ಆಗಸ್ಟ್ 1ರಿಂದ ಉತ್ತಮ ಗುಣಮಟ್ಟದ ಪಾದರಕ್ಷೆ; ಶೂ, ಚಪ್ಪಲಿ ಬೆಲೆಗಳಲ್ಲೂ ಏರಿಕೆ
Good quality footwears for higher prices from August 1st: ಆಗಸ್ಟ್ 1ರಿಂದ ಚಪ್ಪಲಿ, ಶೂ ಸೇರಿದಂತೆ ವಿವಿಧ ಪಾದರಕ್ಷೆಗಳು ದುಬಾರಿಯಾಗಲಿವೆ. ಇದಕ್ಕೆ ಕಾರಣ ಬಿಐಎಸ್ ರೂಪಿಸಿರುವ ಪರಿಷ್ಕೃತ ನಿಯಮಗಳು. ಪಾದರಕ್ಷೆಗಳು ಕನಿಷ್ಠ ಗುಣಮಟ್ಟ ಹೊಂದಿರಬೇಕೆನ್ನುವ ನಿಟ್ಟಿನಲ್ಲಿ ಬಿಐಎಸ್ ನಿಯಮ ರೂಪಿಸಿದೆ. ಇದರಿಂದ ಶೂ, ಚಪ್ಪಲಿಗಳ ತಯಾರಿಕೆಯ ವೆಚ್ಚ ಹೆಚ್ಚಾಗಿ ಆ ಮೂಲಕ ಬೆಲೆ ಏರಿಕೆ ಆಗಬಹುದು.
ನವದೆಹಲಿ, ಜುಲೈ 29: ಮುಂಬರುವ ತಿಂಗಳಿನಿಂದ ಚಪ್ಪಲಿ, ಶೂಗಳ ಬೆಲೆ ಅಧಿಕಗೊಳ್ಳಲಿವೆ. ಜೊತೆಗೆ ಗುಣಮಟ್ಟದ ಪಾದರಕ್ಷೆಗಳೂ ಮಾರುಕಟ್ಟೆಯಲ್ಲಿ ರಾರಾಜಿಸಲಿವೆ. ಇದಕ್ಕೆ ಕಾರಣ ಹೊಸ ಗುಣಮಟ್ಟ ಪ್ರಮಾಣ ನಿಯಮಗಳು. ಗುಣಮಟ್ಟ ನಿಯಂತ್ರಣ ಸಂಸ್ಥೆಯಾದ ಬಿಐಎಸ್ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ದೇಶದ ಪಾದರಕ್ಷೆ ಉದ್ಯಮ ಅನುಸರಿಸಬೇಕಾಗುತ್ತದೆ. ಆಗಸ್ಟ್ 1ರಿಂದ ಬಿಐಎಸ್ನ ಗುಣಮಟ್ಟ ನಿಯಂತ್ರಣ ಆದೇಶ ಜಾರಿಗೆ ಬರುತ್ತದೆ. ಪಾದರಕ್ಷೆ ತಯಾರಕರು ಹೊಸ ಗುಣಮಟ್ಟ ನಿಯಮಗಳಿಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಈ ಕಾರಣಕ್ಕೆ ಚಪ್ಪಲಿ, ಶೂಗಳ ತಯಾರಿಕೆಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಬೆಲೆ ಹೆಚ್ಚಳ ಸಂಭವ ಇದೆ.
ಪಾದರಕ್ಷೆ ತಯಾರಿಕೆಗೆ ಬಳಸುವ ಪ್ರತಿಯೊಂದು ವಸ್ತುವೂ ನಿರ್ದಿಷ್ಟ ಗುಣಮಟ್ಟವಾದರೂ ಹೊಂದಿರಬೇಕು. ಐಎಸ್ 6721 ಮತ್ತು ಐಎಸ್ 10702 ಮಾನದಂಡದ ಪ್ರಕಾರ ಈ ವಸ್ತುವಿನ ಗುಣಮಟ್ಟ ಇರಬೇಕು. ಕಠಿಣ ಗುಣಮಟ್ಟ ಪರೀಕ್ಷೆಗಳಿಗೆ ಇವುಗಳನ್ನು ಒಳಪಡಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಪಾದರಕ್ಷೆಗಳನ್ನು ತೊಡೆದು ಹಾಕುವುದು ಈ ಯೋಜನೆಯ ಉದ್ದೇಶ.
ಈಗಿರುವ ಹಳೆಯ ಪಾದರಕ್ಷೆಗಳು ಏನಾಗುತ್ತವೆ?
ಇನ್ಮುಂದೆ ಮಾರುಕಟ್ಟೆಗೆ ಬರುವ ಪಾದರಕ್ಷೆಗಳಿಗೆ ಬಿಐಎಸ್ ಸ್ಟ್ಯಾಂಡರ್ಡ್ ಅನ್ನು ಕಡ್ಡಾಯ ಪಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಪಾದರಕ್ಷೆಗಳ ಲೆಕ್ಕವನ್ನು ಬಿಐಎಸ್ ವೆಬ್ಸೈಟ್ನಲ್ಲಿ ನೊಂದಾಯಿಸಿ ಕೊಡಬೇಕು. ಆ ಬಳಿಕ ಈ ಹಳೆಯ ಪಾದರಕ್ಷೆಗಳನ್ನು ಹಳೆಯ ಬೆಲೆಯಲ್ಲೇ ಮಾರಾಟ ಮಾಡಲು ಕಾಲಾವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: PM Surya Ghar Yojana: ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಪಿಎಂ ಸೂರ್ಯಘರ್ ಯೋಜನೆಯ ಪೂರ್ಣ ವಿವರ
ಶೂ, ಚಪ್ಪಲಿಗಳ ಬೆಲೆ ಏರಲಿದೆ…
ಪಾದರಕ್ಷೆ ತಯಾರಿಕೆಗೆ ಬೇಕಾದ ಕಚ್ಛಾ ಸಾಮಗ್ರಿಯಿಂದ ಹಿಡಿದು, ಅದರ ತಯಾರಿಕೆ ವಿಧಾನ ಹಾಗೂ ಉತ್ಪನ್ನದ ಒಟ್ಟಾರೆ ಬಳಿಕೆ ಇವೆಲ್ಲವೂ ಬಿಐಎಸ್ ಸ್ಟ್ಯಾಂಡರ್ಡ್ ನಿಯಮಗಳಿಗೆ ಒಳಪಡಬೇಕಾಗುತ್ತದೆ. ಇದರಿಂದ ಸಹಜವಾಗಿ ತಯಾರಿಕೆಯ ವೆಚ್ಚ ಹೆಚ್ಚಾಗಲಿದೆ. ಆ ಮೂಲಕ ಪಾದರಕ್ಷೆಗಳ ಬೆಲೆಗಳೂ ಹೆಚ್ಚಲಿವೆ. ಪರಿಷ್ಕೃತ ಬಿಐಎಸ್ ನಿಯಮಗಳಿಗೆ ಒಟ್ಟು 46 ಪಾದರಕ್ಷೆ ಉತ್ಪನ್ನಗಳನ್ನು ಸೇರಿಸಲಾಗಿದೆ.
ಸಣ್ಣ ಸಂಸ್ಥೆಗಳಿಗೆ ವಿನಾಯಿತಿ…
ಹೊಸ ಬಿಐಎಸ್ ನಿಯಮಗಳು ಸಣ್ಣ ತಯಾರಕರಿಗೆ ಒಳಪಡುವುದಿಲ್ಲ. ವರ್ಷಕ್ಕೆ 50 ಕೋಟಿ ರೂಗಿಂತ ಕಡಿಮೆ ವಹಿವಾಟು ಹೊಂದಿರುವ ಪಾದರಕ್ಷೆ ತಯಾರಕರಿಗೆ ಈ ಬಿಐಎಸ್ ಸ್ಟ್ಯಾಂಡರ್ಡ್ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಬಿಐಎಸ್ ನಿಯಮಗಳಿಂದ ಏನು ಪರಿಣಾಮ?
- ಉತ್ತಮ ಗುಣಮಟ್ಟದ ಪಾದರಕ್ಷೆಗಳು ಮಾರುಕಟ್ಟೆಗೆ ಬರುತ್ತವೆ.
- ಪಾದರಕ್ಷೆ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತದೆ
- ಬಿಐಎಸ್ ನಿಯಮಗಳಿಗೆ ಒಳಪಡುವ ಕೆಲಸ ಕ್ಲಿಷ್ಟಕರವಾದ್ದರಿಂದ ಬಲಾಢ್ಯ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಉಳಿಯುತ್ತವೆ. ಸಣ್ಣ ಸಂಸ್ಥೆಗಳು ಮುರುಟಿಹೋಗಬಹುದು.
ಇದನ್ನೂ ಓದಿ: ಟೊಮೆಟೋ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ; ಸಬ್ಸಿಡಿ ದರದಲ್ಲಿ ಸರ್ಕಾರದಿಂದಲೇ ಟೊಮೆಟೋ ಮಾರಾಟ
ಯಾವುದಿದು ಬಿಐಎಸ್?
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಅಥವಾ ಬಿಐಎಸ್ ಎಂಬುದು ಭಾರತದ ಗುಣಮಟ್ಟ ಪ್ರಮಾಣಿಸುವ ಸಂಸ್ಥೆ. ವಿವಿಧ ಉತ್ಪನ್ನಗಳಿಗೆ ಕನಿಷ್ಠ ಗುಣಮಟ್ಟದ ನಿಯಮಗಳನ್ನು ಇದು ರೂಪಿಸುತ್ತದೆ. ಉದ್ಯಮದಲ್ಲಿರುವ ಉತ್ಪಾದಕರು, ಬಳಕೆದಾರರು, ತಜ್ಞರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಉದ್ಯಮಕ್ಕೆ ಸಂಬಂಧಿತ ವಿವಿಧ ವ್ಯಕ್ತಿಗಳು, ಸಂಸ್ಥೆಗಳೊಂದಿಗೆ ಬಿಐಎಸ್ ಸಮಾಲೋಚನೆ ನಡೆಸಿ, ಎಲ್ಲರ ಒಪ್ಪಿಗೆಯಲ್ಲಿ ಗುಣಮಟ್ಟ ಪ್ರಮಾಣವನ್ನು ನಿರ್ದಿಷ್ಟಪಡಿಸುತ್ತದೆ.
ಉತ್ಪನ್ನದ ಸುರಕ್ಷತೆ, ಗುಣಮಟ್ಟ, ಕಾರ್ಯಸಾಧನೆ, ಹೊಂದಿಕೆ ಗುಣ, ಪರಿಸರ ಸ್ನೇಹಿ, ಗ್ರಾಹಕ ರಕ್ಷಣೆ ಇತ್ಯಾದಿ ಅಂಶಗಳನ್ನು ಆದ್ಯತೆ ಆಗಿಟ್ಟುಕೊಂಡು ಬಿಐಎಸ್ ಒಂದು ಉತ್ಪನ್ನದ ಗುಣಮಟ್ಟ ಪ್ರಮಾಣವನ್ನು ನಿರ್ಧರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ