ಬಳ್ಳಾರಿ: ಪೊಲೀಸ್ ಇಲಾಖೆಯ ಸೂಚನೆಯಂತೆ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅದರಂತೆ 18 ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪಟ್ಟಿಯನ್ನು ಸಲ್ಲಿಸಿತ್ತು. ಅದರಂತೆ ಬಳ್ಳಾರಿ, ಮೋಕಾ, ಸಿರಿಗೇರಿ, ತೆಕ್ಕಲಕೋಟೆ, ಹಚ್ಚೋಳಿ ಠಾಣೆಯ 6 ಮಟ್ಕಾ ಬುಕ್ಕಿಗಳಿಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿಯ ರೆಹಮಾನ್ ಅಲಿಯಾಸ್ ಉದ್ದಿನಕಡ್ಡಿ ರೆಹಮಾನ್, ಗುರುಸ್ವಾಮಿ ಅಲಿಯಾಸ್ ಪ್ರಭಾಕರ್, ಮೋಕಾ ಗ್ರಾಮದ ವೆಂಟಕೇಶಗೌಡ, ಸಿರಗುಪ್ಪತಾಲೂಕಿನ ಮಹೇಶಗೌಡ, ಚಿದಾನಂದ್, ಗೌಸ್ ಎನ್ನುವ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ. ಬಳ್ಳಾರಿಯಲ್ಲಿ ಇದೂವರೆಗೂ 15 ಜನ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ: ಹಣಕ್ಕಾಗಿ ಮೊಮ್ಮಗಳನ್ನೇ ಮಾರಿದ್ದ ಅಜ್ಜ ಅರೆಸ್ಟ್, ಮಾರಾಟಕ್ಕೆ ಅಜ್ಜ ಕಟ್ಟಿದ ಕಥೆ ಹೇಗಿತ್ತು ಗೊತ್ತಾ?
7 ಮನೆಗಳಿಗೆ ಕಣ್ಣಾ ಹಾಕಿದ್ದ ಖದೀಮ ಅರೆಸ್ಟ್
ಬಳ್ಳಾರಿ ಕೌಲಬಜಾರ್ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳಿಗೆ ಕಣ್ಣಾ ಹಾಕುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೌತಮನಗರದ ನಿವಾಸಿ ಗಂಗಾಧರ್ ನಾಯ್ಕ್ ಬಂಧಿತ ಆರೋಪಿಯಾಗಿದ್ದಾನೆ. ಬಳ್ಳಾರಿಯ ಕೆಲವು ಮನೆಗಳಿಗೆ ನುಗ್ಗಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದನು. ಅದರಂತೆ ಆರೋಪಿಯ ಜಾಡು ಹಿಡಿದು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ 7 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಆರೋಪಿಯಿಂದ 12.25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, 23 ಆರೋಪಿಗಳು ಅರೆಸ್ಟ್, 1 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಮನೆ ಬೀಗ ಹೊಡೆದು ಕಳ್ಳತನ
ಬೆಂಗಳೂರು: ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ತಾಲೂಕಿನ ಚಿಕ್ಕಬಾಣವಾರ ಬಳಿ ಗಣಪತಿನಗರದಲ್ಲಿ ಭೀಮಸೇನ್ ಎಂಬುವರಿಗೆ ಸೇರಿದ ಮನೆಗೆ ನುಗ್ಗಿದ್ದ ಕಳ್ಳ, 20 ಗ್ರಾಂ ಚಿನ್ನಾಭರಣ, 15 ಸಾವಿರ ನಗದು ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಭೀಮಸೇನ್ ಅವರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ