
ಮುಂಬೈ, ಅಕ್ಟೋಬರ್ 16: ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಿನ ಮಟ್ಟಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಆರ್ಬಿಐ ತುರ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಯೂನಿಯನ್ ಬ್ಯಾಂಕ್ನ ರಿಸರ್ಚ್ ವರದಿಯೊಂದು ಅಂದಾಜಿಸಿದೆ. ಈ ವರದಿ ಪ್ರಕಾರ, ಮುಂದಿನ ದ್ವೈಮಾಸಿಕ ಎಂಪಿಸಿ ಸಭೆಗೆ ಮುನ್ನವೇ ಮಧ್ಯಂತರ ಕ್ರಮವಾಗಿ ರೆಪೋ ದರ ಏರಿಸಬಹುದು. ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 5.54ಕ್ಕೆ ಏರಿದೆ. ಸಗಟು ದರ ಹಣದುಬ್ಬರ ಶೇ. 11.39ಕ್ಕೆ ಏರಿರುವುದು ಆರ್ಬಿಐಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಮಾಡಬಹುದು.
ಆಗಸ್ಟ್ ತಿಂಗಳಲ್ಲಿ ಹೋಲ್ಸೇಲ್ ಹಣದುಬ್ಬರ ಶೇ. 9.92 ಇತ್ತು. ಸೆಪ್ಟೆಂಬರ್ನಲ್ಲಿ ಇದು ಶೇ. 10.60ಕ್ಕೆ ಏರಬಹುದು ಎಂದು ಯೂನಿಯನ್ ಬ್ಯಾಂಕ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಅಂದಾಜು ಮಾಡಿದ್ದವು. ಆದರೆ, ಎಲ್ಲರ ಎಣಿಕೆ ಮೀರಿ ಹಣದುಬ್ಬರ ಶೇ. 11.39ಕ್ಕೆ ಏರಿದೆ.
ಇದನ್ನೂ ಓದಿ: ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಆರ್ಥಿಕತಜ್ಞರು ರೂಪಿಸಿದ ಎಕನಾಮಿಕ್ ಮಾಡಲ್ಗಳು ಎಷ್ಟು ಉಪಯುಕ್ತ ನೋಡಿ…
ಈ ಹಿನ್ನೆಲೆಯಲ್ಲಿ ಆರ್ಬಿಐ ಎಂಪಿಸಿ ತನ್ನ ಡಿಸೆಂಬರ್ ತಿಂಗಳ ಸಭೆಯಲ್ಲಿ 50 ಮೂಲಾಂಕಗಳಷ್ಟು ರೆಪೋ ದರ ಏರಿಸಬಹುದು. ಅದಕ್ಕೂ ಮುನ್ನ ಹೆಚ್ಚುವರಿ ಸಭೆ ನಡೆಸಿ ಮಧ್ಯಂತರವಾಗಿ ಬಡ್ಡಿದರ ಏರಿಸಬಹುದು ಎಂದು ಯೂನಿಯನ್ ಬ್ಯಾಂಕ್ ರಿಸರ್ಚ್ ವರದಿ ಅಭಿಪ್ರಾಯಪಟ್ಟಿದೆ.
ಈ ತಿಂಗಳು ನಡೆದ ಆರ್ಬಿಐ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಏರಿಸಲಾಗಿದೆ. ಶೇ. 5.25 ಇದ್ದ ರೆಪೋ ದರವನ್ನು ಶೇ. 5.50ಕ್ಕೆ ಏರಿಸಿತು. ಯೂನಿಯನ್ ಬ್ಯಾಂಕ್ ವರದಿ ಪ್ರಕಾರ, ಡಿಸೆಂಬರ್ನಲ್ಲಿ 50 ಮೂಲಾಂಕಗಳಷ್ಟು ಏರಿಸಿ, ಬಡ್ಡಿದರವನ್ನು ಶೇ. 6ಕ್ಕೆ ತರಬಹುದು. ನವೆಂಬರ್ನಲ್ಲೂ ಪರಿಷ್ಕರಣೆ ಆದರೆ ಬಡ್ಡಿದರ ಶೇ. 6.25ಕ್ಕೆ ಹೋಗಿ ನಿಲ್ಲಬಹುದು.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಹಣದುಬ್ಬರ ದರ ಶೇ. 5.54ಕ್ಕೆ ಏರಿಕೆ; ಆಹಾರ ಬೆಲೆ ಏರಿಕೆಯ ಪಾತ್ರವೇ ಹೆಚ್ಚು
ಅಕ್ಟೋಬರ್ ತಿಂಗಳ ಆರ್ಬಿಐ ಎಂಪಿಸಿ ಸಭೆಯಲ್ಲೂ ಮುಂದಿನ ದಿನಗಳಲ್ಲಿ ರೆಪೋ ದರ ಏರಿಸುವ ಸಾಧ್ಯತೆಯ ಸುಳಿವನ್ನು ನೀಡಲಾಗಿದೆ. ಬಡ್ಡಿದರ ಇಳಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಅಗತ್ಯ ಬಿದ್ದರೆ ಬಡ್ಡಿದರ ಏರಿಸಲು ಆರ್ಬಿಐ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ