ವಿಜಯಪುರದಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ; ಬೆಚ್ಚಿಬಿದ್ದ ಗುಮ್ಮಟನಗರಿ ಜನ
ಕಳೆದ ರಂಜಾನ್ ಹಬ್ಬದ ವೇಳೆ ರೌಡಿ ಶೀಟರ್ ಹತ್ಯೆ ಬಳಿಕ ವಿಜಯಪುರ ನಗರದಲ್ಲಿ ಯಾವುದೇ ಕೊಲೆ ಪ್ರಕರಣ ನಡೆದಿರಲಿಲ್ಲ. ನಗರ ಭಾಗದಲ್ಲಿ ಇನ್ನೇನು ಶಾಂತಿ ನೆಲೆಸಿದೆ ಎನ್ನುವಾಗಲೇ ಇಂದು(ಮೇ.19) ಮತ್ತೊಂದು ಹೆಣ ಬಿದ್ದಿದೆ. ನಗರ ಎಪಿಎಂಸಿ ಆವರಣದಲ್ಲಿ ಯುವಕನನ್ನು ಚಾಕೂನಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವಕನ ಕೊಲೆಯಿಂದ ಜನರು ಭಯಭೀತರಾಗಿದ್ದಾರೆ.
ವಿಜಯಪುರ, ಮೇ.19: ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ವಿಜಯಪುರದ ಎಪಿಎಂಸಿ ಆವರಣದಲ್ಲಿನ ಕುರಿ, ಮೇಕೆ ಮಾರುಕಟ್ಟೆಯ ಬಳಿ ಯುವಕನನ್ನ ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಕೊಲೆ ಬಳಿಕ ಯವಕನ ಶವವನ್ನು ಅಲ್ಲೇ ಪಕ್ಕದ ಮುಳ್ಳುಕಂಟಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಹೀಗೆ ಭೀಕರವಾಗಿ ಕೊಲೆಯಾದ ಯುವಕನನ್ನು ನಗರದ ಕಂಬಾರ ಓಣಿ ನಿವಾಸಿ 23 ವರ್ಷದ ರೋಹಿತ್ ಸುಭಾಶ್ ಪವಾರ ಎಂದು ಗುರುತಿಸಲಾಗಿದೆ. ಮೃತ ಯುವಕನ ಮನೆಯವರ ಪ್ರಕಾರ ನಿನ್ನೆ(ಮೇ.18) ಮದ್ಯರಾತ್ರಿ 2-21 ಕ್ಕೆ ಖಾಲಿದ್ ಇನಾಂದಾರ್ ಎಂಬ ಯುವಕ ಇಂಡಿ ರಸ್ತೆಯಲ್ಲಿ ರೋಹಿತ್ ಕೊಲೆಯಾಗಿದೆ ಎಂದು ರೋಹಿತನ ಸಂಬಂಧಿಕ ಯುವಕನಿಗೆ ಹೇಳಿದ್ದನಂತೆ.
ಇದಾದ ಬಳಿಕ ಮನೆಯವರು ಹಾಗೂ ಸ್ಥಳೀಯರು ಸೇರಿ ರೋಹಿತ್ಗಾಗಿ ಹುಡುಕಾಡಿದ್ದಾರೆ. ಆದರೆ, ರೋಹಿತ್ ಎಲ್ಲಿಯೂ ಸಿಕ್ಕಿಲ್ಲ. ಕರೆ ಮಾಡಿದ ಖಾಲಿದ್ ಇನಾಂದಾರ್ಗೆ ಕರೆ ಮಾಡಿದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆತನ ಮನೆಗೆ ತೆರಳಿದರೂ ಮನೆಗೆ ಬೀಗ ಹಾಕಿತ್ತಂತೆ. ಬಳಿಕ ಸ್ಥಳೀಯ ಪಾನ್ ಶಾಪ್ ನವರು ರಾತ್ರಿ 8-30 ರ ಸುಮಾರಿಗೆ ರೋಹಿತ್ ನನಗೆ ಕರೆ ಮಾಡಿ ಎಪಿಎಂಸಿಯಲ್ಲಿದ್ದೇನೆ ಒಂದು ಪ್ಯಾಕೇಟ್ ಸಿಗರೇಟ್ ಬೇಕು ಎಂದು ಕಳುಹಿಸಿ ಎಂದಿದ್ದ ಎಂಬ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆಧಾರದ ಮೇಲೆ ರೋಹಿತ್ ಮನೆಯವರು ಎಪಿಎಂಸಿ ಆವರಣದಲ್ಲಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದ ಮುಳ್ಳುಕಂಟಿಯಲ್ಲಿ ಬಿಸಾಡಿದ ಸ್ಥಿತಿಯಲ್ಲಿ ಸಿಕ್ಕಿದೆ. ಕೂಡಲೇ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾವನಿಂದಲೇ ಅಳಿಯನ ಕೊಲೆ; ಪ್ರಕರಣ ಬೇಧಿಸಿದ ದಾವಣಗೆರೆ ಪೊಲೀಸರು
ಯುವಕನ ಕೊಲೆಯಾದ ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ, ಎಸ್ಪಿ ಶಂಕರ ಮಾರಿಹಾರ, ಡಿವೈಎಸ್ಪಿ ಬಸವರಾಜ ಯಲಿಗಾರ, ಇನ್ಸಪೆಕ್ಟರ್ ಮಹಾಂತೇಶ ಮಠಪತಿ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ತಂಡವರು ಆಗಮಿಸಿ ಪರೀಕ್ಷೆ ಮಾಡಿದರು. ಈ ಮೂಲಕ ಕೊಲೆಗಾರರ ಪತ್ತೆಗೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದರು. ಇನ್ನು ಕೊಲೆಯಾದ ಜಾಗದಲ್ಲಿ ಒಂದು ಮಚ್ಚು. ಒಂದು ಚಾಕೂ ಹಾಗೂ ಕಲ್ಲುಗಳು ಸಿಕ್ಕಿವೆ. ಖಾರದ ಪುಡಿ ಎರಚಿ ಕೊಚ್ಚಲಾಗಿದೆ. ಮಚ್ಚಿನಿಂದ ಕೊಚ್ಚುವ ವೇಳೆ ರೋಹಿತ್ ಕೈ ಅಡ್ಡ ತಂದ ಪರಿಣಾಮ ಮಚ್ಚಿಗೆ ಆತನ ಕೈ ಬೆರಳುಗಳು ತುಂಡಾಗಿ ಬಿದ್ದಿದ್ದು, ಘಟನೆಯ ಘೋರತೆಗೆ ಸಾಕ್ಷಿಯಾಗಿದೆ.
ಘಟನಾ ಸ್ಥಳದ ಸುತ್ತಮುತ್ತ ಖಾರದ ಪುಡಿ ಬಿದ್ದಿರೋದು ಕಂಡು ಬಂದಿದೆ. ಇನ್ನು ಕೊಲೆಯಾದ ರೊಹೀತ್ ಮನೆಯವರ ಪ್ರಕಾರ ರೋಹಿತ್ಗೆ ಇಬ್ಬರು ಸಹೋದರು ಇದ್ದು, ಡಾಗ್ ಕ್ರಾಸಿಂಗ್, ಡಾಗ್ ಬ್ರೀಡ್ ಗಳನ್ನು ಹಾಗೂ ಪಪ್ಪಿಗಳನ್ನು ಮಾರಾಟ ಮಾಡುವ ಕೆಲಸವನ್ನು ರೋಹಿತ್ ಮಾಡುತ್ತಿದ್ದನಂತೆ. ಆಗಾಗ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದನಂತೆ. ಖಾಲಿದ್ ಇನಾಂದಾರ್ ಜೊತೆಗೆ ಹಣಕಾಸಿನ ವ್ಯವಹಾರ ಇತ್ತೆಂದು ರೋಹಿತ್ನ ಗೆಳೆಯರು ಮನೆಯವರಿಗೆ ತಿಳಿಸಿದ್ಧಾರೆ. ಖಾಲಿದ್ ಇನಾಂದಾರ್ ಎಂಬ ಯುವಕ ರೋಹಿತ್ ಬಳಿ ಹಣ ಪಡೆದುಕೊಂಡಿದ್ದನಂತೆ. ಇದೇ ಕಾರಣಕ್ಕೆ ರೋಹಿತ್ ನನ್ನು ಖಾಲಿದ್ ಇನಾಂದಾರ್ ಇತರರೊಂದಿಗೆ ಸೇರಿ ಕೊಲೆ ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಹಂತಕರನ್ನು ಪತ್ತೆ ಮಾಡಬೇಕೆಂದು ಕೊಲೆಯಾದ ಯುವಕನ ಮನೆಯವರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ
ಎಸ್ಪಿ ಹೇಳಿದ್ದೀಷ್ಟು
ಘಟನೆ ಕುರಿತು ಎಸ್ಪಿ ಋಷಿಕೇಶ ಸೋನೆವಣೆ ಮಾತನಾಡಿದ್ದು, ‘ಸದ್ಯ ನಮ್ಮ ತಂಡ ಪ್ರಾಥಮಿಕ ತನಿಖೆ ನಡೆಸಿದೆ. ಎಫ್ಐಆರ್ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಹಣಕಾಸಿನ ವಿಚಾರದಲ್ಲಿ ನಡೆದಿದೆ ಎಂದು ಕಂಡು ಬಂದಿದೆ. ಪೂರ್ಣ ತನಿಖೆ ಬಳಿಕ ನಿಖರ ಮಾಹಿತಿ ಸಿಗಲಿದೆ. ನಮ್ಮ ತಂಡ ಕೊಲೆಗಾರರ ಪತ್ತೆಗೆ ಜಾಲ ಬೀಸಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಬಳಿಕ ಕೊಲೆಯಾದ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಬಿಎಲ್ಡಿಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಘಟನಾ ಸ್ಥಳದಲ್ಲಿ ಕೊಲೆಯಾದ ಯುವಕನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಯುವಕ ತಾಯಿ ಹಾಗೂ ಸಂಬಧಿಕರು ಎದೆ ಬಡಿದುಕೊಂಡು ಕಣ್ಣೀರು ಹಾಕಿದ್ದರು. ಘಟನಾ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಗಿತ್ತು. ಇನ್ನು ಘಟನೆ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕರ ಪತ್ತೆಗೆ ಖಾಕಿ ಪಡೆ ಜಾಲ ಬೀಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ