ಗುಟ್ಟಾಗಿ ಉಳಿದಿಲ್ಲ; ಉಗ್ರರೊಂದಿಗಿನ ಪಾಕಿಸ್ತಾನದ ನಂಟು ಒಪ್ಪಿಕೊಂಡ ಬಿಲಾವಲ್ ಭುಟ್ಟೋ
ಪಾಕಿಸ್ತಾನ ಮತ್ತು ಭಾರತದ ನಡುವೆ ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಪ್ರಧಾನಿ ಈ ದಾಳಿಯ ಬಗ್ಗೆ ಪಾರದರ್ಶನಕ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಉಗ್ರರ ಜೊತೆಗೆ ಹಲವು ಕಾಲದಿಂದಲೂ ಪಾಕಿಸ್ತಾನಕ್ಕೆ ಸಂಬಂಧವಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಉಗ್ರರ ಜೊತೆಗಿನ ನಂಟಿನ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ.

ಇಸ್ಲಮಾಬಾದ್, ಮೇ 2: ಪಾಕಿಸ್ತಾನ ಭಾರತದಲ್ಲಿನ ಪಹಲ್ಗಾಮ್ ದಾಳಿಯ (Pahalgam Terror Attack) ಬಗ್ಗೆ ಪಾರದರ್ಶನ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡುವ ಮೂಲಕ ಈ ದಾಳಿಗೂ ತನಗೂ ಸಂಬಂಧವಿಲ್ಲವೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ಅವರದೇ ದೇಶದ ರಕ್ಷಣಾ ಸಚಿವರು ಉಗ್ರರೊಂದಿಗೆ ಪಾಕಿಸ್ತಾನಕ್ಕೆ ಸಂಬಂಧವಿದೆ ಎನ್ನುವ ಮೂಲಕ ಅಸಲಿ ಸತ್ಯವನ್ನು ಹೊರಹಾಕಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಉಗ್ರರ ಗುಂಪುಗಳೊಂದಿಗಿನ ಸಂಬಂಧಕ್ಕೆ ಪಾಕಿಸ್ತಾನಕ್ಕೆ ಹಳೆಯ ಇತಿಹಾಸವಿದೆ. ನಮಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಇದ್ದ ನಂಟು ರಹಸ್ಯವೇನಲ್ಲ. ಇದರ ಪರಿಣಾಮವಾಗಿ ನಾವು ಬಳಲಿದ್ದೇವೆ. ಪಾಕಿಸ್ತಾನ ಉಗ್ರರಿಂದ ಬಳಲಿದೆ. ನಾವು ಕೂಡ ಭಯೋತ್ಪಾದನೆಯನ್ನು ಎದುರಿಸಿದ್ದೇವೆ. ಸಮಸ್ಯೆಯನ್ನು ಎದುರಿಸಲು ಆಂತರಿಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಹಾಗೇ, ಈ ಹಿಂದೆ ನಮಗೂ ಉಗ್ರರಿಗೂ ಸಂಬಂಧವಿದ್ದಿದ್ದು ನಿಜ. ಆದರೆ, ಈಗ ನಾವು ಉಗ್ರರ ದಾಳಿಯಲ್ಲಿ ಭಾಗಿಯಾಗಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಭಾರತದಿಂದ ವೈಮಾನಿಕ ದಾಳಿ ಭೀತಿ; ಪಾಕಿಸ್ತಾನದಿಂದ ಗಡಿಯಲ್ಲಿ ತುರ್ತು ಸೈರನ್ ಅಳವಡಿಕೆ
ಪಾಕಿಸ್ತಾನವು ಹಿಂದೆ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಿದೆ ಮತ್ತು ಅವರಿಗೆ ಹಣಕಾಸು ಒದಗಿಸಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡ ಕೆಲವು ದಿನಗಳ ನಂತರ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಯೋತ್ಪಾದಕ ಗುಂಪುಗಳೊಂದಿಗೆ ದೇಶದ ಸಂಪರ್ಕದ ಕುರಿತು ಹಿಂದಿನ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳೊಂದಿಗೆ ಹಿಂದಿನ ಸಂಪರ್ಕಗಳಿಂದಾಗಿ ತೊಂದರೆ ಅನುಭವಿಸಿದೆ ಎಂದು ಹೇಳಿದ್ದಾರೆ. ಗುರುವಾರ ಮಿರ್‌ಪುರ್ ಖಾಸ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಆದರೆ ಭಾರತದಿಂದ ಪ್ರಚೋದನೆಗೆ ಒಳಗಾದರೆ ಪ್ರತಿಕ್ರಿಯಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಈ ಪ್ರಜೆಗಳಿಗೆ ಭಾರತದ ಗಡಿಯೊಳಗೆ ಪ್ರವೇಶಿಸಲು ಮುಕ್ತ ಅವಕಾಶ
‘ಪಾಕಿಸ್ತಾನ ಶಾಂತಿಯುತ ದೇಶ. ಇಸ್ಲಾಂ ಶಾಂತಿಯುತ ಧರ್ಮ. ನಮಗೆ ಯುದ್ಧ ಬೇಡ, ಆದರೆ ಯಾರಾದರೂ ನಮ್ಮ ಸಿಂಧು ಮೇಲೆ ದಾಳಿ ಮಾಡಿದರೆ ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಾವು ಯುದ್ಧದ ಡ್ರಮ್ ಬಾರಿಸುವುದಿಲ್ಲ. ಆದರೆ ಪ್ರಚೋದಿಸಿದರೆ ಅಖಂಡ ಪಾಕಿಸ್ತಾನದ ಘರ್ಜನೆ ಅವರನ್ನು ಕಿವುಡಾಗಿಸುತ್ತದೆ” ಎಂದು ಅವರು ರ್ಯಾಲಿಯಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Fri, 2 May 25