ಟಾಟಾ ಟ್ರೆಂಟ್ ಪಕ್ಕಾ ಮಲ್ಟಿಬ್ಯಾಗರ್ ಷೇರು; ಒಂದೇ ವರ್ಷದಲ್ಲಿ ನಾಲ್ಕು ಪಟ್ಟು ಲಾಭ
Stock market updates: ಟಾಟಾ ಸಂಸ್ಥೆಯ ಟ್ರೆಂಟ್ನ ಷೇರುಬೆಲೆಯ ನಾಗಾಲೋಟ ಮುಂದುವರಿದಿದೆ. ಒಂದು ವರ್ಷದ ಅಂತರದಲ್ಲಿ ಅದರ ಷೇರುಬೆಲೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. 2,000 ರೂ ಇದ್ದ ಅದರ ಷೇರುಬೆಲೆ 8,042 ರೂ ತಲುಪಿದೆ. ಕಳೆದ 25 ವರ್ಷದಲ್ಲಿ 850 ಪಟ್ಟು ಹೆಚ್ಚು ಬೆಳೆದಿದೆ.
ಮುಂಬೈ, ಅಕ್ಟೋಬರ್ 8: ಟಾಟಾ ಗ್ರೂಪ್ಗೆ ಸೇರಿದ ಟ್ರೆಂಟ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಆರ್ಭಟ ಮುಂದುವರಿಸಿದೆ. ಇಂದು 592 ರೂನಷ್ಟು (ಶೇ. 7.95) ಬೆಲೆ ಹೆಚ್ಚಳವಾಗಿದೆ. ಸದ್ಯ ಮಂಗಳವಾರದ ದಿನಾಂತ್ಯದಲ್ಲಿ ಅದರ ಷೇರುಬೆಲೆ 8,042 ರೂ ತಲುಪಿದೆ. ಇದು ಟ್ರೆಂಟ್ನ ಸಾರ್ವಕಾಲಿಕ ಗರಿಷ್ಠ ಎತ್ತರ. ಒಂದು ವರ್ಷದ ಅಂತರದಲ್ಲಿ ಇದರ ಷೇರುಬೆಲೆ ಬರೋಬ್ಬರಿ 6,000 ರೂನಷ್ಟು ಹೆಚ್ಚಳವಾಗಿದೆ. 2,000 ರೂ ಇದ್ದ ಷೇರುಬೆಲೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಈ ಮೂಲಕ ಮಲ್ಟಿಬ್ಯಾಗರ್ ಷೇರುಗಳ ಪಟ್ಟಿಗೆ ಟ್ರೆಂಟ್ ಸೇರ್ಪಡೆಯಾಗಿದೆ.
ಟಾಟಾ ಗ್ರೂಪ್ಗೆ ಸೇರಿದ ಟ್ರೆಂಟ್ ಕಂಪನಿ ಫ್ಯಾಷನ್ ಉಡುಪುಗಳನ್ನು ಮಾರುವ ಉದ್ದಿಮೆಯಲ್ಲಿದೆ. ಅದರ ಬಿಸಿನೆಸ್ ಆಶಾದಾಯಕವಾಗಿದೆ. ತಾಂತ್ರಿಕ ಮಾನದಂಡಗಳೂ ಉತ್ತಮವಾಗಿವೆ. ಅದರ ಪಿಇ ರೇಶಿಯೋ ಬಹಳ ಅಧಿಕವೆನಿಸುವ 167ರ ಮಟ್ಟದಲ್ಲಿ ಇದ್ದರೂ, ಕಂಪನಿಯ ಬಿಸಿನೆಸ್ ಭವಿಷ್ಯ ಉತ್ತಮವಾಗಿರುವುದರಿಂದ ಷೇರಿಗೆ ಬೇಡಿಕೆ ಕ್ರಮೇಣವಾಗಿ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ ಅದರ ಷೇರುಬೆಲೆ ಏರಿಕೆಯಲ್ಲಿ ಸ್ಥಿರತೆ ಇರುವುದನ್ನು ಗಮನಿಸಬಹುದು.
ಇದನ್ನೂ ಓದಿ: ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್ಡಿಐ, ಎಫ್ಪಿಐ ಮತ್ತು ಎಫ್ಐಐ ಮಧ್ಯೆ ವ್ಯತ್ಯಾಸಗಳೇನು?
ಮಾರ್ಗನ್ ಸ್ಟಾನ್ಲೀ ಸಂಸ್ಥೆ ಕೂಡ ಟ್ರೆಂಟ್ಗೆ ಶುಭ ಸೂಚನೆ ಕೊಟ್ಟಿದೆ. ಟ್ರೆಂಟ್ಗೆ ‘ಓವರ್ವೈಟ್’ ವರ್ಗೀಕರಣವನ್ನು ಮುಂದುವರಿಸಿದೆ. ಮತ್ತೊಂದು ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಸಿಟಿ ಗ್ರೂಪ್ ಕೂಡ ಟ್ರೆಂಟ್ಗೆ ಪಾಸಿಟಿವ್ ರೇಟಿಂಗ್ ಕೊಟ್ಟಿದೆ. ಟ್ರೆಂಟ್ ಷೇರುಬೆಲೆ ಶೀಘ್ರದಲ್ಲೇ 9,250 ರೂಗೆ ಏರಬಹುದು ಎಂದು ಅದು ಪ್ರೈಸ್ ಟಾರ್ಗೆಟ್ ಅಂದಾಜಿಸಿದೆ.
ಟ್ರೆಂಟ್ ಸಂಸ್ಥೆಯ ಆದಾಯ, ಲಾಭ, ಲಾಭದ ಮಾರ್ಜಿನ್ ಇವೆಲ್ಲವೂ ಉತ್ತಮವಾಗಿದೆ. ಇವೆಲ್ಲವೂ ಕೂಡ ಷೇರುಮಾರುಕಟ್ಟೆಯಲ್ಲಿ ಟ್ರೆಂಟ್ ಷೇರಿಗೆ ಬೇಡಿಕೆ ಮುಂದುವರಿಯುವಂತೆ ಮಾಡಿದೆ. 25 ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ಟ್ರೆಂಟ್ ಷೇರುಬೆಲೆ ಶೇ. 82,380ರಷ್ಟು ಏರಿದೆ. 9 ರೂ ಆಸುಪಾಸಿನಲ್ಲಿ ಇದ್ದ ಅದರ ಷೇರುಬೆಲೆ ಅಂದಾಜಿಗೂ ನಿಲುಕದಷ್ಟು ಎತ್ತರಕ್ಕೆ ಏರಿದೆ.
ಇದನ್ನೂ ಓದಿ: ಜನರಿಗೆ ಷೇರುಪೇಟೆ ಭ್ರಮೆ ಎಂದ ಐಐಟಿ ಪ್ರೊಫೆಸರ್; ಪರ್ಯಾಯ ಹೂಡಿಕೆ ಮಾರ್ಗಗಳೇನು?
ಇಪ್ಪತ್ತೈದು ವರ್ಷದ ಹಿಂದೆ ಟ್ರೆಂಟ್ ಷೇರಿನ ಮೇಲೆ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು ಹೆಚ್ಚೂಕಡಿಮೆ 9 ಕೋಟಿ ರೂ ಆಗಿರುತ್ತಿತ್ತು. ಬಹುಶಃ ಬೇರೆ ಯಾವುದೇ ಹೂಡಿಕೆಯಿಂದಲೂ ಇಷ್ಟು ಪ್ರಮಾಣದ ಲಾಭ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ