ಏಪ್ರಿಲ್ 5ರಂದು ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಅನರ್ಹತೆ ಬಗ್ಗೆ ಕೋಲಾರದಿಂದಲೇ ಉತ್ತರ
ಅನರ್ಹತೆ ಬಗ್ಗೆ ಕೋಲಾರದಿಂದಲೇ ತಕ್ಕ ಪ್ರತ್ಯುತ್ತರ ನೀಡಲು ಏಪ್ರಿಲ್ 5 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಕೋಲಾರ: 2019ರ ಲೋಕಸಭಾ ಚುನಾವಣೆ (Lok Sabha Election) ವೇಳೆ ಮೋದಿ ಸಮುದಾಯ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆ ಮತ್ತು ಸಂಸದ (MP) ಸ್ಥಾನದಿಂದ ಎಐಸಿಸಿ (AICC) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅನರ್ಹಗೊಂಡಿದ್ದರು. ಇದಕ್ಕೆ ಕೋಲಾರದಿಂದಲೇ (Kolar) ಪ್ರತ್ಯುತ್ತರ ನೀಡಲು ಏಪ್ರಿಲ್ 5 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಪ್ರಚಾರದ ಹಿನ್ನೆಲೆ ರಾಹುಲ್ ಗಾಂಧಿ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಕಳೆದ ಬಾರಿ ಬೆಳಗಾವಿಯಲ್ಲಿ (Belagavi) ಅಬ್ಬರಿಸಿದ್ದರು. ಈ ಬಾರಿಯ ರಾಹುಲ ಗಾಂಧಿಯ ಕೋಲಾರ ಭೇಟಿ ವಿಶೇಷವಾಗಿದೆ.
ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹವಾಗಿದ್ದು ಕೋಲಾರದಲ್ಲಿ ಮಾಡಿದ ಬಾಷಣದಿಂದ. ಹೀಗಾಗಿ ಕೋಲಾರದಿಂದಲೇ ಪ್ರಚಾರ ಆರಂಭಿಸಿ, ಅನರ್ಹಗೊಳಿಸಿದ್ದನ್ನೇ ಪ್ರಚಾರದ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಮತ್ತು ಬಿಜೆಪಿ ಸರ್ಕಾರಕ್ಕೆ ಉತ್ತರ ನೀಡಲು ಸಿದ್ದವಾಗಿದೆ. ಈಗಾಗಲೆ ಕಾಂಗ್ರೆಸ್ ದೇಶಾದ್ಯಂತ ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಭಟನೆ ಮಾಡುತ್ತಿದೆ.
ಇದನ್ನೂ ಓದಿ: ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ: ಪೂರಕ ಸಾಕ್ಷ್ಯ ಕರ್ನಾಟಕದಿಂದ ಸೂರತ್ಗೆ ಹೋದ ಬಗೆ ಹೀಗಿದೆ ನೋಡಿ
ರಾಹುಲ್ ಗಾಂಧಿ ಕೋಲಾರದಲ್ಲಿ ಮಾಡಿದ ಭಾಷಣವಾದರು ಏನು?
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಹೆಚ್.ಮುನಿಯಪ್ಪ ಪರ ಕೋಲಾರದಲ್ಲಿ ನಡೆದ ಪ್ರಚಾರದಲ್ಲಿ ರಾಹುಲ್ ಗಾಂಧಿ ಅಂದಿನ ಎಐಸಿಸಿ ಅಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದ ವೇಳೆಯಲ್ಲಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್ ನೇಮ್ ಒಂದೇ ಆಗಿದ್ದು, ಈ ಹೆಸರಿನವರು ಎಲ್ಲರೂ ಕಳ್ಳರು. ಈ ಎಲ್ಲಾ ಕಳ್ಳರು ಸೇರಿ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದರು. ಕೋಲಾರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ, ಮುಳಬಾಗಿಲಿನ ರೋಡ್ ಶೋ ವೇಳೆಯಲ್ಲಿ ಹಾಗೂ ಕೆಜಿಎಫ್ನ ನಗರಸಭೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಬಹಿರಂಗ ಸಮಾವೇಶದ ವೇಳೆಯಲ್ಲೂ ರಾಹುಲ್ ಗಾಂಧಿ ಇದೇ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು.
ರಾಹುಲ್ ಗಾಂಧಿ ಕೋಲಾರ ಭಾಷಣಕ್ಕೆ ಗುಜರಾತ್ನಲ್ಲಿ ಪ್ರಕರಣ ದಾಖಲು
ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಗುಜರಾತ್‌ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ ಸೂರತ್‌ನಲ್ಲಿ ದೂರು ನೀಡಿದ್ದರು. ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿ ಮಾಡಿದ ಟೀಕೆ ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಎಂದು ನೀಡಿದ್ದರು. ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ (ಮಾನಹಾನಿ) ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ರಾಹುಲ್ ಗಾಂಧಿಯವರು ಮೂರು ಬಾರಿ ಸೂರತ್ ಕೋರ್ಟ್‌ಗೆ ಹಾಜರಾಗಿದ್ದರು. ಈಗ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ್ದು, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 am, Tue, 28 March 23