NPS Or PPF: ನಿವೃತ್ತಿ ಯೋಜನೆಗೆ ಎನ್ಪಿಎಸ್ ಅಥವಾ ಪಿಪಿಎಫ್ ಇವೆರಡರಲ್ಲಿ ಯಾವ ಹೂಡಿಕೆ ಉತ್ತಮ?
ನಿವೃತ್ತಿ ನಂತರದ ಬದುಕಿಗೆ ಸಿದ್ಧತೆ ಹೇಗಿರಬೇಕ? ಯಾವ ಹೂಡಿಕೆ ಉತ್ತಮ? ಅದರಲ್ಲೂ ಪಿಪಿಎಫ್ ಅಥವಾ ಎನ್ಪಿಎಸ್ ಇವೆರಡರ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬ ಮಾಹಿತಿ ಇಲ್ಲಿದೆ.
ಕೆಲಸಕ್ಕೆ ಸೇರಿಕೊಂಡ ಮೊದಲ ದಿನದಿಂದ ನಿವೃತ್ತಿ ಬದುಕಿಗೆ ಬೇಕಾದ ಆರ್ಥಿಕ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಬೇಕಾದದ್ದು ಪ್ರತಿ ವೇತನದಾರರ ಜವಾಬ್ದಾರಿ. 2021ನೇ ಇಸವಿಯಲ್ಲಿ ಇನ್ನು 35 ವರ್ಷದ ನಂತರದ ನಿವೃತ್ತಿ ಬದುಕಿಗೆ ಯೋಜನೆ ರೂಪಿಸುವಾಗ ಹಣದುಬ್ಬರದ ಕಡೆಗೂ ಗಮನ ಇರಲಿ. ಏಕೆಂದರೆ, ಈಗೇನೋ ಲೀಟರ್ ಪೆಟ್ರೋಲ್ ಬೆಲೆ 100ರ ಆಸುಪಾಸಿನಲ್ಲಿದೆ. ಇನ್ನು 35 ವರ್ಷದ ನಂತರ ಅದೆಲ್ಲಿಗೆ ಹೋಗಿ ನಿಂತಿರುತ್ತದೋ ಅಥವಾ ಪೆಟ್ರೋಲ್ ಬಳಕೆಯೇ ನಿಂತು ಹೋಗಿರುತ್ತದೋ ಬಲ್ಲವರ್ಯಾರು? ಆದರೆ ಒಂದಂತೂ ಸತ್ಯ; ನಿವೃತ್ತಿ ಬದುಕಿಗೆ ಆರ್ಥಿಕ ಭದ್ರತೆ ಬಹಳ ಮುಖ್ಯ. ನೀವೇನು ಯೋಚನೆ ಮಾಡಿದ್ದೀರಿ? ಇನ್ನೂ ಮಾಡಿಲ್ಲವಾ? ಅಥವಾ ಈಗೊಂದು ಬ್ರೇಕ್ ಬಿದ್ದಿದೆಯಾ? ಇರಲಿ ಬಿಡಿ. ಈ ಲೇಖನಲ್ಲಿ ಎರಡು ಉಳಿತಾಯದ ಇನ್ಸ್ಟ್ರುಮೆಂಟ್ ಬಗ್ಗೆ ಚರ್ಚಿಸಲಾಗುತ್ತಿದೆ. ಅದರ ಪ್ರಯೋಜನ ನಿಮಗೆ ಖಂಡಿತಾ ಆಗುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇದೆಯಲ್ಲಾ ಸಂಪೂರ್ಣ ಸುರಕ್ಷಿತವಾದ ಹೂಡಿಕೆ. ಕನಿಷ್ಠ 15 ವರ್ಷಗಳ ಲಾಕ್ ಇನ್ ಅವಧಿ ಇದೆ. ಆ ನಂತರ ಖಾತೆ ಮಾಡಿಸಿದ ವ್ಯಕ್ತಿಗೆ 60 ವರ್ಷ ತುಂಬುವ ತನಕ ಅವಧಿಯನ್ನು ವಿಸ್ತರಿಸಿಕೊಂಡು ಹೋಗಬಹುದು. ಇದರ ಅತಿ ದೊಡ್ಡ ಲಾಭ ಏನು ಗೊತ್ತಾ? ಪಿಪಿಎಫ್ನ ಸಂಪೂರ್ಣ ಮೊತ್ತ, ಅಸಲು ಹಾಗೂ ಬಡ್ಡಿಯು ಮೆಚ್ಯೂರಿಟಿ ಅವಧಿಯಲ್ಲಿ ತೆರಿಗೆಯಿಂದ ಮುಕ್ತವಾಗಿರುತ್ತದೆ. ಅದೆಷ್ಟು ಮೊತ್ತವೇ ಆದರೂ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ.
ಆದರೆ, ಪಿಪಿಎಫ್ನಲ್ಲಿ ಇರುವ ಮಿತಿ ಏನೆಂದರೆ, ಬಡ್ಡಿ ದರ. ಸದ್ಯಕ್ಕೇನೋ ಶೇ 7.1ರಷ್ಟಿದೆ. ಪ್ರತಿ ಮೂರು ತಿಂಗಳಿಗೆ ಒಂದು ಸಲ ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡುತ್ತಿರುತ್ತದೆ. ಕಳೆದ 2 ವರ್ಷದಲ್ಲಿ ಶೇ 1.1ಕ್ಕಿಂತ ಹೆಚ್ಚು ಬಡ್ಡಿ ದರ ಇಳಿದಿದೆ. ಹೂಡಿಕೆಯ ಪ್ಲ್ಯಾನರ್ಗಳು ಹೇಳುವ ಪ್ರಕಾರ, ಇನ್ನಷ್ಟು ಇಳಿಕೆ ಆಗಬಹುದು. ಬಹಳ ಕಡಿಮೆ ರಿಟರ್ನ್ಸ್ ಸಿಗುತ್ತದೆ.
ನ್ಯಾಷನಲ್ ಪೆನ್ಷನ್ ಸ್ಕೀಮ್ (NPS) ನ್ಯಾಷನಲ್ ಪೆನ್ಷನ್ ಸ್ಕೀಮ್ ಅಥವಾ ಎನ್ಪಿಎಸ್ಗೆ ತಿಂಗಳಿಗೆ ಕನಿಷ್ಠ 500 ರೂಪಾಯಿ ಹಾಕಬಹುದು. ಅದೇ ಪಿಪಿಎಫ್ಗೆ ವರ್ಷಕ್ಕೆ ಕನಿಷ್ಠ 500 ರೂಪಾಯಿ ಹಾಕಿದರೂ ಸಾಕು. ಆದರೆ ಇದು ಪಿಪಿಎಫ್ನಂತಲ್ಲ. 60 ವರ್ಷದ ತನಕ ಎನ್ಪಿಎಸ್ ಲಾಕ್ ಆಗಿಬಿಡುತ್ತದೆ. ಮಕ್ಕಳ ಶಿಕ್ಷಣ, ಮದುವೆ ಹಾಗೂ ಗಂಭೀರ ಸ್ವರೂಪದ ಕಾಯಿಲೆ ಸಂದರ್ಭದಲ್ಲಿ ಬಿಟ್ಟು ಉಳಿದಂತೆ ಭಾಗಶಃ ವಿಥ್ ಡ್ರಾ ಮಾಡಲು ಸಹ ಅವಕಾಶ ಇಲ್ಲ. ಎನ್ಪಿಎಸ್ನಲ್ಲಿನ ಹಣವನ್ನು ಸಾಲಪತ್ರಗಳು ಹಾಗೂ ಈಕ್ವಿಟಿ ಫಂಡ್ನಲ್ಲಿ ಹೂಡಲಾಗುತ್ತದೆ. ಕನಿಷ್ಠ ಶೇ 40ರಷ್ಟು ಹಾಗೂ ಗರಿಷ್ಠ ಶೇ 75ರಷ್ಟನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು. ಬಾಕಿ ಮೊತ್ತವನ್ನು ಸಾಲ ಪತ್ರದಲ್ಲಿ ಹೂಡಿಕೆ ಮಾಡಲಾಗುತ್ತದೆ.
ಒಂದು ಸಾಮಾನ್ಯ ಪರಿಪಾಠ ಏನು ಗೊತ್ತಾ? ವಯಸ್ಸು ಹೆಚ್ಚಿದಂತೆಲ್ಲ ಈಕ್ವಿಟಿ ಮೇಲಿನ ಹೂಡಿಕೆ ಕಡಿಮೆ ಆಗುತ್ತಾ ಸಾಗುತ್ತದೆ. ಪಾಲಿನ ಪ್ರಮಾಣ ಬದಲಾಗಬಹುದು. ಆದರೆ ಹೂಡಿಕೆ ಮಾದರಿ ಮಾತ್ರ ಹೀಗೆ. ಪ್ರತಿ ವರ್ಷವೂ ಸಾಲಪತ್ರ ಹಾಗೂ ಈಕ್ವಿಟಿ ಪ್ರಮಾಣವನ್ನು ನಿರ್ಧರಿಸಬೇಕು. ಎನ್ಪಿಎಸ್ ಹಾಗೂ ಪಿಪಿಎಫ್ ಎರಡಕ್ಕೂ ಆದಾಯ ತೆರಿಗೆ ಕಾಯ್ಕೆ 80C ಅಡಿಯಲ್ಲಿ ಅನುಕೂಲ ಸಿಗುತ್ತದೆ.
ಉದಾಹರಣೆ ಸಹಿತ ವಿವರಣೆ ಒಬ್ಬ ವ್ಯಕ್ತಿ ತನ್ನ 25ನೇ ವಯಸ್ಸಿನಿಂದ ತಿಂಗಳಿಗೆ 3 ಸಾವಿರ ರೂಪಾಯಿಯಂತೆ ಪಿಪಿಎಫ್ನಲ್ಲಿ ಹಣ ಹೂಡಲು ಶುರು ಮಾಡಿ, 60 ವರ್ಷದ ತನಕ ಹಣ ಹಾಕಿದರೆ ಎಷ್ಟು ಮೊತ್ತ ಸಿಗುತ್ತದೆ. ಈಗಿನ ಶೇ 7.1ರ ದರದಲ್ಲಿ ಆ ವ್ಯಕ್ತಿಯ ಹೂಡಿಕೆ 12.6 ಲಕ್ಷವಾದರೆ, ಕ್ಯುಮುಲೇಟಿವ್ ರಿಟರ್ನ್ ರೂ. 54.6 ಲಕ್ಷ ಆಗುತ್ತದೆ.
ಈ ಮೇಲ್ಕಂಡ ವಯಸ್ಸು ಹಾಗೂ ಮೊತ್ತವನ್ನೇ ಉದಾಹರಣೆಯಾಗಿ ಎನ್ಪಿಎಸ್ಗೆ ತೆಗೆದುಕೊಂಡರೆ, 60ನೇ ವಯಸ್ಸಿನಲ್ಲಿ 1.15 ಕೋಟಿ ರೂಪಾಯಿ ಸಿಗುತ್ತದೆ. ಇಲ್ಲಿ ಶೇ 10ರಷ್ಟು ರಿಟರ್ನ್ಸ್ ನಿರೀಕ್ಷಿಸಲಾಗಿದೆ. ಎನ್ಪಿಎಸ್ನಲ್ಲಿ 35 ವರ್ಷಗಳ ಅವಧಿಗೆ ಶೇ 10ರ ರಿಟರ್ನ್ ನಿರೀಕ್ಷೆ ಮಾಡುವುದು ಸಾಂಪ್ರದಾಯಿಕವಾಗಿಯೂ ಹಾಗೂ ತಾರ್ಕಿಕವಾಗಿಯೂ ಇದೆ ಎಂದು ಭಾವಿಸುತ್ತಾರೆ.
ಹೂಡಿಕೆದಾರರಿಗೆ 60 ವರ್ಷವಾದಾಗ 1.15 ಕೋಟಿ ರೂಪಾಯಿ ಸಿಗುತ್ತದೆ. ಅದರಲ್ಲಿ ಮೊದಲ ವರ್ಷ 69 ಲಕ್ಷ ರೂಪಾಯಿ ಮತ್ತು ಬಾಕಿ ಮೊತ್ತ 46 ಲಕ್ಷ ರೂಪಾಯಿಯನ್ನು ವಾರ್ಷಿಕ ವೇತನದಂತೆ (ವರ್ಷಕ್ಕೊಮ್ಮೆ) ನೀಡಲಾಗುತ್ತದೆ. ಹೂಡಿಕೆದಾರರಿಗೆ ತಿಂಗಳಿಗೆ 23 ಸಾವಿರ ರೂಪಾಯಿ ಪೆನ್ಷನ್ 60 ವರ್ಷದ ನಂತರ ದೊರೆಯುತ್ತದೆ. ಒಂದು ವೇಳೆ ಶೇ 70ರಷ್ಟು ಮೊತ್ತವನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದಲ್ಲಿ ಮೊತ್ತ ಇನ್ನೂ ಜಾಸ್ತಿ ಆಗುತ್ತದೆ.
ಅಂಥ ಸಂದರ್ಭದಲ್ಲಿ ಶೇ 12ರಷ್ಟು ರಿಟರ್ನ್ ನಿರೀಕ್ಷೆ ಮಾಡಬಹುದು. ಒಟ್ಟು ರಿಟರ್ನ್ 35 ವರ್ಷಗಳ ಹೂಡಿಕೆ ನಂತರ ರೂ. 1.9 ಕೋಟಿಯಿಂದ 2.1 ಕೋಟಿ ರೂಪಾಯಿ ಬರಬಹುದು. ಒಂದು ವೇಳೆ ಶೇ 40ರಷ್ಟನ್ನು ವಾರ್ಷಿಕ ವೇತನಕ್ಕಾಗಿ ಮೀಸಲಿಟ್ಟಲ್ಲಿ ಆ ವ್ಯಕ್ತಿಗೆ 78 ಲಕ್ಷ ಮೊತ್ತ 60ನೇ ವಯಸ್ಸಿನಲ್ಲಿ ಬರುತ್ತದೆ. 25,500 ರೂಪಾಯಿ ತಿಂಗಳ ಪೆನ್ಷನ್ ಬರುತ್ತದೆ.
ಯಾವ ಆಯ್ಕೆ ಉತ್ತಮ? ಎನ್ಪಿಎಸ್ ಹಾಗೂ ಪಿಪಿಎಫ್ ಎರಡೂ ನಿವೃತ್ತಿ ನಂತರದ ಬದುಕಿಗೇ. ಅದರಲ್ಲಿ ಎನ್ಪಿಎಸ್ ಮೊತ್ತ ಹೆಚ್ಚು ಬರುತ್ತದೆ. ಜತಗೆ ತೆರಿಗೆ ಅನುಕೂಲ ಗಮನಿಸಿದರೂ ಎನ್ಪಿಎಸ್ ಸರಳ ಹಾಗೂ ಸುಲಭವಾಗಿದೆ. ಒಂದು ಹಣಕಾಸು ವರ್ಷದಲ್ಲಿ ಎರಡರಿಂದಲೂ ಸಿಗುವ ಗರಿಷ್ಠ ಆದಾಯ ಅನುಕೂಲ ಅಂದರೆ ರೂ. 1.5 ಲಕ್ಷ. ಆದರೂ ಎನ್ಪಿಎಸ್ ಮಾರ್ಕೆಟ್ ಲಿಂಕ್ಡ್. ಅಂದರೆ ಮಾರುಕಟ್ಟೆಯ ಏರಿಳಿತಗಳ ಪ್ರಭಾವ ಇದರ ಮೇಲೆ ಆಗುತ್ತದೆ. ಆದ್ದರಿಂದ ರಿಟರ್ನ್ ಜಾಸ್ತಿ ಸಿಗುತ್ತದೆ.
ಒಂದು ವೇಳೆ ನಿವೃತ್ತಿಗೆ ಹೂಡಿಕೆ ಪ್ಲಾನ್ ನಿಮಗಿದ್ದರೆ ಹೆಚ್ಚಿನ ರಿರ್ನಸ್ ಸಿಗುವ ಎನ್ಪಿಎಸ್ ಆರಿಸಿಕೊಳ್ಳಿ. ಆದರೆ ಪ್ರತಿಯೊಬ್ಬರು ಪಿಪಿಎಫ್ ಖಾತೆಯನ್ನೂ ತೆರೆಯಬೇಕು. ಏಕೆಂದರೆ, ಗ್ಯಾರಂಟಿ ರಿಟರ್ನ್ ಸಿಗುತ್ತದೆ. ರಿಟರ್ನ್ ಕಡಿಮೆ ಇದ್ದರೂ ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ ವಿಶ್ಲೇಷಕರು.
ಲೇಖನದ ಮೂಲ: ಮನಿ9.ಕಾಮ್ ಮೂಲ ಲೇಖಕರು: ಅಂಕುರ್ ಸೇನ್ಗುಪ್ತಾ
ಇದನ್ನೂ ಓದಿ: Retirement Savings Plan ನಿವೃತ್ತಿಯ ನಂತರದ ಆರ್ಥಿಕ ಸಬಲತೆಗೆ ಹೂಡಿಕೆಯ ಆಯ್ಕೆಗಳು ಇಲ್ಲಿವೆ
(PPF or NPS which is the best retirement benefit investment builder plan? Here is an explainer)