ನವದೆಹಲಿ, ಆಗಸ್ಟ್ 10: ನಿರೀಕ್ಷೆಯಂತೆ ಆರ್ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್ಬಿಐನ ಬಡ್ಡಿದರ ಶೇ. 6.50ರಲ್ಲೇ ಮುಂದುವರಿಯಲಿದೆ. ಆಗಸ್ಟ್ 8ರಿಂದ ನಡೆದಿದ್ದ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಮಾನಿಟರಿ ಪಾಲಿಸಿ ಕಮಿಟಿ) ಸಭೆ ಇಂದು ಮುಕ್ತಾಯಗೊಂಡ ಬೆನ್ನಲ್ಲೇ ಅದರ ಗವರ್ನರ್ ಶಕ್ತಿಕಾಂತ ದಾಸ್ ಆ ಸಭೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್, ರೆಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ರಿವರ್ಸ್ ರೆಪೋ ಇತ್ಯಾದಿ ಇತರ ದರಗಳಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಹಾಗೆಯೇ, ಹಣದುಬ್ಬರ ಶೇ. 5.625ರಷ್ಟು ಇರಬಹುದು ಎಂಬುದು ಅವರ ಅಂದಾಜು.
ರೆಪೋ ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಂದರೆ ಮರುಖರೀದಿ ಆಯ್ಕೆ. ಬ್ಯಾಂಕುಗಳಿಗೆ ತುರ್ತು ಅಗತ್ಯಬಿದ್ದಾಗ ಅಥವಾ ಫಂಡಿಂಗ್ ಕೊರತೆ ಇದ್ದಾಗ ಆರ್ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್ಬಿಐ ವಿಧಿಸುವ ಬಡ್ಡಿಯೇ ರೆಪೋ ದರ. ರೆಪೋ ದರವನ್ನು ಆರ್ಬಿಐನ ಬಡ್ಡಿದರ ಎಂದೂ ಕರೆಯಲಾಗುತ್ತದೆ.
ಇನ್ನು, ರಿವರ್ಸ್ ರಿಪೋ ಎಂಬುದು ಇದರ ತಿರುವುಮುರುವು. ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಬೇಕಾದರೆ ಆರ್ಬಿಐನಲ್ಲಿ ಠೇವಣಿಯಾಗಿ ಇರಿಸಬಹುದು. ಇದಕ್ಕೆ ಆರ್ಬಿಐ ನೀಡುವ ಬಡ್ಡಿದರವೇ ರಿವರ್ಸ್ ರೆಪೋ.
ಇದನ್ನೂ ಓದಿ: ಆರ್ಥಿಕ ಹಿಂಜರಿತವಾದರೆ ಷೇರುಮಾರುಕಟ್ಟೆಗೆ ಏನಾಗುತ್ತೆ? ಷೇರುಪೇಟೆ ಕುಸಿದರೂ ನಿಮ್ಮ ಹೂಡಿಕೆ ಹಣ ಭದ್ರವಾಗಿಸುವುದು ಹೇಗೆ?
ಆರ್ಬಿಐ ಬಡ್ಡಿದರ ಹೆಚ್ಚಿಸಿದರೆ ಬ್ಯಾಂಕುಗಳು ಅದಕ್ಕೆ ಅನುಗುಣವಾಗಿ ತಮ್ಮ ಗ್ರಾಹಕರಿಗೆ ಅದರ ಲಾಭ ಅಥವಾ ನಷ್ಟವನ್ನು ವರ್ಗಾಯಿಸಬಹುದು. ಆದರೆ, ಅದು ಬ್ಯಾಂಕುಗಳ ಆಯ್ಕೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪ್ರಕಾರ, ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ (2023-24) ಸಿಪಿಐ ಹಣದುಬ್ಬರ ಶೇ. 5.5 ಆಗಬಹುದು. ಕಳೆದ ಬಾರಿ ನಡೆದಿದ್ದ ಸಭೆಯಲ್ಲಿ ಮಾಡಲಾಗಿದ್ದ ಅಂದಾಜು ಪ್ರಕಾರ ಈ ಹಣಕಾಸುವ ವರ್ಷದಲ್ಲಿ ಹಣದುಬ್ಬರ ಶೇ. 5.1ರಷ್ಟು ಇರಬಹುದು ಎನ್ನಲಾಗಿತ್ತು. ಈಗ ಅಂದಾಜನ್ನು ಪರಿಷ್ಕರಿಸಿ, ಹಣದುಬ್ಬರ ಇನ್ನಷ್ಟು ಏರಿಕೆಯನ್ನು ಆರ್ಬಿಐ ನಿರೀಕ್ಷಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ (2024-25) ಹಣದುಬ್ಬರ ಶೇ. 5.2ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ.
ಆರ್ಬಿಐ ಹಣದುಬ್ಬರ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಈ ಬಾರಿ ಮುಂಗಾರು ಉತ್ತಮವಾಗಿರುವುದರಿಂದ ಆಹಾರ ಕೊರತೆ ಎದುರಾಗದು. ಆದರೆ, ಹೆಡ್ಲೈನ್ ಇನ್ಫ್ಲೇಶನ್ ಸದ್ಯೋಭವಿಷ್ಯದಲ್ಲಿ ಏರಿಕೆ ಆಗಬಹುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
ಕ್ವಾರ್ಟರ್ 1: 5.4%
ಕ್ವಾರ್ಟರ್ 2: 6.2%
ಕ್ವಾರ್ಟರ್ 3: 5.7%
ಕ್ವಾರ್ಟರ್ 4: 5.2%
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಎಂಪಿಸಿ ಸಭೆಯ ಅಂದಾಜನ್ನು ಪ್ರಕಟಿಸಿದ್ದಾರೆ. ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಗರಿಷ್ಠ ದರದಲ್ಲಿ ಬೆಳೆದರೆ ಕೊನೆಯ ಕ್ವಾರ್ಟರ್ ತುಸು ದುರ್ಬಲ ಬೆಳವಣಿಗೆ ಕಾಣಲಿದೆ.
ಇದನ್ನೂ ಓದಿ: ಬಲಿಷ್ಠ ಬ್ಯಾಂಕ್; ಲಾಭದ ಓಟದಲ್ಲಿ ರಿಲಾಯನ್ಸ್ ಸಾಮ್ರಾಜ್ಯವನ್ನೇ ಹಿಂದಿಕ್ಕಿದ ಎಸ್ಬಿಐ; ಎರಡು ದಶಕಗಳಲ್ಲಿ ಇದು ಎರಡನೇ ಸಲ
ಒಟ್ಟು ಜಿಡಿಪಿ ದರ: ಶೇ. 6.5
ಕ್ವಾರ್ಟರ್ 1: 8.0%
ಕ್ವಾರ್ಟರ್ 2: 6.5%
ಕ್ವಾರ್ಟರ್ 3: 6.0%
ಕ್ವಾರ್ಟರ್ 4: 5.7%
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:09 am, Thu, 10 August 23