ಹಬ್ಬದ ಅವಧಿಯಲ್ಲಿ (Festive Season) ತುಸು ಹೆಚ್ಚೇ ಖರ್ಚಾಗುವುದು (Expenditure) ಸಹಜ. ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಗಳಲ್ಲಿ ಅನೇಕ ರಿಯಾಯಿತಿ ದರದ ಕೊಡುಗೆಗಳು ಲಭ್ಯವಿರುತ್ತವೆ. ಇದರಿಂದಾಗಿ ಗ್ರಾಹಕರು ತಮಗರಿವಿಲ್ಲದೆಯೇ ಹೆಚ್ಚು ಖರ್ಚು ಮಾಡುವಂತಾಗುತ್ತದೆ. ಇಂಥ ಖರ್ಚು ನಿಮ್ಮ ಹಣಕಾಸಿನ ಯೋಜನೆ ಮೇಲೆ ದೊಡ್ಡ ಹೊಡೆತ ನೀಡಬಹುದು. ಹೀಗಾಗಿ ಖರ್ಚುಗಳನ್ನು ಕಡಿಮೆ ಮಾಡುವುದಕ್ಕಾಗಿ ಮತ್ತು ಅಗತ್ಯವುಳ್ಳ ವಸ್ತುಗಳ ಖರೀದಿಗಾಗಿ ವಿವೇಕಯುತ ಕ್ರಮ ಕೈಗೊಳ್ಳುವುದು ಉಳಿತಾಯದ ಹಿತದೃಷ್ಟಿಯಿಂದ ಅಗತ್ಯ. ಈ ದೀಪಾವಳಿ (Diwali) ಹಬ್ಬದ ಅವಧಿಯಲ್ಲಿ ಅತಿಯಾಗಿ ಖರ್ಚಾಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ;
ಭಾವನಾತ್ಮಕ ಖರೀದಿಯನ್ನು ತಪ್ಪಿಸಿ
ಶಾಪಿಂಗ್ ಅಥವಾ ಖರೀದಿಯಲ್ಲಿ ಮನಸ್ಸಿನ ಪ್ರಚೋದನೆ ಬಹು ಮುಖ್ಯವಾಗಿ ಕೆಲಸ ಮಾಡುತ್ತದೆ. ಭಾವನಾತ್ಮಕವಾಗಿ ಖರೀದಿಗೆ ಮುಂದಾಗುವುದು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ವಸ್ತುವೊಂದು ಬೇಕೆನಿಸಿದಾಗ ಅದು ಅಗತ್ಯವಿದೆಯೋ ಇಲ್ಲವೋ ಎಂದು ವಿವೇಚಿಸದೆ, ಆಫರ್ ಇದೆ ಎಂಬ ಮಾತ್ರಕ್ಕೆ ಹಠಾತ್ ಖರೀದಿಗೆ ಮುಂದಾಗುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ಹಣಕಾಸಿನ ಒತ್ತಡಕ್ಕೆ ಒಳಗಾಗಬೇಕಾಗಬಹುದು. ದೈನಂದಿನ ವೆಚ್ಚಗಳ ಬಗ್ಗೆ ಶಿಸ್ತಿನಿಂದ ಇರಿ.
ನಿಮ್ಮ ಬಜೆಟ್ ತಿಳಿದಿರಲಿ
ಹಲವು ವಸ್ತುಗಳನ್ನು ಖರೀದಿಸಬೇಕಾಗಿ ಬಂದಾಗ ನಿಮ್ಮ ಬಜೆಟ್ ಏನಿದೆ ಎಂಬುದರ ಬಗ್ಗೆ ಗಮನವಿರಲಿ. ಖರ್ಚಿನ ಸಾಮರ್ಥ್ಯ, ಭವಿಷ್ಯದ ಹಣಕಾಸು ಲಭ್ಯತೆ, ಉಳಿತಾಯ ಹಾಗೂ ತಿಂಗಳ ಮಾಮೂಲಿ ಖರ್ಚಿನ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿಕೊಂಡೇ ಹಬ್ಬದ ಅವಧಿಯ ಶಾಪಿಂಗ್ಗೆ ಮುಂದಾಗುವುದು ಒಳ್ಳೆಯದು. ಇಲ್ಲವಾದಲ್ಲಿ ತಿಂಗಳ ಕೊನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು.
ದೀಪಾವಳಿ ಹಬ್ಬದ ಶಾಪಿಂಗ್ ಸಮಯದಲ್ಲಿ ಬಜೆಟ್ ಮೀರಿ ಖರ್ಚಾಗುವುದು ಅಥವಾ ಖರ್ಚು ಮಾಡುವುದು ಸಹಜ. ಆದರೆ, ಇದರಿಂದಾಗಿ ಹಬ್ಬದ ಋತುವಿನ ನಂತರದ ನಿಮ್ಮ ಅಗತ್ಯಗಳ ಮೇಲೆ ಹೊರೆಯಾಗದಿರಲಿ. ಬಾಡಿಗೆ ಅಥವಾ ಇಎಂಐಗಳಂತಹ ಪ್ರಾಥಮಿಕ ವೆಚ್ಚಗಳನ್ನು ಪೂರೈಸುವ ನಿಮ್ಮ ಸಾಮರ್ಥ್ಯದ ಮೇಲೆ ಹಬ್ಬದ ಶಾಪಿಂಗ್ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕ್ರೆಡಿಟ್ ಕಾರ್ಡ್ ಬಳಸಿಕೊಂಡೇ ಹೆಚ್ಚು ಖರ್ಚು ಮಾಡಿದ್ದರೂ, ಮರುಪಾವತಿ ಬಗ್ಗೆ ಜಾಗೃತರಾಗಿರಿ. ಯೋಜಿತವಲ್ಲದ ವೆಚ್ಚವು ನಿಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿ ಎಂದು ಬ್ಯಾಂಕ್ಬಾಜಾರ್ ಡಾಟ್ ಕಾಮ್ನ ಸಿಇಒ ಅದಿಲ್ ಶೆಟ್ಟಿ ಸಲಹೆ ನೀಡಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಖರೀದಿ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸಿ
ಪ್ರತಿ ವರ್ಷ ಹಬ್ಬದ ಅವಧಿಯ ಖರೀದಿಗಳ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡರೆ ಉತ್ತಮ. ಆ ಸಂದರ್ಭದಲ್ಲಿ ನಿಮ್ಮ ಬಳಿ ಹಣಕಾಸಿನ ಹರಿವು ಹೇಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಯೋಜನೆ ರೂಪಿಸಿ ಉಳಿತಾಯ ಮಾಡಿಕೊಂಡರೆ ಬಹಳ ಒಳ್ಳೆಯದು ಎಂದಿದ್ದಾರೆ ಹಣಕಾಸು ಸಲಹೆಗಾರರು. ಉದಾಹರಣೆಗೆ; ಹಬ್ಬದ ಅವಧಿಯಲ್ಲಿ 1 ಲಕ್ಷ ರೂ. ಖರ್ಚು ಮಾಡಬೇಕು ಎಂದುಕೊಂಡಿದ್ದೀರಿ ಎಂದುಕೊಳ್ಳೋಣ. ಇದಕ್ಕೆ ಪೂರಕವಾಗಿ ತಿಂಗಳಿಗೆ ಕನಿಷ್ಠ 10,000 ರೂ. ಆದರೂ ಉಳಿತಾಯ ಮಾಡಲಾರಂಭಿಸಿ. ಆರ್ಡಿ ಅಥವಾ ಇನ್ನಾವುದೇ ರೂಪದಲ್ಲಿ ಹೂಡಿಕೆ ಆರಂಭಿಸಿ. ಇದು ಹಬ್ಬದ ಅವಧಿಯಲ್ಲಿ ನಿಮಗೆ ಶಾಪಿಂಗ್ನಿಂದ ಹೆಚ್ಚಿನ ಹೊರೆಯಾಗುವುದನ್ನು ತಪ್ಪಿಸಬಹುದು.
ಅಗತ್ಯಗಳು ಮತ್ತು ಆದ್ಯತೆಗಳ ಮೇಲೆ ಗಮನವಿರಲಿ
ಶಾಪಿಂಗ್ ಮಾಡುವಾಗ ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳ ಮೇಲೆ ಗಮನವಿರಲಿ. ತೀರಾ ಅನಿವಾರ್ಯವಲ್ಲದ ವಸ್ತುಗಳ ಖರೀದಿಯನ್ನು ಮುಂದೂಡಬಹುದು. ತಕ್ಷಣಕ್ಕೆ ಅನಿವಾರ್ಯವಿದೆ ಎಂಬ ವಸ್ತುಗಳನ್ನಷ್ಟೇ ಖರೀದಿಸಿ.
ನೋ ಕಾಸ್ಟ್ ಇಎಂಐ ಆಯ್ಕೆಗಳ ಬಗ್ಗೆ ತಿಳಿಯಿರಿ
ಹಬ್ಬದ ಅವಧಿಯಲ್ಲಿ ವಿವಿಧ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡಲಾಗುತ್ತದೆ. ಇವುಗಳ ಬಗ್ಗೆ ಗಮನ ಇರಲಿ. ಇಂಥ ಆಫರ್ಗಳ ಪ್ರಯೋಜನ ಪಡೆಯುವುದರಿಂದ ಒಂದೇ ಬಾರಿಗೆ ದೊಡ್ಡ ಮೊತ್ತ ಖರ್ಚಾಗುವುದನ್ನು ತಡೆಯಬಹುದು. ಅಲ್ಲದೆ, ಬಡ್ಡಿರಹಿತವಾಗಿ ಕಂತಿನಲ್ಲಿ ಹಣವನ್ನು ಪಾವತಿ ಮಾಡಬಹುದು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮಗೊಳ್ಳಬುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ