Education Loans: ಶೈಕ್ಷಣಿಕ ಸಾಲ ಮರುಪಾವತಿ ಮೊತ್ತದಲ್ಲಿ ಕಡಿತ ಆಗಬೇಕೇ? ಈ ಅಂಶಗಳು ಗಮನದಲ್ಲಿರಲಿ
Bank Education Loans: ತಮ್ಮ ಮಗಳಿಗಾಗಿ ಶೈಕ್ಷಣಿಕ ಸಾಲ ತೆಗೆದಿದ್ದು, ತಾವೇ ಮರುಪಾವತಿ ಮಾಡುತ್ತಿದ್ದರೆ ತೆರಿಗೆ ಕಡಿತ ಸೌಲಭ್ಯ ಪಡೆಯಲು ಅವಕಾಶ ಇದೆ. ಒಂದು ವೇಳೆ ಮಗಳೇ ದುಡಿಮೆ ಆರಂಭಿಸಿ, ಸಾಲ ಮರುಪಾವತಿ ಮಾಡುತ್ತಿದ್ದರೆ ನೀವಾಗಲೀ ಆಕೆಯಾಗಲೀ ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.

ಕಳೆದ ಒಂದೂವರೆ ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೊನಾ ಎಲ್ಲರ ಸ್ಥಿತಿಗತಿಗಳನ್ನು ಬದಲಿಸಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ನಿಂತ ನೀರಿನಂತೆ ಆಗಿವೆ. ಅದರಲ್ಲೂ ಓದು ಮುಗಿಸಿ ಕೆಲಸಕ್ಕಾಗಿ ಕಾಯುತ್ತಿದ್ದ ದೊಡ್ಡ ಯುವ ಸಮುದಾಯವನ್ನು ಕೊರೊನಾ ಹಿಂಡಿ ಹಿಪ್ಪೆ ಮಾಡಿದೆ. ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದು, ಕೆಲಸ ಸಿಕ್ಕ ನಂತರ ಅದನ್ನು ತೀರಿಸೋಣ ಎಂಬ ಲೆಕ್ಕಾಚಾರದಲ್ಲಿದ್ದ ಬಹುತೇಕರಿಗೆ ಪ್ರಸ್ತುತ ಸನ್ನಿವೇಶ ಹೊರೆ ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಾಲದ ಮೇಲಿನ ಹೊರೆ ತಗ್ಗಿಸಿಕೊಳ್ಳುವುದು ಹೇಗೆ? ಅಂತಹ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವುದರ ಸಂಕ್ಷಿಪ್ತ ಮಾಹಿತಿ ಇಲ್ಲಿ ಲಭ್ಯವಿದೆ.
ಶೈಕ್ಷಣಿಕ ಸಾಲದ ಮೇಲೆ ತೆರಿಗೆ ಕಡಿತಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇ ಅಡಿಯಲ್ಲಿ ಅವಕಾಶವಿದೆ. ಆದರೆ ಅದಕ್ಕೂ ಮುನ್ನ ಕೆಲ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕಿದ್ದು, ತೆರಿಗೆ ಕಡಿತ ಆಗಬೇಕೆಂದರೆ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗಿದೆ. ಒಂದು ವೇಳೆ ಅದರ ಎಲ್ಲಾ ನಿಯಮಗಳಿಗೂ ನೀವು ಬದ್ಧರಾಗಿದ್ದಲ್ಲಿ ನಿಮಗೆ ಸೂಕ್ತ ಪ್ರಮಾಣದ ತೆರಿಗೆ ಕಡಿತ ಆಗುತ್ತದೆ ಹಾಗೂ ನೀವು ಮರುಪಾವತಿಸಬೇಕಾದ ಮೊತ್ತದ ಪ್ರಮಾಣ ಕಡಿಮೆಯಾಗುತ್ತದೆ.
ಪ್ರಪ್ರಥಮವಾಗಿ ಯಾವುದೇ ವಿದ್ಯಾರ್ಥಿ ತನ್ನ ಶೈಕ್ಷಣಿಕ ಕಾರಣಕ್ಕೆ ಅಗತ್ಯವಿದ್ದಷ್ಟು ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ತೆರಿಗೆ ಕಡಿತದ ವಿಚಾರಕ್ಕೆ ಬಂದಾಗ ಮರುಪಾವತಿಸುವ ಸಮಯದಲ್ಲಿನ ಬಡ್ಡಿಯ ಮೇಲೆ ಅದು ಅನ್ವಯವಾಗುತ್ತದೆಯೇ ವಿನಃ ಮೂಲ ಮೊತ್ತದ (ಪ್ರಿನ್ಸಿಪಲ್ ಅಮೌಂಟ್) ಮೇಲೆ ಕಡಿತ ಆಗುವುದಿಲ್ಲ. ಅಂದರೆ, ನೀವು ತೆಗೆದುಕೊಂಡ ಸಾಲದ ಮೊತ್ತ ಎಷ್ಟಿದೆಯೋ ಅಷ್ಟನ್ನು ಹಿಂತಿರುಗಿಸಲೇಬೇಕು. ಕಡಿತ ಆಗುವುದಿದ್ದರೆ ಅದು ಬಡ್ಡಿಯ ಮೇಲೆ ಮಾತ್ರ.
ವಿನಾಯಿತಿ ಸೌಲಭ್ಯವನ್ನು ಸಾಲ ಪಡೆದ ವ್ಯಕ್ತಿ ಪಡೆಯಬಹುದೇ ಹೊರತು ಆತನ ಪರವಾಗಿ ಬೇರೆ ಯಾರೂ ಅರ್ಜಿ ಸಲ್ಲಿಸಲಾಗದು. ಎಷ್ಟೋ ಸಂದರ್ಭದಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿಯೇ ಶೈಕ್ಷಣಿಕ ಸಾಲ ಮಂಜೂರಾಗಿರಬೇಕು ಎಂದೇನಿಲ್ಲ. ಬದಲಾಗಿ, ಅವರ ಪೋಷಕರು ಸಾಲ ಪಡೆದಿರಬಹುದು. ಹೀಗಿರುವಾಗ ಅವರು ತೆರಿಗೆ ಕಡಿತಕ್ಕೆ ಕೋರಬಹುದು. ಅಂದರೆ, ತಮ್ಮ ಮಗಳಿಗಾಗಿ ಶೈಕ್ಷಣಿಕ ಸಾಲ ತೆಗೆದಿದ್ದು, ತಾವೇ ಮರುಪಾವತಿ ಮಾಡುತ್ತಿದ್ದರೆ ತೆರಿಗೆ ಕಡಿತ ಸೌಲಭ್ಯ ಪಡೆಯಲು ಅವಕಾಶ ಇದೆ. ಒಂದು ವೇಳೆ ಮಗಳೇ ದುಡಿಮೆ ಆರಂಭಿಸಿ, ಸಾಲ ಮರುಪಾವತಿ ಮಾಡುತ್ತಿದ್ದರೆ ನೀವಾಗಲೀ ಆಕೆಯಾಗಲೀ ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ. ಏಕೆಂದರೆ, ಇಲ್ಲಿ ಸಾಲ ನಿಮ್ಮ ಹೆಸರಿನಲ್ಲಿದ್ದರೂ ಮರುಪಾವತಿ ನಿಮ್ಮ ಆದಾಯದಿಂದ ಆಗುತ್ತಿರುವುದಿಲ್ಲ. ಇದನ್ನು ತುಂಬಾ ಸರಳವಾಗಿ ಹೇಳಬೇಕೆಂದರೆ, ಯಾರ ಹೆಸರಿನಲ್ಲಿ ಸಾಲವಿದೆಯೋ ಅವರ ಬ್ಯಾಂಕ್ ಖಾತೆಯ ಹಣದಿಂದಲೇ ಮರುಪಾವತಿ ಆಗುತ್ತಿದ್ದಲ್ಲಿ ಮಾತ್ರ ತೆರಿಗೆ ಕಡಿತ ಆಗುತ್ತದೆ ಎಂದು ಬ್ಯಾಂಕ್ ಬಜಾರ್.ಕಾಂ ಸಿಇಓ ಅದಿಲ್ ಶೆಟ್ಟಿ ವಿವರಿಸಿದ್ದಾರೆ.
ಆದರೆ, ಕೆಲವೊಂದು ಸಂಸ್ಥೆಗಳು ಸಹೋದರರಿಗೆ, ಸಹೋದರ ಸಂಬಂಧಿಗಳ ಉನ್ನತ ಶಿಕ್ಷಣಕ್ಕೂ ಸಾಲ ಒದಗಿಸುತ್ತವೆ. ಅಂತಹ ಸಂದರ್ಭದಲ್ಲಿ ನೀವು ಕಾನೂನಾತ್ಮಕವಾಗಿ ಅವರ ಪೋಷಕರು ಎಂದಾಗದೇ ತೆರಿಗೆ ಕಡಿತ ಸಾಧ್ಯವಿಲ್ಲ. ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಎಲ್ಲಾ ಶೈಕ್ಷಣಿಕ ಸಾಲಗಳೂ ಈ ಸೌಲಭ್ಯಕ್ಕೆ ಅರ್ಹವಲ್ಲ. ಬದಲಾಗಿ, ಸೆಕ್ಷನ್ 80ಇ ಸೂಚಿಸುವಂತೆ ಅರ್ಹ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮಾತ್ರ ಇದಕ್ಕೆ ಒಳಪಡುತ್ತದೆ.
ದೇಶದಲ್ಲಿ ಅನೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಶೈಕ್ಷಣಿಕ ಸಾಲ ನೀಡುತ್ತವಾದರೂ ಬಹುಪಾಲು ಸಂಸ್ಥೆಗಳು ಸೆಕ್ಷನ್ 80ಇ ಸೂಚಿಸುವ ಪಟ್ಟಿಯಲ್ಲಿ ಒಳಗೊಂಡಿರುವುದಿಲ್ಲ. ಹೀಗಾಗಿ, ಸಾಲ ಪಡೆಯುವಾಗ ಅದನ್ನು ಗಮನಿಸುವುದು ಅವಶ್ಯಕ. ಅಲ್ಲದೇ, ಸಂಬಂಧಿಗಳಿಂದ, ಕಂಪೆನಿಗಳಿಂದ ಅಥವಾ ಇನ್ಯಾವುದೇ ಮೂಲದಿಂದ ಪಡೆದ ಸಾಲಗಳು ಇದಕ್ಕೆ ಸಂಬಂಧಪಡುವುದಿಲ್ಲ.
ಒಟ್ಟಾರೆಯಾಗಿ ಅರ್ಹ ಮೂಲದಿಂದ ಪಡೆದ ಸಾಲಕ್ಕೆ ಮರುಪಾವತಿ ಮಾಡಲಾರಂಭಿಸಿದ ವರ್ಷದಿಂದ 8 ವರ್ಷ ಅವಧಿಯ ತನಕ ಬಡ್ಡಿಯ ಮೇಲೆ ತೆರಿಗೆ ಕಡಿತ ಪಡೆಯಬಹುದು. ಒಂದು ವೇಳೆ ಸಾಲ ಮರುಪಾವತಿ ಅವಧಿ ಎಂಟು ವರ್ಷಕ್ಕಿಂತ ಜಾಸ್ತಿಯಾದಲ್ಲಿ ಆದಾಯ ತೆರಿಗೆಯಲ್ಲಿ ಬಡ್ಡಿಯ ಮೇಲೆ ಯಾವುದೇ ಕಡಿತ ಆಗುವುದಿಲ್ಲ.
ಇವಿಷ್ಟು ಅಂಶಗಳು ನೆನಪಿರಲಿ: 1. ಬಡ್ಡಿಯ ಮೇಲಿನ ತೆರಿಗೆ ಕಡಿತವು ಸಾಲಗಾರರು ತಮ್ಮ ತೆರಿಗೆ ಸಹಿತ ಆದಾಯದಿಂದ ಸಾಲ ಮರುಪಾವತಿ ಮಾಡುತ್ತಿದ್ದರೆ ಮಾತ್ರ ಲಭ್ಯ 2. ತೆರಿಗೆ ಮೇಲಿನ ಕಡಿತವನ್ನು ಸಾಲದ ಮೇಲೆ ಬಡ್ಡಿ ಬೀಳಲಾರಂಭಿಸುವ ವರ್ಷದಿಂದ ಸಾಲ ಸಂಪೂರ್ಣ ಮರುಪಾವತಿ ಆಗುವ ಅವಧಿಗೆ ಅಥವಾ 8ನೇ ವರ್ಷದ ತನಕ ಪಡೆಯಬಹುದು 3. ಸೆಕ್ಷನ್ 80ಇ ಸೂಚಿಸುವ ಅರ್ಹ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮಾತ್ರ ಇದಕ್ಕೆ ಒಳಪಡುತ್ತದೆ
ಇದನ್ನೂ ಓದಿ: Education loan: ವಿದೇಶ ವ್ಯಾಸಂಗಕ್ಕೆ ಕಡಿಮೆ ಬಡ್ಡಿ ದರದ ಶೈಕ್ಷಣಿಕ ಸಾಲ ನೀಡುವ ಸಾರ್ವಜನಿಕ ಬ್ಯಾಂಕ್ಗಳಿವು