ಬೆಂಗಳೂರು, ಫೆಬ್ರವರಿ 28: ಒಂದೇ ಆಸ್ತಿಯನ್ನು ಅಡವಿಟ್ಟು ಮತ್ತು ಇಲ್ಲದ ಆಸ್ತಿಯ ಬಗ್ಗೆ ನಕಲಿ ದಾಖಲೆಗಳನ್ನು (Fake Documents) ಸೃಷ್ಟಿಸಿ ದಂಪತಿಯೊಬ್ಬರು ಬೆಂಗಳೂರಿನಲ್ಲಿ (Bengaluru) ಸುಮಾರು 15 ಬ್ಯಾಂಕುಗಳಿಗೆ ವಂಚನೆ ಮಾಡಿ ಕೋಟಿ ಕೋಟಿ ರೂಪಾಯಿ ವಂಚಿಸಿದ ಪ್ರರಕಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಬ್ಯಾಂಕ್ಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರಾದೇಶಿಕ ಸಹಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಸೇರಿವೆ.
ಸಾಲ ಮರು ಪಾವತಿ ಮಾಡದ ಕಾರಣ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಗಳೇ ದಂಪತಿಯ ಕೃತ್ಯದಿಂದ ಬೇಸ್ತು ಬೀಳುವಂತಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಹೋದಾಗ, ಈಗಾಗಲೇ ಅನೇಕ ಹಣಕಾಸು ಸಂಸ್ಥೆಗಳಿಗೆ ಆ ಜಾಗವನ್ನು ಒತ್ತೆ ಇಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಬೇಗೂರು ಸಬ್ ರಿಜಿಸ್ಟ್ರಾರ್ ಕಚೇರಿ, ಬಿಬಿಎಂಪಿ ಮತ್ತು ಬಿಡಿಎಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ಬೇಗೂರಿನಲ್ಲಿ ವಿವಿಧ ನಂಬರ್‌ಗಳಲ್ಲಿ ತೋರಿಸಿರುವ ಜಮೀನು / ಸೈಟ್‌ಗಳ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ.
ಶ್ರೀನಿಧಿ ಮ್ಯಾನುಫ್ಯಾಕ್ಚುರರ್ಸ್ ಮತ್ತು ಶ್ರೀನಿಧಿ ಮಸಾಲಾ ಕಂಪನಿಗಳಿಗೆ ಯಂತ್ರೋಪಕರಣಗಳನ್ನು ಖರೀದಿಸಲೆಂದು ಕೆಎಸ್ ನಾಗೇಶ್ ಮತ್ತು ಸುಮಾ ಬಿಎಸ್ ದಂಪತಿ ಸಾಲ ಪಡೆದಿದ್ದರು. ಸಾಲ ಮತ್ತು ಬಡ್ಡಿಯನ್ನು ವಸೂಲಿ ಮಾಡಲು 15 ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮುಂದಾಗಿವೆ.
ದಂಪತಿಯು ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್‌ನಿಂದ 1.30 ಕೋಟಿ ರೂ., ತುಮಕೂರು ಧಾನ್ಯ ವ್ಯಾಪಾರಿಗಳ ಸಹಕಾರಿ ಬ್ಯಾಂಕ್‌ನಿಂದ 2.09 ಕೋಟಿ ರೂ., ಕೋಟೇಶ್ವರ ಸಹಕಾರಿ ಬ್ಯಾಂಕ್‌ನಿಂದ 1.88 ಕೋಟಿ ರೂ. ತುಮಕೂರು ವೀರಶೈವ ಸಹಕಾರಿ ಬ್ಯಾಂಕ್‌ನಿಂದ 1 ಕೋಟಿ ರೂ, ಹಾಗೂ ಸಿಂಡಿಕೇಟ್ ಬ್ಯಾಂಕ್‌ನಿಂದ 95 ಲಕ್ಷ ರೂ. ಸಾಲ ಪಡೆದಿದ್ದರು.
ದಂಪತಿ ಪಡೆದ ಎಲ್ಲಾ ಸಾಲಗಳಿಗೆ ಪತಿಯು ಅರ್ಜಿದಾರರಾಗಿದ್ದು, ಪತ್ನಿಯು ಇತರರೊಂದಿಗೆ ಜಾಮೀನುದಾರರಾಗಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ದಂಪತಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನ್ಯಾಯಾಲಯಗಳಿಗೆ ಜಯನಗರ ಪೊಲೀಸರು ಸಲ್ಲಿಸಿದ ವರದಿಯ ಪ್ರಕಾರ, ದಂಪತಿ ವಿರುದ್ಧ ಒಟ್ಟು ಎಂಟು ಎಫ್‌ಐಆರ್ ದಾಖಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ.
2018 ಮತ್ತು 2022 ರ ನಡುವೆ ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು, ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಾಲ್ಕು, ಪುಟ್ಟೇನಹಳ್ಳಿ ಮತ್ತು ಶೇಷಾದ್ರಿಪುರಂ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬೆದರಿಸಿ ಹಣ ಸುಲಿಗೆ ಪ್ರಕರಣ: ನಾಲ್ವರು ಸಂಚಾರಿ ಪೊಲೀಸರ ಅಮಾನತು
ದಂಪತಿಯಿಂದ ವಂಚನೆಗೊಳಗಾದ ಮತ್ತಷ್ಟು ಹಣಕಾಸು ಸಂಸ್ಥೆಗಳೆಂದರೆ ಬನಶಂಕರಿ ಸಹಕಾರಿ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್, ಟಾಟಾ ಕ್ಯಾಪಿಟಲ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಲಕ್ಷ್ಮೀ ವಿಲಾಸ್ ಬ್ಯಾಂಕ್, ತುಮಕೂರು ಧಾನ್ಯ ವ್ಯಾಪಾರಿಗಳ ಸಹಕಾರಿ ಬ್ಯಾಂಕ್, ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್, ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್, ಕೋಟೇಶ್ವರ ಸಹಕಾರಿ ಬ್ಯಾಂಕ್, ನ್ಯಾಷನಲ್ ಸಹಕಾರಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಮಣಪ್ಪುರಂ ಫೈನಾನ್ಸ್, ಮಹಿಳಾ ಸಹಕಾರಿ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ಗಳಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ