟರ್ ಜೆಟ್ ನಿರ್ಮಾಣಕ್ಕೆ ಭಾರತ ಹೆಜ್ಜೆ
ಭಾರತದ ಬಿಎಫ್​​​ಎಸ್: ವಿಶ್ವದ ನಿಖರ ವೆದರ್ ಫೋರ್​​ಕ್ಯಾಸ್ಟಿಂಗ್ ಮಾಡಲ್

ಇದನ್ನೂ ಓದಿ: ಬೆಂಗಳೂರಿನಿಂದ ಎಚ್​​ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?

ಆದರೆ, ಈ ಎಂಜಿನ್​​​ನಲ್ಲಿ ಹಲವು ಮಿತಿಗಳಿದ್ದು, ಪೈಲಟ್​​ಗಳಿಂದ ಚಲಾಯಿಸಲಾಗುವ ಜೆಟ್​​ಗಳಲ್ಲಿ ಇದನ್ನು ಬಳಸಲು ಆಗುವುದಿಲ್ಲ. ಹೀಗಾಗಿ, ಪೈಲಟ್ ಇಲ್ಲದ ವಿಮಾನಗಳಿಗೆ ಮಾತ್ರ ಈಗಿನ ಕಾವೇರಿ ಎಂಜಿನ್ ಸೂಕ್ತವಾಗಿದೆ. ಅಂದರೆ, ಅನ್​​ಮಾನ್ಡ್ ಏರಿಯಲ್ ವೆಹಿಕಲ್ ಎಂದು ಕರೆಯಲಾಗುವ ಡ್ರೋನ್​​ಗಳಿಗೆ ಈ ಎಂಜಿನ್ ಅನ್ನು ಅಳವಡಿಸಬಹುದಾಗಿದೆ.

ಫೈಟರ್ ಜೆಟ್​ಗಳಿಗೆ ಕಾವೇರಿ ಎಂಜಿನ್ ಯಾಕೆ ಸೂಕ್ತವಲ್ಲ?

ಜೆಟ್ ಎಂಜಿನ್ ಅಭಿವೃದ್ಧಿಪಡಿಸುವುದು ಅಷ್ಟು ಸುಲಭವಲ್ಲ. ಅಮೆರಿಕ, ಯುಕೆ, ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳ ಕೆಲ ಕಂಪನಿಗಳಿಗೆ ಮಾತ್ರ ಈ ಸಾಮರ್ಥ್ಯ ಇರುವುದು. ಭಾರತದಲ್ಲಿರುವ ಜೆಟ್ ವಿಮಾನಗಳಿಗೆ ಎಂಜಿನ್​​ಗಳನ್ನು ಅಮೆರಿಕದ ಜಿಇ ಮತ್ತು ರಷ್ಯಾದ ಕ್ಲಿಮೋವ್ ಕಂಪನಿಗಳು ಒದಗಿಸುತ್ತವೆ. ಚೀನಾ ದೇಶದ ಕೆಲ ಫೈಟರ್ ಜೆಟ್​​ಗಳಿಗೆ ಈಗಲೂ ಕೂಡ ರಷ್ಯಾದಿಂದ ಎಂಜಿನ್ ಹಾಕಲಾಗುತ್ತಿದೆ.

ಜೆಟ್ ಎಂಜಿನ್ ತಯಾರಿಕೆ ಅಷ್ಟು ಸುಲಭವಲ್ಲ

ಜೆಟ್ ಎಂಜಿನ್ ಟರ್ಬೈನ್​​ಗಳು 1,600 ಡಿಗ್ರಿ ಉಷ್ಣಾಂಶಕ್ಕಿಂತ ಹೆಚ್ಚು ಬಿಸಿಯಾಗಿರುತ್ತವೆ. ಲೋಹಗಳು ಕರಗುವಷ್ಟು ಬಿಸಿ ಅದು. ಸಿಂಗಲ್ ಕ್ರಿಸ್ಟಲ್ ಸೂಪರ್ ಅಲಾಯ್, ಸಿರಾಮಿಕ್ ಕೋಟಿಂಗ್ ಇತ್ಯಾದಿ ಅಗತ್ಯ ಬೀಳುತ್ತದೆ. ಎಂಜಿನ್ ಅನ್ನು ಸೂಪರ್ ಕೂಲಿಂಗ್ ಮಾಡಬಲ್ಲಂತಹ ತಂತ್ರಜ್ಞಾನವೂ ಗೊತ್ತಿರಬೇಕು. ಇದರ ಒಂದೊಂದು ಬಿಡಿಭಾಗದ ತಯಾರಿಕೆ ಅಷ್ಟು ಸುಲಭವಿರಲ್ಲ. ಬಹಳ ಸುಧಾರಿತ ಮೆಟೀರಿಯಲ್ ಸೈನ್ಸ್ ಟೆಕ್ನಿಕ್ ಅನ್ನು ಉಪಯೋಗಿಸಬೇಕು. ಈ ಟೆಕ್ನಿಕ್​​​ಗಳು ಪೂರ್ಣವಾಗಿ ಸಿದ್ಧಿಸಿರುವುದು ಅಮೆರಿ, ಫ್ರಾನ್ಸ್ ಮತ್ತು ರಷ್ಯಾಗೆ ಮಾತ್ರವೇ.

ಇದನ್ನೂ ಓದಿ: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ

ಒಂದೊಂದು ಎಂಜಿನ್ ಅಭಿವೃದ್ಧಿಗೆ ದಶಕಗಳೇ ಆಗುತ್ತವೆ. ಅಷ್ಟೊಂದು ಸಂಶೋಧನೆ ಮತ್ತು ಪ್ಲಾನಿಂಗ್ ಅವಶ್ಯಕತೆ ಇರುತ್ತದೆ. ಹೀಗಾಗಿ, ಜೆಟ್ ವಿಮಾನದ ಎಂಜಿನ್​​ಗಳ ಗುಟ್ಟನ್ನು ಯಾವ ಕಂಪನಿಯೂ ಬಿಟ್ಟುಕೊಡೋದಿಲ್ಲ.

ಭಾರತದ ಕಾವೇರಿ ಎಂಜಿನ್ ತಯಾರಿಕೆ ಶುರುವಾಗಿದ್ದು 1989ರಲ್ಲಿ…

ಫೈಟರ್ ಜೆಟ್​​ಗಳಿಗೆ ಬಳಸುವ ಉದ್ದೇಶದಿಂದ ಸ್ವಂತವಾಗಿ ಎಂಜಿನ್ ತಯಾರಿಸಲು ಕಾವೇರಿ ಪ್ರಾಜೆಕ್ಟ್​​ಗೆ 1989ರಲ್ಲೇ ಅನುಮೋದನೆ ನೀಡಲಾಗಿತ್ತು. ಆದರೆ. ಅದಕ್ಕೆ ಬೇಕಾದ ಕೆಲ ಮಹತ್ವ ವಸ್ತುಗಳು, ಬ್ಲೇಡ್ ಟೆಕ್ನಾಲಜಿ ಆಗ ಭಾರತಕ್ಕೆ ಲಭ್ಯ ಇರಲಿಲ್ಲ. ಟೆಸ್ಟ್ ಸೌಲಭ್ಯವೂ ಸಿಕ್ಕಿರಲಿಲ್ಲ.

1998ರಲ್ಲಿ ಅಣು ಬಾಂಬ್ ಪರೀಕ್ಷೆ ಮಾಡಿದ ಕಾರಣಕ್ಕೆ ಭಾರತಕ್ಕೆ ಕೆಲ ಅಗತ್ಯ ವಸ್ತುಗಳ ಲಭ್ಯತೆ ಸಿಗದ ರೀತಿಯಲ್ಲಿ ನಿರ್ಬಂಧಗಳನ್ನು ಹಾಕಲಾಗಿತ್ತು. ಈ ಕಾರಣಕ್ಕೆ ಭಾರತಕ್ಕೆ ಕಾವೇರಿ ಜೆಟ್ ಎಂಜಿನ್ ತಯಾರಿಕೆಗೆ ಅಗತ್ಯವಾಗಿದ್ದ ವಸ್ತುಗಳು ಸಿಗಲಿಲ್ಲ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಕಂಪನಿ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ

ಎಲ್​​ಸಿಎ ತೇಜಸ್ ಯುದ್ಧವಿಮಾನಕ್ಕೆಂದು ಉದ್ದೇಶಿಸಲಾಗಿದ್ದ ಕಾವೇರಿ ಎಂಜಿನ್ ತನ್ನ ಗುರಿಯಲ್ಲಿ ವಿಫಲವಾಯಿತು. ಫೈಟರ್ ಜೆಟ್​​ಗಳಿಗೆ ಇದು ಸೂಕ್ತವಲ್ಲವೆಂಬುದು ಖಚಿತವಾಯಿತು. 2008ರಲ್ಲಿ ಕಾವೇರಿ ಪ್ರಾಜೆಕ್ಟ್ ಕೈಬಿಡಲಾಯಿತು.

ಈಗ ಡ್ರೋನ್​​ಗಳಿಗೆ ಸೂಕ್ತವಾಗುವ ರೀತಿಯಲ್ಲಿ ಕಾವೇರಿ ಎಂಜಿನ್ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ರಷ್ಯಾದಲ್ಲಿ ಅಂತಿಮ ಹಂತದ ಪರೀಕ್ಷೆಗಳಾದ ಬಳಿಕ ಈ ಎಂಜಿನ್​​ಗಳನ್ನು ಪೂರ್ಣಪ್ರಮಾಣದಲ್ಲಿ ತಯಾರಿಸುವ ಕೆಲಸ ನಡೆಯಲಿದೆ. ಕಾವೇರಿ ಎಂಜಿನ್ ಅಭಿವೃದ್ಧಿ ಇಷ್ಟಕ್ಕೇ ನಿಲ್ಲೋದಿಲ್ಲ. ಫೈಟರ್ ಜೆಟ್​​ಗಳಿಗೆ ಸೂಕ್ತವಾಗುವ ರೀತಿಯಲ್ಲಿ ಎಂಜಿನ್ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಭಾರತದ ಐದನೇ ತಲೆಮಾರಿನ ಫೈಟರ್ ಜೆಟ್​​ಗಳಿಗೆ ಸ್ವಂತ ಎಂಜಿನ್ ಅಳವಡಿಕೆಯಾದರೆ ಅಚ್ಚರಿ ಇರೋದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ