ಮೌಲ್ಯಮಾಪನ ಸಮಸ್ಯೆಯಿಂದ 2777 ವಿದ್ಯಾರ್ಥಿಗಳಿಗೆ ತೊಂದರೆ: ಬಿಸಿ ನಾಗೇಶ್
ಕಳೆದ 3 ವರ್ಷಗಳಿಂದ ಪಿಯುಸಿಯಲ್ಲಿ ಅಸಮರ್ಪಕ ಮೌಲ್ಯಮಾಪನದಿಂದಾಗಿ 2,777 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಬೆಂಗಳೂರು: ಕಳೆದ 3 ವರ್ಷಗಳಿಂದ ಪಿಯುಸಿಯಲ್ಲಿ ಅಸಮರ್ಪಕ ಮೌಲ್ಯಮಾಪನದಿಂದಾಗಿ 2,777 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಸದಸ್ಯ ಸುಂಕನೂರ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರದಲ್ಲೇ ಸಭೆ ಕರೆದು ದಂಡ ವಿಧಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ಸರ್ಕಾರ ಯಾಕೆ ಉಪನ್ಯಾಸಕರಿಂದ ದಂಡ ವಸೂಲಿ ಮಾಡುತ್ತಿಲ್ಲ ಎಂದು ಸದಸ್ಯರು ಸಚಿವರನ್ನು ಪ್ರಶ್ನಿಸಿದರು. 2019ರಲ್ಲಿ 1072, 2020ರಲ್ಲಿ 1664, 2021 ರಲ್ಲಿ 39 ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದೆ ಎಂದು ಸಚಿವರು ಉತ್ತರಿಸಿದರು. ಈ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಎಸ್.ವಿ.ಸಂಕನೂರು, ಕೇವಲ ನಾಲ್ಕೈದು ಅಂಕ ವ್ಯತ್ಯಾಸ ಆಗುತ್ತಿಲ್ಲ. 19 ಅಂಕಗಳು ವ್ಯತ್ಯಾಸ ಬಂದಿರುವ ಉದಾಹರಣೆಗಳಿವೆ. ಪಾಸ್ ಆದ ವಿದ್ಯಾರ್ಥಿಗಳನ್ನೂ ರಿ ವ್ಯಾಲ್ಯುಯೇಷನ್ನಲ್ಲಿ ಫೇಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸಮರ್ಪಕ ಮೌಲ್ಯಮಾಪನ ಮಾಡಿದವರನ್ನು ಶಿಕ್ಷಕರ ಕ್ಷೇತ್ರದಿಂದ ಬಂದ ಸದಸ್ಯರು ರಕ್ಷಿಸುತ್ತಿದ್ದಾರೆ ಎಂದು ಪರಿಷತ್ನಲ್ಲಿ ಲಕ್ಷ್ಮಣ ಸವದಿ ಹಾಸ್ಯ ಮಾಡಿದರು. ಬೇರೆ ಸಮಸ್ಯೆ ಆಗಿದ್ದರೆ ಎದ್ದು ನಿಂತು ಆ ಕಡೆಯಿಂದ 14, ಈ ಕಡೆಯಿಂದ 14 ಜನರು ಮೇಲೆದ್ದು ಕೂಗೆಬ್ಬಿಸುತ್ತಿದ್ದರು. ಅಸಮರ್ಪಕ ಮೌಲ್ಯಮಾಪನ ಮಾಡಿದವರು ಇವರ ಮತದಾರರು. ಹೀಗಾಗಿಯೇ ಪ್ರಶ್ನೆ ಕೇಳಿದ ತಕ್ಷಣ ಎಲ್ಲರೂ ನಿಲ್ಲಿಸಿ ಸಾಕು ಎನ್ನುತ್ತಿದ್ದಾರೆ. ಯಾಕೆ ಹೆಚ್ಚಿಗೆ ಕೇಳ್ತೀಯಾ, ಎಳೆದಾಡ್ತಾನೆ ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಸಮರ್ಪಕ ಮೌಲ್ಯಮಾಪನ ಮಾಡಿದವರನ್ನು ರಕ್ಷಿಸಬಾರದು. ಪೋಷಕರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಆಗಲೇಬೇಕು ಎಂದರು. ಸಭಾಪತಿ ಹೊರಟ್ಟಿ ಅವರೇ ಪರಿಹಾರದ ಬಗ್ಗೆ ಸಲಹೆ ನೀಡಿ, ಶಿಕ್ಷಕರ ಸಂಘದ ಸಭೆ ಕರೆದು ನಿರ್ದೇಶನ ನೀಡಿ ಎಂದರು.
ಉಕ್ರೇನ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮಾಪ್ ಅಪ್
ಉಕ್ರೇನ್ನಲ್ಲಿ ಯುದ್ಧಕ್ಕೆ ಸಿಲುಕಿದ ವಿದ್ಯಾರ್ಥಿಗಳು ಮಾಪ್ ಅಪ್ ರೌಂಡ್ಗೆ ಅರ್ಹರಾಗಿದ್ದಾರೆ. ಆದರೆ ಕೆಲವರು ಯುದ್ಧದಲ್ಲಿ ಮೂಲ ಅಂಕಪಟ್ಟಿಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೂ ಮೆಡಿಕಲ್ ಮಾಪ್ ಅಪ್ ರೌಂಡ್ನಲ್ಲಿ ಅವಕಾಶ ನೀಡಬೇಕು ಎಂದು ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನೀಟ್ ಪರೀಕ್ಷೆ ವಿಚಾರ ಕುರಿತು ಸದಸ್ಯ ಚಿದಾನಂದ ಗೌಡ ಪ್ರಶ್ನಿಸಿದರು. ಎನ್ಆರ್‌ಐ ಕೋಟಾದಡಿ ವರ್ಷಕ್ಕೆ 500ಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿಯುತ್ತಿವೆ. ಈ ಸೀಟ್ಗಳನ್ನು ಸರ್ಕಾರ ವಾಪಸ್ ಪಡೆದರೆ ಉಕ್ರೇನ್ನಂಥ ದೇಶಗಳಿಗೆ ನಮ್ಮ ಮಕ್ಕಳು ಹೋಗುವುದು ತಪ್ಪುತ್ತದೆ ಎಂದು ಹೇಳಿದರು. ಈ ಖಾಲಿ ಉಳಿದ ಎನ್‌ಆರ್‌ಐ ಸೀಟುಗಳನ್ನು ಕಾಲೇಜುಗಳು ಮ್ಯಾನೇಜ್ಮೆಂಟ್ ಸೀಟುಗಳಾಗಿ ಮಾರಾಟ ಮಾಡುತ್ತವೆ ಎಂದರು.
ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಒಟ್ಟು 67 ವೈದ್ಯಕೀಯ ಕಾಲೇಜುಗಳಿವೆ. ಎನ್‌ಆರ್‌ಐ ಕೋಟಾದಡಿ ತುಂಬದ ಸೀಟುಗಳನ್ನು 1:10ರ ಅನುಪಾತದಲ್ಲಿ ಈ ಕಾಲೇಜುಗಳು ಭರ್ತಿ ಮಾಡಿಕೊಳ್ಳುತ್ತವೆ. ಈವರೆಗೂ ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಈ ಸೀಟುಗಳು ಒಂದೇ ಒಂದು ಲ್ಯಾಪ್ಸ್ ಆಗಿಲ್ಲ. ಖಾಸಗಿ ಕಾಲೇಜುಗಳಲ್ಲಿ 1:10ರ ಅನುಪಾತದಲ್ಲಿಯೂ ಸೀಟು ಭರ್ತಿ ಮಾಡಲಾಗುತ್ತದೆ ಎಂದರು.
ಬಿಪಿಎಲ್ ಕಾರ್ಡ್ ಹಂಚಿಕೆ ಬಾಕಿಯಾಗಿರುವ ಕುರಿತು ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ ಉತ್ತರಿಸಿದರು ಕೊವಿಡ್ ಕಾರಣದಿಂದ 4 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳು ಬಾಕಿ ಇವೆ. 13 ಲಕ್ಷ BPL ಕಾರ್ಡ್ಗಳನ್ನ ಹಿಂಪಡೆದುಕೊಂಡಿದ್ದೇವೆ. ಇವು ಸರ್ಕಾರಿ ನೌಕರರು, ಟ್ಯಾಕ್ಸ್ ಪೇಯರ್ಸ್ ಬಳಿ ಇದ್ದ ಬಿಪಿಎಲ್ ಕಾರ್ಡ್ ಹಿಂಪಡೆದಿದ್ದೇವೆ ಎಂದರು.