Avalon Tech: ಷೇರುಪೇಟೆಯಲ್ಲಿ ಲಿಸ್ಟ್ ಆದ ಏವಲಾನ್ ಟೆಕ್, ಷೇರು ಬೆಲೆ 436 ರೂ; ಇದರಲ್ಲಿ ಹೂಡಿಕೆ ಮಾಡಬಹುದೇ? ಕಂಪನಿ ಹಿನ್ನೆಲೆ ತಿಳಿದಿರಿ

|

Updated on: Apr 18, 2023 | 12:14 PM

New Entry Into Share Market: ಷೇರು ಮಾರುಕಟ್ಟೆಯಲ್ಲಿ ಏವಲಾನ್ ಟೆಕ್ನಾಲಜೀಸ್ ಒಂದು ಷೇರಿಗೆ 436 ರುಪಾಯಿಯಂತೆ ಲಿಸ್ಟ್ ಆಗಿದೆ. ಬಿಎಸ್​ಇನಲ್ಲಿ ಇದರ ಆರಂಭಿಕ ವಹಿವಾಟು ಪ್ರತೀ ಷೇರಿಗೆ 431 ರೂ ಇದೆ. ಅಂದರೆ ಶೇ. 1.2ರಷ್ಟು ಕಡಿಮೆ ಬೆಲೆಗೆ ಅದು ಬಿಎಸ್​ಇನಲ್ಲಿ ಬೆಲೆ ಪಡೆದುಕೊಂಡಿದೆ.

Avalon Tech: ಷೇರುಪೇಟೆಯಲ್ಲಿ ಲಿಸ್ಟ್ ಆದ ಏವಲಾನ್ ಟೆಕ್, ಷೇರು ಬೆಲೆ 436 ರೂ; ಇದರಲ್ಲಿ ಹೂಡಿಕೆ ಮಾಡಬಹುದೇ? ಕಂಪನಿ ಹಿನ್ನೆಲೆ ತಿಳಿದಿರಿ
ಷೇರುಪೇಟೆ
Follow us on

ಮುಂಬೈ/ದೆಹಲಿ: ಚೆನ್ನೈನಲ್ಲಿ ಮುಖ್ಯಕಚೇರಿ ಹೊಂದಿರುವ ಏವಲಾನ್ ಟೆಕ್ನಾಲಜೀಸ್ ಸಂಸ್ಥೆ (Avalon Technologies) ಏಪ್ರಿಲ್ 18, ಮಂಗಳವಾರದಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮಾರುಕಟ್ಟೆಯ ಪಟ್ಟಿಗೆ ಸೇರಿದೆ. ಏಪ್ರಿಲ್ 3ರಿಂದ 6ರವರೆಗೆ ಏವಲಾನ್ ಟೆಕ್ ಐಪಿಒ ಆಫರ್ ನೀಡಿತ್ತು. ಕಂಪನಿಯ ಷೇರುಗಳನ್ನು ಕೊಳ್ಳಲು ಜನರು ಮುಗಿಬೀಳದೇ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿರುವುದು ವೇದ್ಯವಾಗಿದೆ. ಷೇರು ಮಾರುಕಟ್ಟೆಯಲ್ಲಿ ಏವಲಾನ್ ಟೆಕ್ನಾಲಜೀಸ್ ಒಂದು ಷೇರಿಗೆ 436 ರುಪಾಯಿಯಂತೆ ಲಿಸ್ಟ್ ಆಗಿದೆ. ಬಿಎಸ್​ಇನಲ್ಲಿ ಇದರ ಆರಂಭಿಕ ವಹಿವಾಟು ಪ್ರತೀ ಷೇರಿಗೆ 431 ರೂ ಇದೆ. ಅಂದರೆ ಶೇ. 1.2ರಷ್ಟು ಕಡಿಮೆ ಬೆಲೆಗೆ ಅದು ಬಿಎಸ್​ಇನಲ್ಲಿ ಬೆಲೆ ಪಡೆದುಕೊಂಡಿದೆ.

ಏಪ್ರಿಲ್ ಮೊದಲ ವಾರದಲ್ಲಿ ಆಫರ್ ಮಾಡಲಾದ ಅದರ ಐಪಿಒಗೂ (Avalon Technologies IPO) ಅಂಥ ಉತ್ಸಾಹದ ಸ್ಪಂದನೆ ಸಿಕ್ಕಿಲ್ಲ. ರೀಟೇಲ್ ಹೂಡಿಕೆದಾರರಿಗೆ ಮೀಸಲಿರಿಸಲಾಗಿದ್ದ ಷೇರುಗಳಲ್ಲಿ ಶೇ. 88ರಷ್ಟು ಮಾತ್ರ ಬಿಕರಿಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರು (QIB- Qualified Institutional Buyers) ಮಾತ್ರ ಎವಲಾನ್ ಟೆಕ್ನಾಲಜೀಸ್ ಕೈಹಿಡಿದಿದ್ದಾರೆ. ಸಾಂಸ್ಥಿಕರಲ್ಲದ ಹೂಡಿಕೆದಾರರಿಗೆ (NII- Non-Institutional Investors) ಮೀಸಲಿಡಲಾಗಿದ್ದ ಷೇರುಗಳಲ್ಲಿ ಶೇ. 43 ಮಾತ್ರ ಮಾರಾಟವಾಗಿದೆ. ಇಲ್ಲಿ ಕ್ಯೂಐಬಿ ಎಂದರೆ ಕನಿಷ್ಠ 800 ಕೋಟಿ ರೂನಷ್ಟು ಹೂಡಿಕೆ ಮಾಡಿರುವ ಹಾಗೂ ಹೂಡಿಕೆಯಲ್ಲಿ ಪರಿಣಿತಿ ಇರುವ ಸಂಸ್ಥೆಗಳು.

ಇದನ್ನೂ ಓದಿ: Apple Store: ಒಂದು ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಇಷ್ಟೊಂದು ಬಿಲ್ಡಪ್ಪಾ? ಭಾರತಕ್ಕೆ ಬಂದಿರುವ ಸಿಇಒ ಟಿಮ್ ಕುಕ್ ತಲೆಯಲ್ಲಿ ಬೇರಿನ್ನೇನಾದರೂ ಇದೆಯಾ?

ಏಪ್ರಿಲ್ 3ರಿಂದ 6ರವರೆಗೂ ಇದ್ದ ಏವಲಾನ್ ಐಪಿಒದಲ್ಲಿ 415ರಿಂದ 436ರೂವರೆಗೂ ಪ್ರೈಸ್ ಬ್ಯಾಂಡ್ ಇಡಲಾಗಿತ್ತು. ಷೇರುಗಳನ್ನು ಕೊಳ್ಳುವವರು ಕನಿಷ್ಠ 34 ಷೇರುಗಳ ಗುಚ್ಛವನ್ನು ಖರೀದಿಸಬೇಕು. ಅಂದರೆ ಎವಲಾನ್ ಟೆಕ್ ಷೇರು ಖರೀದಿಸಬೇಕೆನ್ನುವವರು ಕನಿಷ್ಠ 14,000 ರೂ ಹೂಡಿಕೆಯಾದರೂ ಮಾಡಬೇಕು. ಐಪಿಒದಲ್ಲಿ ಒಟ್ಟು ಷೇರುಗಳು ಮಾರಾಟಕ್ಕಿದ್ದದ್ದು 1,08,44,186 (ಸುಮಾರು 1 ಕೋಟಿ). ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಷೇರು ಕ್ಯೂಐಬಿಗಳಿಗೆ ಮೀಸಲಿಡಲಾಗಿತ್ತು. ಇವೆಲ್ಲವೂ ಮಾರಾಟವಾಗಿದೆ. ರೀಟೇಲ್ ಮತ್ತು ಎನ್​ಐಐಗಳಿಗೆ ಮೀಸಲಿಡಲಾಗಿದ್ದ ಷೇರುಗಳು ಪೂರ್ಣ ಮಾರಾಟ ಕಂಡಿಲ್ಲ.

ಎವಲಾನ್ ಟೆಕ್ ಕಂಪನಿ, ಅದರ ಲಾಭ, ವ್ಯವಹಾರದ ಬಗ್ಗೆ:

1999ರಲ್ಲಿ ಚೆನ್ನೈನಲ್ಲಿ ಆರಂಭವಾದ ಏವಲಾನ್ ಟೆಕ್ನಾಲಜೀಸ್ ಸಂಸ್ಥೆ ಒಂದು ಪೂರ್ಣಪ್ರಮಾಣದ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಸರ್ವಿಸಸ್ ಕಂಪನಿ. ಪಿಸಿಬಿ ಬೋರ್ಡ್, ಎಲೆಕ್ಟ್ರಾನಿಕ್ಸ್ ಬಾಕ್ಸ್ ಬ್ಯುಲ್ಡ್ ಇತ್ಯಾದಿ ಹಲವು ಪ್ರಿಸಿಶನ್ ಎಂಜಿನಿಯರಿಂಗ್ ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಎನಿಸಿದೆ. ಚೀನಾ, ನೆದರ್​ಲೆಂಡ್ಸ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿರುವ ಕಂಪನಿಗಳಿಗೆ ಇದು ಉತ್ಪನ್ನಗಳನ್ನು ತಯಾರಿಸಿ ಸರಬರಾಜು ಮಾಡುತ್ತದೆ.

ಇದನ್ನೂ ಓದಿ: ಸಾಲ ಪಡೆದು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದು ಒಳ್ಳೆಯದೇ? ಈ ಅಪಾಯಗಳ ಬಗ್ಗೆ ಇರಲಿ ಎಚ್ಚರಿಕೆ

ಇನ್ನು, ಈ ಕಂಪನಿಯ ಹಣಕಾಸು ಸ್ಥಿತಿ ಬಗ್ಗೆ ಹೇಳುವುದಾದರೆ 2022ರ ಹಣಕಾಸು ವರ್ಷದಲ್ಲಿ ಇದರ ಆದಾಯ ಸುಮಾರು 851 ಕೋಟಿ ರೂ ಇದೆ. ನಿವ್ವಳ ಲಾಭ 68 ಕೋಟಿ ರೂ ಇದೆ. ಹಣಕಾಸು ವಿಚಾರದಲ್ಲಿ ಸಾಕಷ್ಟು ಸ್ಥಿರತೆ ಹೊಂದಿದೆ.

ಏವಲಾನ್ ಟೆಕ್ನಾಲಜೀಸ್ ಕಂಪನಿಯ ಷೇರು ಖರೀದಿಸಬಹುದೇ?

ಏವಲಾನ್ ಟೆಕ್ನಾಲಜೀಸ್ ಕಂಪನಿ ಬಹಳ ಬೇಡಿಕೆ ಇರುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಒಂದು ಸಂಸ್ಥೆ. ಹಲವು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೇಕಾದ ಉತ್ಪನ್ನಗಳನ್ನು ಏವಲಾನ್ ಟೆಕ್ ತಯಾರಿಸುತ್ತದೆ. ಹೀಗಾಗಿ, ಈ ಕಂಪನಿ ಯಾವತ್ತೂ ಲಾಭದಾಯಕವಾಗಿ ನಡೆಯುತ್ತದೆ. ಉದ್ಯಮ ತಜ್ಞರ ಪ್ರಕಾರ, ದೀರ್ಘಾವಧಿ ಹೂಡಿಕೆ ಬಯಸುವವರು ಏವಲಾನ್ ಟೆಕ್​ನ ಷೇರುಗಳನ್ನು ಖರೀದಿಸಬಹುದು.

ಇದೇ ವೇಳೆ, ಕ್ವಿಕ್​ಟಚ್ ಟೆಕ್ನಾಲಜೀಸ್ ಎಂಬ ಐಟಿ ಕಂಪನಿ ಏಪ್ರಿಲ್ 18ರಂದು ಐಪಿಒಗೆ ತೆರೆದುಕೊಂಡಿದೆ. ಇದರ ಆಫರ್ ಪ್ರೈಸ್ ಪ್ರತೀ ಷೇರಿಗೆ 61 ರುಪಾಯಿ ಇದೆ. ಏಪ್ರಿಲ್ 21ರವರೆಗೂ ಇದರ ಐಪಿಒ ಆಫರ್ ಇರಲಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ