ಪಿಎನ್‌ಬಿ ಕರೆನ್ಸಿ ಚೆಸ್ಟ್‌ನಲ್ಲಿ 17 ಕೋಟಿ ರೂ ನಕಲಿ ನೋಟು… ಬ್ಯಾಂಕ್ ಮ್ಯಾನೇಜರ್ ಬಂಧನ; ಫೇಕ್ ನೋಟುಗಳು ಅಲ್ಲಿ ಬಂದದ್ದು ಹೇಗೆ?
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಶಾಖೆಯೊಂದರ ಕರೆನ್ಸಿ ಚೆಸ್ಟ್‌ನಲ್ಲಿ 17.29 ಕೋಟಿ ರೂ ಮೊತ್ತದ ನಕಲಿ ನೋಟುಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಎನ್‌ಐಎ ತನಿಖೆ ನಡೆಸುತ್ತಿದ್ದು, ಶಾಖೆಯ ಮ್ಯಾನೇಜರ್ನನ್ನು ಬಂಧಿಸಿದೆ. ಉತ್ತರ ಪ್ರದೇಶದ ಸಹರಾನ್ಪುರ್ನ ಪಿಎನ್‌ಬಿ ಶಾಖೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 29ರಂದು ಪ್ರಕರಣ ದಾಖಲಾಗಿದೆ.

ಸಹಾರನ್‌ಪುರ, ಉ.ಪ್ರ., ಸೆಪ್ಟೆಂಬರ್ 9: ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (PNB) ಕರೆನ್ಸಿ ಚೆಸ್ಟ್‌ನಲ್ಲಿ ₹17.29 ಕೋಟಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ತೀವ್ರಗೊಳಿಸಿದ್ದು, ತಲೆಮರೆಸಿಕೊಂಡಿದ್ದ ಬ್ಯಾಂಕ್ ಮ್ಯಾನೇಜರ್ ಅಮಿತ್ ಕುಮಾರ್ ಅವರನ್ನು ಬಂಧಿಸಿದೆ. ಬ್ಯಾಂಕ್‌ನ ಅಧಿಕೃತ ಕರೆನ್ಸಿ ಚೆಸ್ಟ್‌ನೊಳಗೇ ಇಷ್ಟೊಂದು ದೊಡ್ಡ ಪ್ರಮಾಣದ ಕಳ್ಳನೋಟುಗಳು ಪತ್ತೆಯಾಗಿರುವುದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಜಗಾಧ್ರಿ ಕರೆನ್ಸಿ ಚೆಸ್ಟ್ ಮ್ಯಾನೇಜರ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಕುಮಾರ್ ಅವರನ್ನು ಚಂಡೀಗಢದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಲಕ್ನೋದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: 6ಜಿ ನೆಟ್ವರ್ಕ್ ಅಭಿವೃದ್ಧಿಪಡಿಸಲು ಅಮೆರಿಕ ನೇತೃತ್ವದ 25 ರಾಷ್ಟ್ರಗಳ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ
ನಕಲಿ ನೋಟು ಸೋರಿಕೆ ಪ್ರಕರಣ ಹೇಗೆ ಬೆಳಕಿಗೆ ಬಂತು?
ಜುಲೈನಲ್ಲಿ ಸಹಾರನ್‌ಪುರ ಪಿಎನ್‌ಬಿ ಶಾಖೆಯಿಂದ ಜೈಪುರದ ರಿಸರ್ವ್ ಬ್ಯಾಂಕ್ (RBI) ಶಾಖೆಗೆ ಕಳುಹಿಸಲಾಗಿದ್ದ ನಗದು ಚೀಲಗಳಲ್ಲಿ ವ್ಯತ್ಯಾಸ ಕಂಡುಬಂದ ನಂತರ ನಡೆಸಿದ ಆಡಿಟ್‌ನಲ್ಲಿ ಈ ಭಾರಿ ಅಕ್ರಮ ಪತ್ತೆಯಾಗಿದೆ. ನಕಲಿ ನೋಟುಗಳ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಹಿರಿಯ ಡಿವಿಷನಲ್ ಮ್ಯಾನೇಜರ್ ರವಿ ಕುಮಾರ್ ಕನ್ಸೆ, ಸುಶೀಲ್ ಕುಮಾರ್ ಮತ್ತು ಅಮಿತ್ ಕುಮಾರ್ ಅವರನ್ನು ಪಿಎನ್‌ಬಿ ಬ್ಯಾಂಕ್ ಈಗಾಗಲೇ ಅಮಾನತುಗೊಳಿಸಿದೆ.
ಎನ್‌ಐಎ ತನಿಖೆ: ಆಗಸ್ಟ್ 29 ರಂದು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು, ಘಟನೆಯ ಗಂಭೀರತೆ ಪರಿಗಣಿಸಿ ಸೆಪ್ಟೆಂಬರ್ 3 ರಂದು ಎನ್‌ಐಎ (NIA) ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದೆ.
ಇದನ್ನೂ ಓದಿ: ‘ಭಾರತ-ಚೀನಾ ಬಾಂಧವ್ಯ ಜಗತ್ತನ್ನೇ ಪರಿವರ್ತಿಸಬಲ್ಲುದು’: BRIC ಪರಿಕಲ್ಪನೆ ಮುಂದಿಟ್ಟವನಿಂದ ಅಚ್ಚರಿ ಅನಿಸಿಕೆ
ವಿಸ್ತರಿಸುತ್ತಿರುವ ತನಿಖೆಯ ವ್ಯಾಪ್ತಿ
ಕರೆನ್ಸಿ ಚೆಸ್ಟ್‌ನಿಂದ ಬ್ಯಾಂಕ್ ಶಾಖೆಗಳಿಗೆ ಹಾಗೂ ಎಟಿಎಮ್‌ಗಳಿಗೆ (ATM) ಈ ನಕಲಿ ನೋಟುಗಳು ಹರಿದುಹೋಗಿವೆಯೇ ಎಂಬುದರ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ.
ನೇಪಾಳ ಲಿಂಕ್ ಶಂಕೆ: ಆರೋಪಿಗಳು ಗಡಿ ದಾಟಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದರೆಂಬ ಅನುಮಾನದಿಂದ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣದ ಹಿಂದೆ ಗಡಿಯಾಚೆಗಿನ ಜಾಲವಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




