ದಾವಣಗೆರೆ: ಅನೈತಿಕ ಸಂಬಂಧಕ್ಕಾಗಿ ಎರಡನೇ ಪತ್ನಿಯನ್ನು ನೀರಲ್ಲಿ ಮುಳುಗಿಸಿ ಕೊಂದ ಪತಿ
ಮದುವೆಯಾಗಿ ನಾಲ್ಕು ತಿಂಗಳು ಮಾತ್ರ ಆಗಿತ್ತು. ಸುಖ ಸಂಸಾರ ನಡೆಸಬೇಕಿದ್ದ ಪತಿ ಪತ್ನಿಯನ್ನು ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆ ಈತನಿಗೆ ಎರಡನೇ ಪತ್ನಿ. ಹಾಗಿದ್ದರೆ ಮೊದಲನೇ ಪತ್ನಿ ಏನಾದಳು? ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದು ಏಕೆ? ಈ ಸ್ಟೋರಿ ಓದಿ
ದಾವಣಗೆರೆ, ಅಕ್ಟೋಬರ್ 01: ಅನೈತಿಕ ಸಂಬಂಧಕ್ಕಾಗಿ ಎರಡನೇ ಪತ್ನಿಯನ್ನು ನೀರಲ್ಲಿ ಮುಳುಗಿಸಿ ಪತಿ ಕೊಲೆ ಮಾಡಿರುವ ಘಟನೆ ಚನ್ನಗಿರಿ (Channagiri) ತಾಲ್ಲೂಕಿನ ಪಾಂಡೋಮಟ್ಟಿಯಲ್ಲಿ ನಡೆದಿದೆ. ಗೌರಮ್ಮ (39) ಮೃತ ದುರ್ದೈವಿ. ಚಿದಾನಂದ ಆಚಾರ್ಯ ಕೊಲೆ ಮಾಡಿದ ಆರೋಪಿ.
ಕಳೆದ ಕೆಲ ದಿನಗಳ ಹಿಂದೆ ಪಾಂಡೋಮಟ್ಟಿಯ ಹಳ್ಳದಲ್ಲಿ ಅರೆಬೆತ್ತಲೆಯಾಗಿ ಬಿದ್ದ ಓರ್ವ ಮಹಿಳೆಯ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಮೇಲ್ನೋಟಕ್ಕೆ ಮಹಿಳೆ ಕಾಲುಜಾರಿ ಬಿದ್ದು ಸತ್ತಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟಿದೆ. ಆದರೆ, ಪೊಲೀಸರು ಇದು ಕೊಲೆ ಎಂದು ಸಂಶಯ ಪಟ್ಟು, ತನಿಖೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಆರೋಪಿ ಚಿದಾನಂದ ಆಚಾರ್ಯ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ನಂತರ, ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಗೌರಮ್ಮ ಎಂಬುವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದನು. ಇನ್ನು, ಗೌರಮ್ಮ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲನೇ ಪತಿ ಕುಡಿದು ಕುಡಿದು ಅನಾರೋಗ್ಯದಿಂದ ಸತ್ತು ಹೋಗಿದ್ದಾನೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್
ಮದುವೆ ನಂತರ ಗೌರಮ್ಮರ ಜೀವನ ಸಾಕಷ್ಟು ಕಷ್ಟಕರವಾಗಿತ್ತು. ಪತಿ ಚಿದಾನಂದನಿಗೆ ಪರಸ್ತ್ರಿ ವ್ಯಾಮೋಹ ಇತ್ತು. ಚಿದಾನಂದನಿಗೆ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧವಿತ್ತಂತೆ. ಓರ್ವ ಮಹಿಳೆಗೆ ಸಾಕಷ್ಟು ಹಣ ನೀಡಿದ್ದನಂತೆ. ಅಲ್ಲದೇ, ಸಾಲ ಮಾಡಿ ಗೃಹೋಪಯೋಗಿ ವಸ್ತುಗಳನ್ನು ಮಹಿಳೆಗೆ ಕೊಡಸಿದ್ದನು. ಇದೆ ವಿಚಾರಕ್ಕೆ ಹಿಂದೊಮ್ಮೆ ಗಲಾಟೆಯಾಗಿತ್ತಂತೆ. ಮಹಿಳಾ ಸಾಂತ್ವನ ಕೇಂದ್ರ ಮತ್ತು ಹಿರಿಯರ ಸಮ್ಮುಖದಲ್ಲಿ ರಾಜಿಸಂಧಾನವೂ ಆಗಿತ್ತಂತೆ.
ಇಷ್ಟಾದರೂ ಚಿದಾನಂದ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದಾನೆ. ಇದರಿಂದ ಗೌರಮ್ಮ ಸಾಕಷ್ಟು ರೋಸಿ ಹೋಗಿದ್ದಳು. ಈ ವಿಚಾರಕ್ಕೆ ಆಗಾಗ್ಗೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಸೆಪ್ಟೆಂಬರ್ 20 ರಂದು ಪತಿ ಚಿದಾನಂದ “ತೋಟದಲ್ಲಿ ಕೆಲಸ ಇದೆ ಬಾ” ಅಂತ ಪತ್ನಿ ಗೌರಮ್ಮಳನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದನು. ತೋಟಕ್ಕೆ ನೀರು ಹರಿಸಲೆಂದು ಹೊಲದಲ್ಲಿ ಚಿಕ್ಕ ಕಾಲುವೆ ಮಾಡಲಾಗಿತ್ತು. ಕಾಲುವೆ ನೀರಿನಲ್ಲಿ ಗೌರಮ್ಮಳನ್ನು ಮುಳುಗಿಸಿ ಸಾಯಿಸಿ, ಪರಾರಿಯಾಗಿದ್ದಾನೆ.
ಮದುವೆ ಆಗಿ ಕೇವಲ ನಾಲ್ಕೇ ತಿಂಗಳಿಗೆ ಗೌರಮ್ಮ ಶವವಾಗಿ ಪತ್ತೆಯಾಗಿದ್ದು, ಆಕೆಯ ಕುಟುಂಬದವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಮಗಳ ಸ್ಥಿತಿ ಕಂಡು ಚಿದಾನಂದನ ಮೇಲೆ ಗೌರಮ್ಮ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಗೌರಮ್ಮ ಪೋಷಕರು ಚಿದಾನಂದನ ಮೇಲೆ ಕೊಲೆ ಆರೋಪಿಸಿ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ, ತನಿಖೆ ನಡೆಸಿದ ಪೊಲೀಸರು ಚಿದಾನಂದ ಆಚಾರ್ಯನನ್ನು ಹೊಸದುರ್ಗದಲ್ಲಿ ಬಂಧಿಸಿ ಕರೆ ತಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:27 am, Tue, 1 October 24