Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್​ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್​ಡಿ ಮುರಿಸೋದಾ?

ಹಣಕಾಸು ತುರ್ತು ಎಂಬ ಸಂದರ್ಭದಲ್ಲಿ ಎಫ್​.ಡಿ. ಮೇಲೆ ಸಾಲ ತೆಗೆದುಕೊಳ್ಳುವುದು ಉತ್ತಮವೋ ಅಥವಾ ಮುರಿಸುವುದು ಉತ್ತಮವೋ? ಇಲ್ಲಿ್ದೆ ವಿಶ್ಲೇಷಣೆ.

Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್​ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್​ಡಿ ಮುರಿಸೋದಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 05, 2021 | 11:49 AM

ಆಪತ್ಕಾಲಕ್ಕೆ ಆಗಲಿ ಎಂಬ ಕಾರಣದಿಂದ ಕೂಡಿಟ್ಟಿದ್ದ ಹಣವನ್ನು ತೆಗೆಯಬೇಕಾದ ಸ್ಥಿತಿ ಹಲವರದು, ಸಾಲ ಯಾವುದೂ ಉಳಿಸಿಕೊಳ್ಳುವುದೇ ಬೇಡ; ಇರುವ ಆಸ್ತಿಯನ್ನು ಮಾರಿ ಅವುಗಳನ್ನು ತೀರಿಸಿಕೊಂಡು ಬಿಡೋಣ ಅಂದುಕೊಳ್ಳುತ್ತಿರುವವರು ಕೆಲವರು. ಇದಕ್ಕೆ ಕಾರಣ ಏನು ಎಂಬುದನ್ನು ಮೊದಲಿಂದ ವಿವರಿಸಬೇಕು ಅಂತೇನೂ ಇಲ್ಲ. ಏಕೆಂದರೆ 2020ರ ಶುರುವಿನಿಂದ ಕೇಳಿಸಿಕೊಂಡು ಬಂದು, ರೇಜಿಗೆ ಹುಟ್ಟಿಸಿರುವ ಅದೇ ಕೊರೊನಾವೇ ಕಾರಣ. ಅದರಿಂದ ಬಿದ್ದ ಆರ್ಥಿಕ ಹೊಡೆತ ಕಾರಣ. ಹಲವರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ, ಹಲವರಿಗೆ ವೇತನ ಕಡಿತ ಆಗಿದೆ. ಅಂಥ ಸನ್ನಿವೇಶದಲ್ಲಿ ಆರ್ಥಿಕ ಒತ್ತಡ ಎದುರಾಗುವುದು ಸಹಜ. ಆರ್ಥಿಕ ಶಿಸ್ತು ಇರುವವರಾದರೂ ಇಂಥ ಅನಿರೀಕ್ಷಿತಗಳಿಗಾಗಿಯೇ ಒಂದಿಷ್ಟು ಹಣವನ್ನು ಜತನ ಮಾಡಿಟ್ಟುರುತ್ತಾರೆ. ತೀರಾ ಕುತ್ತಿಗೆಗೆ ಬಂದು, ಇನ್ನು ಆಗಲ್ಲ ಎಂದಾಗ ಆ ಹಣದ ಬಳಕೆ ಮಾಡುತ್ತಾರೆ.

ಹೌದು, ನಮಗೂ ಹಣದ ತುರ್ತಿದೆ. ನಮ್ಮ ಮುಂದಿರುವ ಆಯ್ಕೆಗಳಾದರೂ ಏನು ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಅದಕ್ಕೆ ಉತ್ತರ ಇಲ್ಲಿದೆ. ನೆನಪಿನಲ್ಲಿಡಿ, ನಿಮ್ಮದೇನಾದರೂ ಫಿಕ್ಸೆಡ್ ಡೆಪಾಸಿಟ್ಸ್ ಇದ್ದಲ್ಲಿ ಅದರ ಮೇಲೆ ಸಾಲ ಪಡೆಯುವುದು ಅತ್ಯಂತ ವೇಗವಾಗಿ ಹಣ ಪಡೆದುಕೊಳ್ಳುವು ವಿಧಾನ. ಈಗಂತೂ ನೆಟ್​ ಬ್ಯಾಂಕಿಂಗ್ ಮೂಲಕವಾಗಿ ಆನ್​ಲೈನ್​ನಲ್ಲೇ ಸಾಲ ಪಡೆಯುವುದಕ್ಕೆ ಬ್ಯಾಂಕ್​ಗಳು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿವೆ. ಆದ್ದರಿಂದ ಬ್ಯಾಂಕ್​ನಲ್ಲಿ ಎಫ್​ಡಿ ಇದೆ ಎಂದಾದರೆ ಅದನ್ನೇ ಅಡಮಾನ ಮಾಡಿ, ತಕ್ಷಣವೇ ಸಾಲ ಪಡೆಯಬಹುದು. ಎಫ್​.ಡಿ. ಮಾಡಿರುವ ಒಟ್ಟು ಮೊತ್ತದ ಶೇ 90- 95ರ ತನಕ ಸಾಲ ಸಿಗುತ್ತದೆ. ಇನ್ನು ಸಾಮಾನ್ಯವಾಗಿ ಬ್ಯಾಂಕ್​ಗಳು ಅವುಗಳಿಗೆ ಎಷ್ಟು ಬಡ್ಡಿ ನೀಡುತ್ತಿರುತ್ತಾರೋ ಅದಕ್ಕಿಂತ ಶೇ 2ರಷ್ಟು ಹೆಚ್ಚು ಬಡ್ಡಿಯನ್ನು ವಿಧಿಸುತ್ತಾರೆ.

ಹೀಗೊಂದು ಆಲೋಚನೆ ಕೆಲವರ ಆಲೋಚನೆ ಹೇಗಿರುತ್ತದೆ ಅಂದರೆ, ನಮ್ಮದೇ ಹಣ. ಅದಕ್ಕೆ ಬ್ಯಾಂಕ್​ನಿಂದ ನೀಡುವ ಬಡ್ಡಿಗಿಂತ ಶೇ 2ರಷ್ಟನ್ನು ಯಾಕೆ ಹೆಚ್ಚಿಗೆ ನೀಡಬೇಕು? ಅನುಕೂಲ ಆದಾಗ ಎಫ್​.ಡಿ. ಮಾಡಿದರಾಯಿತು. ಈಗ ಮುರಿಸೋಣ ಎಂದುಕೊಳ್ಳುತ್ತಾರೆ. ನೋಡಿ, ಮೊದಲನೇ ಆಯ್ಕೆ ಎಫ್​ಡಿ ಮೇಲೆ ಸಾಲ ಪಡೆದುಕೊಳ್ಳುವುದು ಅಥವಾ ಅವಧಿಗೆ ಪೂರ್ವವಾಗಿ ವಿಥ್​ಡ್ರಾ ಮಾಡವುದು. ಇವೆರಡರಲ್ಲಿ ಯಾವ ಆಯ್ಕೆ ಉತ್ತಮ? ಏನು ಮಾಡಬೇಕು?

ಇಂಥ ಸನ್ನಿವೇಶದಲ್ಲಿ ಯಾವ ರೀತಿಯಲ್ಲಿ ಹಣದ ಅಗತ್ಯ ಇದೆ ಎಂಬುದನ್ನು ನಿರ್ಧರಿಸಬೇಕು. ಬ್ಯಾಂಕ್​ಗಳು ಸಾಮಾನ್ಯವಾಗಿ ಎಫ್​.ಡಿ. ಒಟ್ಟು ಮೊತ್ತದ ಮೇಲೆ ಶೇ 85ರಿಂದ ಶೇ 95ರ ತನಕ ಲೋನ್ ನೀಡುತ್ತವೆ. 1 ಲಕ್ಷ ರೂಪಾಯಿ ಎಫ್​.ಡಿ. ಇದ್ದಲ್ಲಿ 85ರಿಂದ 95 ಸಾವಿರ ದೊರೆಯುತ್ತದೆ. ಒಂದು ವೇಳೆ ತುರ್ತಾಗಿ 60 ಸಾವಿರ ರೂಪಾಯಿ ಬೇಕು ಎಂದಾದಲ್ಲಿ ಅವಧಿಗೆ ಮುಂಚೆಯೇ ವಿಥ್​ ಡ್ರಾ ಮಾಡುವುದಕ್ಕಿಂತ ಸಾಲ ಪಡೆಯುವುದು ಉತ್ತಮ. ಹೀಗೆ ನೋಡದರೆ ಆ ಸಾಲವನ್ನು ಹಿಂತಿರುಗಿಸಬಹುದು ಜತೆಗೆ ಬಡ್ಡಿ ಬರುತ್ತಾ ಇರುತ್ತದೆ.

ಮೆಚ್ಯೂರಿಟಿಗೆ ಹತ್ತಿರ ಇದ್ದಲ್ಲಿ ಒಂದು ವೇಳೆ ಅವಧಿಗೆ ಮುಂಚೆ ಎಫ್​.ಡಿ. ಮುರಿಸುತ್ತೇನೆ ಅಂತ ಯೋಚಿಸುವುದಾದರೆ ಇದರಲ್ಲಿ ಒಂದು ನಷ್ಟ ಇದೆ. ಅವಧಿ ಮುಗಿಯುವ ಮುಂಚೆ ಎಫ್​.ಡಿ. ಮುರಿಸಿದರೆ ಅದಕ್ಕೆ ಬ್ಯಾಂಕ್​ಗಳಿಂದ ಶೇ 0.5ರಿಂದ ಶೇ 1ರ ತನಕ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಅದೂ ಕೆಲವು ಬ್ಯಾಂಕ್​ಗಳು ಯಾವುದೇ ದಂಡ ಹಾಕಲ್ಲ. ಆದ್ದರಿಂದ ಇನ್ನೇನು ಮೆಚ್ಯೂರಿಟಿಗೆ (ಪಕ್ವತೆಗೆ) ಹತ್ತಿರ ಇದಲ್ಲಿ ಎಫ್​.ಡಿ. ಮುರಿಸದಿರುವುದು ಉತ್ತಮ. ಒಂದು ವೇಳೆ ಎಫ್​.ಡಿ. ಮೊತ್ತ ಎಷ್ಟಿದೆಯೋ ಅದೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚು ಹಣದ ಅಗತ್ಯ ಇದಲ್ಲಿ ಮತ್ತು ಎಫ್​.ಡಿ. ಮೆಚ್ಯೂರಿಟಿಗೆ ಬಹಳ ವರ್ಷಗಳೇ ಬಾಕಿ ಇದ್ದಲ್ಲಿ ಅವಧಿಗೆ ಮುಂಚಿತವಾಗಿ ಎಫ್​.ಡಿ. ಮುರಿಸಬಹುದು.

ಇದನ್ನೂ ಓದಿ: SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?

(Loan On Fixed Deposits Or Withdraw Prematurely Which Option Better In Case Of Financial Emergency)