ಆರ್ಬಿಐನಿಂದ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತದ ನಿರೀಕ್ಷೆ; ಮುಂದಿನ ಕ್ವಾರ್ಟರ್ನಲ್ಲೂ ಮತ್ತೊಂದು ಸುತ್ತಿನ ಕ್ರಮ ಸಾಧ್ಯತೆ
RBI MPC meeting expectations: ಫೆಬ್ರುವರಿ 5ರಿಂದ 7ರವರೆಗೆ ನಡೆಯುವ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರ ಕಡಿತಗೊಳಿಸಬಹುದು ಎನ್ನಲಾಗಿದೆ. ರಾಯ್ಟರ್ಸ್, ಎಕನಾಮಿಕ್ ಟೈಮ್ಸ್ ಇತ್ಯಾದಿ ಸಂಸ್ಥೆಗಳು ನಡೆಸಿದ ಆರ್ಥಿಕ ತಜ್ಞರ ಪೋಲಿಂಗ್ನಲ್ಲಿ ಈ ಅನಿಸಿಕೆ ವ್ಯಕ್ತವಾಗಿದೆ. ಆರ್ಥಿಕತೆಗೆ ಪುಷ್ಟಿ ಕೊಡಲು ಆರ್ಬಿಐ ಬಡ್ಡಿದರ ಕಡಿಮೆ ಮಾಡುವುದು ಅಗತ್ಯ ಎನಿಸಬಹುದು ಎನ್ನುವ ಅಭಿಪ್ರಾಯ ಇದೆ.

ನವದೆಹಲಿ, ಫೆಬ್ರುವರಿ 3: ಬಜೆಟ್ ಬಳಿಕ ಈಗ ಎಲ್ಲರ ಚಿತ್ತ ಆರ್ಬಿಐನತ್ತ ನೆಟ್ಟಿದೆ. ಬುಧವಾರದಿಂದ (ಫೆ. 5) ಮೂರು ದಿನಗಳ ಕಾಲ ಆರ್ಬಿಐನ ಎಂಪಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೋ ಇಲ್ಲವೋ ಎಂಬುದು ಎಲ್ಲರಿಗೂ ಇರುವ ಕುತೂಹಲವಾಗಿದೆ. ವಿವಿಧ ಆರ್ಥಿಕ ತಜ್ಞರ ಪ್ರಕಾರ ಈ ಬಾರಿಯ ಎಂಪಿಸಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ವಿವಿಧ ಸಂಸ್ಥೆಗಳು ನಡೆಸಿದ ಪೋಲಿಂಗ್ನಲ್ಲಿ ಬಡ್ಡಿದರ 25 ಮೂಲಾಂಕಗಳಷ್ಟು ಕಡಿಮೆಗೊಳಿಸಬಹುದು ಎನ್ನುವ ಅಭಿಪ್ರಾಯವೇ ಬಂದಿದೆ. ಶೇ. 6.50 ಇರುವ ಬಡ್ಡಿದರ ಶೇ. 6.25ಕ್ಕೆ ಇಳಿಯಬಹುದು. ಕಳೆದ ನಾಲ್ಕೈದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿ ದರ ಇಳಿಸಿದಂತಾಗುತ್ತದೆ.
ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸಭೆ ಫೆಬ್ರುವರಿ 5ರಂದು ಆರಂಭವಾಗಿ 7ಕ್ಕೆ ಮುಗಿಯುತ್ತದೆ. ಫೆಬ್ರುವರಿ 7, ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಆರ್ಬಿಐನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಹಿಂದಿನ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹಣದುಬ್ಬರ ಮತ್ತು ಬಡ್ಡಿದರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಹೊಸ ಗವರ್ನರ್ ಅವರು ನಿರ್ಧಾರಗಳ ವಿಚಾರದಲ್ಲಿ ತುಸು ಉದಾರವಾಗಿರುತ್ತಾರೆ ಎನ್ನಲಾಗಿದೆ. ಹೀಗಾಗಿ, ಈ ಎಂಪಿಸಿ ಸಭೆಯಲ್ಲಿ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ, ಮುಂದಿನ ಕ್ವಾರ್ಟರ್ನಲ್ಲಿ ಮತ್ತೊಂದು ಸುತ್ತಿನ ದರಕಡಿತ ಆಗುವ ಸಾಧ್ಯತೆಯೂ ಇದೆ ಎಂದು ರಾಯ್ಟರ್ಸ್ ಪೋಲ್ನಲ್ಲಿ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಜೆಟ್ ದಿನ ಕೈಕೊಟ್ಟ ವಿದೇಶೀ ಹೂಡಿಕೆದಾರರು; ಕೈ ಹಿಡಿದ ದೇಶೀ ಹೂಡಿಕೆದಾರರು
ಇತ್ತೀಚಿನ ದಿನಗಳಲ್ಲಿ ದೇಶದ ಬ್ಯಾಂಕಿಂಗ್ ಸಿಸ್ಟಂಗೆ ಸಾಕಷ್ಟು ಹಣದ ಹರಿವು ಆಗುವ ರೀತಿಯಲ್ಲಿ ಆರ್ಬಿಐ ಕ್ರಮ ಕೈಗೊಂಡಿದೆ. ಇದು ಬಡ್ಡಿದರ ಕಡಿತಕ್ಕೆ ಆರ್ಬಿಐ ಸಜ್ಜು ಮಾಡಿರುವ ವೇದಿಕೆ ಎನ್ನಲಾಗಿದೆ. ಹೀಗಾಗಿ, ದರಕಡಿತದ ನಿರೀಕ್ಷೆ ಈ ಬಾರಿ ಹೆಚ್ಚಿದೆ.
ರಿಪೋ ದರ ಕಡಿಮೆ ಮಾಡಲು ಇರುವ ಮತ್ತೊಂದು ಕಾರಣ ಎಂದರೆ ಆರ್ಥಿಕತೆಯ ಮಂದ ಬೆಳವಣಿಗೆ. ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 5.4ರಷ್ಟು ಮಾತ್ರವೇ ಬೆಳವಣಿಗೆ ಕಂಡಿದೆ. ಇದು ವೃದ್ಧಿಯಾಗಬೇಕಾದರೆ ಬಡ್ಡಿದರ ಕಡಿತ ಇತ್ಯಾದಿ ಪೂರಕ ಕ್ರಮಗಳ ಅವಶ್ಯಕತೆ ಇದೆ. ಇದೊಂದು ಒತ್ತಡ ಸದ್ಯ ಆರ್ಬಿಐ ಮೇಲೆ ಬಲವಾಗಿದೆ.
ಇದನ್ನೂ ಓದಿ: Tariff war: ಅಮೆರಿಕ ವರ್ಸಸ್ ಕೆನಡಾ, ಮೆಕ್ಸಿಕೋ ಚೀನಾ ತೆರಿಗೆ ಯುದ್ಧ; ಭಾರತಕ್ಕಿದೆ ಲಾಭ
ಆರ್ಬಿಐಗೆ ಬಡ್ಡಿದರ ಕಡಿತ ಮಾಡುವ ನಿರ್ಧಾರಕ್ಕೆ ಅಡ್ಡಿಯಾಗಿರುವುದು ಹಣದುಬ್ಬರ. ಈ ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಆರ್ಬಿಐ ಗುರಿ ಸದ್ಯಕ್ಕೆ ಸಾಕಾರಗೊಂಡಿಲ್ಲ. ಹಣದುಬ್ಬರ ಶೇ. 5ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ, ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದ್ದು, ಹಣದುಬ್ಬರವೂ ತಹಬದಿಗೆ ಬರಬಹುದು ಎನ್ನುವ ಆಶಾಭಾವನೆ ಇದೆ. ಇದೇನಾದರೂ ನಿಜವಾದಲ್ಲಿ ಆರ್ಬಿಐ ಯಾವ ಮುಲಾಜೂ ಇಲ್ಲದೇ ಬಡ್ಡಿದರ ಕಡಿತಗೊಳಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ