ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾರ್ಚ್ 10ನೇ ತಾರೀಕಿನ ಗುರುವಾರದಂದು ಗುಜರಾತ್‌ನ ಭಾವನಗರ, ಅಹಮದಾಬಾದ್, ಮಧ್ಯಪ್ರದೇಶದ ನೀಮಚ್, ದೆಹಲಿ ಮತ್ತು ಮುಂಬೈನಲ್ಲಿ ಮಾರುಕಟ್ಟೆಯ ಅನುಚಿತ ವರ್ತನೆಯನ್ನು ಬಹಿರಂಗಪಡಿಸುವ ಪ್ರಯತ್ನಗಳಲ್ಲಿ ಅನೇಕ ಕಡೆ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳನ್ನು ನಡೆಸಿತು. ತನಿಖೆಯ ಸಂದರ್ಭದಲ್ಲಿ ಸೆಬಿ ಅಧಿಕಾರಿಗಳು ಈ ವ್ಯಕ್ತಿಗಳಿಂದ 34 ಮೊಬೈಲ್ ಫೋನ್, ಆರು ಲ್ಯಾಪ್‌ಟಾಪ್, ನಾಲ್ಕು ಡೆಸ್ಕ್‌ಟಾಪ್, ನಾಲ್ಕು ಟ್ಯಾಬ್ಲೆಟ್ (ಗ್ಯಾಜೆಟ್), ಎರಡು ಹಾರ್ಡ್ ಡ್ರೈವ್ ಡಿಸ್ಕ್ ಮತ್ತು ಒಂದು ಪೆನ್ ಡ್ರೈವ್ ಸೇರಿದಂತೆ ವಿವಿಧ ದಾಖಲೆಗಳು ಮತ್ತು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಬಿ ಪ್ರಕಾರ, ಐದು ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರೊಂದಿಗೆ ಈ ಸಂಸ್ಥೆಗಳು ಒಂಬತ್ತು ಟೆಲಿಗ್ರಾಮ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದವು ಮತ್ತು ಆಯ್ದ ಲಿಸ್ಟೆಡ್ ಸ್ಟಾಕ್‌ಗಳಲ್ಲಿ ಶಿಫಾರಸುಗಳನ್ನು ಮಾಡುತ್ತಿದ್ದವು.
ಅಂತಹ ಶಿಫಾರಸುಗಳು ಹೂಡಿಕೆದಾರರನ್ನು ಈ ಷೇರುಗಳಲ್ಲಿ ವ್ಯವಹರಿಸಲು ಉತ್ತೇಜಿಸಿತ್ತಿತ್ತು, ಇದರಿಂದಾಗಿ ಕೃತಕವಾಗಿ ವಾಲ್ಯೂಮ್ ಮತ್ತು ಬೆಲೆ ಏರಿಕೆಯನ್ನು ಸೃಷ್ಟಿಸುತ್ತಿತ್ತು. ವಶಪಡಿಸಿಕೊಂಡ ಡಿವೈಸ್ಗಳಿಂದ ಡೇಟಾ, ಇಮೇಲ್‌ಗಳು ಮತ್ತು ಇತರ ದಾಖಲೆಗಳನ್ನು ಪಡೆಯಲಾಗುತ್ತಿದೆ ಮತ್ತು ವಿವರವಾದ ತನಿಖೆ ಪ್ರಗತಿಯಲ್ಲಿದೆ ಎಂದು ಸೆಬಿ ಹೇಳಿದೆ. ಆಯ್ದ ಲಿಸ್ಟ್ ಮಾಡಲಾದ ಕಂಪೆನಿಗಳಿಗೆ ಸಂಬಂಧಿಸಿದಂತೆ ಸ್ಟಾಕ್ ಸಲಹೆಗಳು ಮತ್ತು ಇತರ ಹೂಡಿಕೆ ಸಲಹೆಗಳನ್ನು ಒಳಗೊಂಡಿರುವ ಸಂದೇಶಗಳನ್ನು ವೆಬ್‌ಸೈಟ್‌ಗಳು ಮತ್ತು ಟೆಲಿಗ್ರಾಮ್, ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಸೆಬಿಗೆ ಬಂದಿತ್ತು.
ಅಂತಹ ವಂಚನೆಯ ಅಪರಾಧಿಗಳು ವಿವಿಧ ಮಾರ್ಕೆಟಿಂಗ್ ಅನ್ನು ಬಳಸುತ್ತಾರೆ. ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಚಂದಾದಾರರನ್ನು ಆಕರ್ಷಿಸುವ ತಂತ್ರಗಳು ಅನುಸರಿಸುತ್ತಾರೆ ಎಂದು ಸೆಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೆಬಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಡೆದ ಇಂತಹ ಹೂಡಿಕೆ ಸಲಹೆಗಳ ಮೇಲೆ ಅವಲಂಬಿತರಾಗದಂತೆ ರೀಟೇಲ್ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ ಮತ್ತು ಸೆಕ್ಯೂರಿಟೀಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಅತ್ಯಂತ ಜಾಗರೂಕರಾಗಿರಿ ಎಂದು ಸಲಹೆ ನೀಡಿದೆ.
ಇದನ್ನೂ ಓದಿ: Life Insurance Corporation IPO: ಎಲ್ಐಸಿ ಐಪಿಒಗೆ ಸೆಬಿಯಿಂದ ಅನುಮತಿ