ಮನೆ ಖರೀದಿಸಿ, ಬಾಡಿಗೆಯನ್ನೂ ಕಟ್ಟಿ ಎಂದ್ರೆ ಹೇಗೆ? ಎಜಿಆರ್ ಶುಲ್ಕ ರದ್ದುಗೊಳಿಸುವಂತೆ ಟೆಲಿಕಾಂ ಕಂಪನಿಗಳಿಂದ ಸರ್ಕಾರಕ್ಕೆ ಒತ್ತಾಯ

Cellular Operators Association of India: ಟೆಲಿಕಾಂ ಕಂಪನಿಗಳಿಗೆ ವಿಧಿಸಲಾಗುವ ಎಜಿಆರ್ ಶುಲ್ಕಗಳಿಂದ ಹೆಚ್ಚು ಹೊರೆಯಾಗುತ್ತಿದೆ ಎಂದು ಭಾರತೀಯ ಸೆಲೂಲಾರ್ ಆಪರೇಟರುಗಳ ಸಂಸ್ಥೆ ಒತ್ತಾಯಿಸಿದೆ. ಭಾರೀ ಮೊತ್ತ ಕೊಟ್ಟು ಸ್ಪೆಕ್ಟ್ರಂ ಖರೀದಿಸುವ ಟೆಲಿಕಾಂ ಸಂಸ್ಥೆಗಳ ಮೇಲೆ ಎಜಿಆರ್ ಹೊರೆಯನ್ನೂ ಹೊರಿಸುವುದು ಸರಿಯಲ್ಲ ಎಂಬುದು ಸಿಒಎಐನ ವಾದವಾಗಿದೆ. ಎಜಿಆರ್ ದರ ಕಡಿಮೆ ಮಾಡಿದರೆ ರೀಚಾರ್ಜ್ ದರ ಕಡಿಮೆ ಆಗುವ ಸಾಧ್ಯತೆ ಇದೆ.

ಮನೆ ಖರೀದಿಸಿ, ಬಾಡಿಗೆಯನ್ನೂ ಕಟ್ಟಿ ಎಂದ್ರೆ ಹೇಗೆ? ಎಜಿಆರ್ ಶುಲ್ಕ ರದ್ದುಗೊಳಿಸುವಂತೆ ಟೆಲಿಕಾಂ ಕಂಪನಿಗಳಿಂದ ಸರ್ಕಾರಕ್ಕೆ ಒತ್ತಾಯ
ಟೆಲಿಕಾಂ ಆಪರೇಟರ್
Follow us
|

Updated on: Oct 28, 2024 | 3:29 PM

ನವದೆಹಲಿ, ಅಕ್ಟೋಬರ್ 28: ಟೆಲಿಕಾಂ ಆಪರೇಟರ್​ಗಳಿಗೆ ವಿಧಿಸಲಾಗುವ ಲೈಸೆನ್ಸ್ ಫೀ ಅನ್ನು ರದ್ದುಗೊಳಿಸುವಂತೆ ಸೆಲೂಲಾರ್ ಆಪರೇಟರುಗಳ ಸಂಸ್ಥೆಯಾದ ಸಿಒಎಐ ಸರ್ಕಾರವನ್ನು ಒತ್ತಾಯಿಸಿದೆ. ಟೆಲಿಕಾಂ ಆಪರೇಟರುಗಳು ದೊಡ್ಡ ಮೊತ್ತದ ತೆತ್ತು ಸ್ಪೆಕ್ಟ್ರಂ ಖರೀದಿಸುತ್ತವೆ. ಬಳಿಕ ಅದನ್ನು ಬಳಸಲು ಶುಲ್ಕವನ್ನೂ ನೀಡಬೇಕೆಂದರೆ ಡಬಲ್ ಹೊಡೆತ ಪಡೆದಂತೆ ಎಂಬುದು ಸಿಒಎಐ ವಾದ.

‘ಟಿಎಸ್​ಪಿಗಳು (ಟೆಲಿಕಾಂ ಸರ್ವಿಸ್ ನೀಡುಗ) ಪಾರದರ್ಶಕ ಹರಾಜು ಪ್ರಕ್ರಿಯೆ ಮೂಲಕ ದೊಡ್ಡ ಮೊತ್ತಕ್ಕೆ ಸ್ಪೆಕ್ಟ್ರಂ ಖರೀದಿಸುತ್ತವೆ. ಅದೇ ವೇಳೆ, ಟಿಎಸ್​ಪಿಗಳು ಎಜಿಆರ್ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ) ಆಧಾರದ ಮೇಲೂ ಶುಲ್ಕ ನೀಡಬೇಕಾಗುತ್ತದೆ. ಸ್ಪೆಕ್ಟ್ರಂ ಅನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ ಈ ಸಂಸ್ಥೆಗಳಿಗೆ ಡಬಲ್ ಹೊರೆಯಾಗುತ್ತದೆ,’ಎಂಬುದು ಸೆಲೂಲಾರ್ ಅಸೋಸಿಯೇಶನ್​ನ ಮಹಾನಿರ್ದೇಶಕ ಎಸ್.ಪಿ. ಕೋಚ್ಚರ್ ಅವರ ಅನಿಸಿಕೆ.

ಮನೆ ಖರೀದಿಸಿ, ಬಾಡಿಗೆಯನ್ನೂ ಪಾವತಿಸಿ ಎಂದರೆ ಹೇಗೆ?

ಟೆಲಿಕಾಂ ಆಪರೇಟರ್ ಸಂಸ್ಥೆಗಳಿಗೆ ಡಬಲ್ ಹೊರೆ ಹೇಗಾಗುತ್ತೆ ಎಂಬುದಕ್ಕೆ ಕೋಚ್ಚರ್ ಅವರು ಮನೆ ಖರೀದಿ ಮತ್ತು ಬಾಡಿಗೆಯ ನಿದರ್ಶನವನ್ನು ನೀಡಿದ್ದಾರೆ.

ಇದನ್ನೂ ಓದಿ: ಐದಾರು ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾವಿರ ಹೊಸ ಸ್ಟಾರ್ಟಪ್​ಗಳ ಆರಂಭ: ಪ್ರಧಾನಿ ಮೋದಿ

‘ಒಬ್ಬ ವ್ಯಕ್ತಿ ಒಂದು ಮನೆ ಖರೀದಿಸುತ್ತಾನೆ. ಆ ಆಸ್ತಿಯ ಬೆಲೆ ಎಷ್ಟಿದೆಯೋ ಅಷ್ಟನ್ನು ಕೊಡುತ್ತಾನೆ. ಆ ಮನೆಯಲ್ಲಿ ಯಾವುದೇ ಬಾಡಿಗೆ ಕಟ್ಟುವ ಅವಶ್ಯಕತೆ ಇಲ್ಲದೇ ಇರಬಹುದು. ಅದು ಸಹಜ. ಆದರೆ, ಆ ಮನೆಯಲ್ಲಿ ಇರಲು ಬಾಡಿಗೆಯನ್ನೂ ಪಾವತಿಸಿ ಎನ್ನುವುದು ಎಷ್ಟು ಸರಿ? ಟೆಲಿಕಾಂ ಆಪರೇಟರ್​ಗಳ ವಿಚಾರದಲ್ಲಿ ಆಗುತ್ತಿರುವುದು ಇದೆಯೇ,’ ಎಂದು ಸೆಲೂಲಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ.

ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಮೊದಲಾದ ಟೆಲಿಕಾಂ ಕಂಪನಿಗಳು ಈ ಎಜಿಆರ್ ನಿಯಮಗಳಲ್ಲಿ ಸಡಿಲಿಕೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಕಳೆದ ತಿಂಗಳು, ಸೆಪ್ಟೆಂಬರ್ 19ರಂದು ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸೆಲೂಲಾರ್ ಅಸೋಸಿಯೇಶನ್ ಇದೀಗ ದೂರಸಂಪರ್ಕ ಇಲಾಖೆಯ ಬಳಿ ಮನವಿ ಮಾಡಿದೆ.

ಇದನ್ನೂ ಓದಿ: ಅಕ್ಕಿ ಗಿರಣಿಗಾರರ ಸಮಸ್ಯೆಗೆ ಸ್ಪಂದಿಸಲು ಆನ್​ಲೈನ್ ಆ್ಯಪ್​ಗೆ ಚಾಲನೆ ನೀಡಿದ ಸಚಿವ ಪ್ರಹ್ಲಾದ್ ಜೋಷಿ

ಎಜಿಆರ್​ನಲ್ಲಿ ರಿಯಾಯಿತಿ ತೋರಿದರೆ ರೀಚಾರ್ಜ್ ಬೆಲೆಗಳಲ್ಲಿ ಇಳಿಕೆ?

ಟೆಲಿಕಾಂ ಆಪರೇಟರುಗಳು ಮನವಿ ಮಾಡಿಕೊಂಡಂತೆ ಸರ್ಕಾರವು ಎಜಿಆರ್ ದರಗಳನ್ನು ಕಡಿಮೆ ಮಾಡಿದರೆ ಅಥವಾ ರದ್ದು ಮಾಡಿದರೆ ರೀಚಾರ್ಜ್ ದರಗಳೆಲ್ಲವೂ ಈಗಿರುವುದಕ್ಕಿಂತ ಕಡಿಮೆ ಆಗಬಹುದು. ಈ ಉಳಿತಾಯದ ಹಣವನ್ನು ಟೆಲಿಕಾಂ ಕಂಪನಿಗಳು ತಮ್ಮ ನೆಟ್ವರ್ಕ್ ಅಪ್​ಗ್ರೇಡ್ ಮಾಡಲು ಮತ್ತು ಹೊಸ ಸೇವೆ ರೂಪಿಸಲು ಬಳಸಲು ಅವಕಾಶ ಸಿಗುತ್ತದೆ. ರೀಚಾರ್ಜ್ ದರವನ್ನೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಮೊಬೈಲ್ ಕನೆಕ್ಟಿವಿಟಿ ಹೆಚ್ಚು ವ್ಯಾಪಕವಾಗುವ ನಿರೀಕ್ಷೆ ಇದೆ ಎಂಬುದು ಸೆಲ್ಯೂಲಾರ್ ಅಸೋಸಿಯೇಶನ್ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ