ಮೀಸಲಾತಿಯ ಚಕ್ರವ್ಯೂಹದಲ್ಲಿ ಸಿಲುಕಿದ ಸಿಎಂ ಬಸವರಾಜ ಬೊಮ್ಮಾಯಿ: ಬಿಗಿಸುತ್ತಲೇ ಇದೆ ನಿರೀಕ್ಷೆಗಳ ಪಾಶ
ಮೀಸಲಾತಿಯ ಅಸ್ತ್ರ ಸರ್ಕಾರಕ್ಕೆ ವರವೋ ಅಥವಾ ಶಾಪವೋ ಎನ್ನುವ ಚರ್ಚೆ ಕರ್ನಾಟಕದಲ್ಲಿ ಇದೀಗ ಜೋರಾಗಿ ನಡೆಯುತ್ತಿದೆ. ಈ ಚಕ್ರವ್ಯೂಹವನ್ನು ಸಿಎಂ ಬೊಮ್ಮಾಯಿ ಅತ್ಯಂತ ಚಾಣಾಕ್ಷತನದಿಂದ ಭೇದಿಸಬೇಕಿದೆ.
‘ಮೀಸಲಾತಿ’ ಸದ್ಯ ಕರುನಾಡಲ್ಲಿ ತುಂಬಾ ಪ್ರಸ್ತುತವಾದ ಸಮುದಾಯಗಳನ್ನು ಸೆಳೆಯುವ ಆಯುಧವಿದು. ಮೀಸಲಾತಿಯ ಅಸ್ತ್ರ ಸರ್ಕಾರಕ್ಕೆ ವರವೋ ಅಥವಾ ಶಾಪವೋ ಎನ್ನುವ ಚರ್ಚೆ ಕೂಡ ಜೋರಾಗಿಯೇ ನಡೆಯುತ್ತಿದೆ. ಮೀಸಲಾತಿ ಎಂಬ ಚಕ್ರವ್ಯೂಹವನ್ನು ತುಂಬಾ ಚಾಣಾಕ್ಷತನದಿಂದ ಭೇದಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ದೊಡ್ಡ ದಿಕ್ಸೂಚಿ ಈ ಮೀಸಲಾತಿ. ಬಲಾಢ್ಯ ಸಮುದಾಯಗಳೇ ಮೀಸಲಾತಿಯ ಹಿಂದೆ ಜೋತುಬಿದ್ದಿವೆ. ತಮ್ಮ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಧೃಡರಾಗಲು ಮೀಸಲಾತಿ ಬೇಕೇ ಬೇಕು ಎಂದು ಹೋರಾಟಕ್ಕಿಳಿದಿವೆ. ಈ ಹೋರಾಟದ ಕಿಚ್ಚು ಸಿಎಂ ಬೊಮ್ಮಾಯಿಗೆ ಭಾರೀ ಸಂಕಷ್ಟವನ್ನುಂಟುಮಾಡಿದೆ. ಅದನ್ನು ಕಾಮನ್ ಮ್ಯಾನ್ ಸಿಎಂ ಎಂದು ಕರೆಸಿಕೊಳ್ಳುವ ಬೊಮ್ಮಾಯಿ, ತುಂಬಾ ಲಾಜಿಕ್ ಆಗಿ ಯೋಚನೆ ಮಾಡಿ ಎಲ್ಲಾ ಸಮುದಾಯಗಳನ್ನು ಮೆಚ್ಚಿಸುವ ಕೆಲಸ ಮಾಡಬೇಕಾದ ಬಿಗ್ ಟಾಸ್ಕ್ ಎದುರಾಗಿದೆ.
ವರದಿ: ಶಿವರಾಜ್ ಕುಮಾರ್, ಪೊಲಿಟಿಕಲ್ ಬ್ಯೂರೋ, ಟಿವಿ9 ಬೆಂಗಳೂರು
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಕನಸು ಕಾಣುತ್ತಿದೆ ಕಮಲ ಪಾಳಯ. ಅದರಲ್ಲೂ ಸಿಎಂ ಬೊಮ್ಮಾಯಿ ಅಳೆದು ತೂಗಿ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ಎದುರಾಗಿದೆ. ಯಾವುದೇ ಒಂದು ಸಮುದಾಯವನ್ನು ಓಲೈಸುವುದಕ್ಕೆ ಹೋದರು ಉಳಿದ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸದ್ಯ ಮುಂದಿನ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬೊಮ್ಮಾಯಿ, ಜನಸಂಕಲ್ಪ ಹೆಸರಿನಲ್ಲಿ ರಾಜ್ಯ ಸುತ್ತುತ್ತಿದ್ದಾರೆ. ಜನಸಂಕಲ್ಪ ಸಮಾವೇಶಗಳಲ್ಲಿ ವೀರಾವೇಶದ ಮಾತುಗಳನ್ನಾಡುವ ಮೂಲಕ ಮತಬೇಟೆ ಶುರುಮಾಡಿದ್ದಾರೆ. ಆದರೆ ಮತಬೇಟೆ ಅಷ್ಟು ಸುಲಭವಲ್ಲ ಅನ್ನುವುದು ಸಿ ಎಂ ಬೊಮ್ಮಾಯಿ ಅವರಿಗೆ ಚೆನ್ನಾಗಿ ತಿಳಿದಿದೆ.
ಎಸ್ಸಿ-ಎಸ್ಟಿ ಮೀಸಲಾತಿ ಘೋಷಣೆ ಬೆನ್ನಲ್ಲೇ ಸಂಕಷ್ಟ
ಬಸವರಾಜ ಬೊಮ್ಮಾಯಿ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಸಮಾಜದ ದೊಡ್ಡ ಗುಂಪುನ್ನು ಓಲೈಸಿದ ಖುಷಿಯಲ್ಲಿದ್ದಾರೆ. ಆ ಖುಷಿ ಕತ್ತಲಿನ ಕಾರ್ಮೋಡದಂತೆ ಕವಿಯುತ್ತಿದೆ. ಜನಸಂಕಲ್ಪ ಸಮಾವೇಶಗಳಲ್ಲಿ ದಶಕಗಳ ಕಾಲದ ಬೇಡಿಕೆಯನ್ನು ನಾನು ಹಾಗೂ ನಮ್ಮ ಮೋದಿ ಸರ್ಕಾರ ಈಡೇರಿಸಿದೆ ಎಂದು ಎದೆಉಬ್ಬಿಸಿ ಹೇಳಿಕೊಳ್ಳುತ್ತಿದ್ದಾರೆ. ಎಸ್ಟಿಗೆ ಶೇ 3ರಿಂದ 7 ಪರ್ಸೆಂಟ್, ಎಸ್ಸಿಗೆ 15ರಿಂದ 17 ಪರ್ಸೆಂಟ್ ಮೀಸಲಾತಿ ಹೆಚ್ಚಳ ಮಾಡಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆ ಸಮುದಾಯದ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಎಸ್.ಸಿ ಮತ್ತು ಎಸ್.ಟಿ ಮತವನ್ನು ಕಮಲಪಾಳಯ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಒಂದು ಹಂತದ ಫಲವೂ ಸಿಕ್ಕಂತಾಗಿದೆ. ಆದರೆ ಒಂದು ಸಮುದಾಯವನ್ನು ಮೆಚ್ಚಿಸುವುದಕ್ಕೆ ಹೋಗಿ, ಉಳಿದ ಸಮುದಾಯಗಳ ವಿರೋಧವನ್ನು ಕಟ್ಟಿಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅದರಲ್ಲೂ ರಾಜ್ಯ ಚುನಾವಣೆಯಲ್ಲಿ ಡಿಸೈಡ್ ಫ್ಯಾಕ್ಟರ್ಸ್ ಎನಿಸಿರುವ ಪ್ರಬಲ ಸಮುದಾಯಗಳಾದ ಒಕ್ಕಲಿಗ, ಪಂಚಮಸಾಲಿ ಲಿಂಗಾಯುತ ಹಾಗೂ ಕುರುಬರು ಸಿಎಂ ಬೊಮ್ಮಾಯಿ ವಿರುದ್ಧ ಗುಡುಗುವುದಕ್ಕೆ ಶುರುಮಾಡಿದ್ದಾರೆ.
2ಎ ಮೀಸಲಾತಿಗೆ ಮತ್ತೆ ಡೆಡ್ಲೈನ್ ನೀಡಿದ ಪಂಚಮಸಾಲಿ ಸಮುದಾಯ
ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಪಾತ್ರ ವಹಿಸಿರುವುದು ಪಂಚಮಸಾಲಿ ಸಮುದಾಯ. ಬೀದರ್ನಿಂದ ಬೆಂಗಳೂರಿನವರೆಗೂ ರಾಜ್ಯ ರಾಜಕೀಯದ ಚಿತ್ರಣವನ್ನು ಬದಲಿಸುವ ತಾಖತ್ತು ಈ ಸಮುದಾಯಕ್ಕಿದೆ. ಹೆಚ್ಚೂ ಕಡಿಮೆ ಸುಮಾರು 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಂಚಮಸಾಲಿಗಳು ಡಿಸೈಡ್ ಫ್ಯಾಕ್ಟರ್ಸ್ ಆಗಿದ್ದಾರೆ. ಆದರೆ ಇಂತಹ ಸಮುದಾಯವನ್ನು ತಲ್ಲಣಗೊಳಿಸುವ ಬಿಗ್ ಟಾಸ್ಕ್ ಬೊಮ್ಮಾಯಿ ಮುಂದಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಕು. ಈ ಸಮುದಾಯವನ್ನು 2ಎಗೆ ಸೇರಿಸಬೇಕೆಂದು ನಾನಾ ಹೋರಾಟಗಳನ್ನು ಮಾಡಲಾಗುತ್ತಿದೆ. ಹಲವು ಭಾರೀ ಸರ್ಕಾರಕ್ಕೆ ಡೆಡ್ ಲೈನ್ ಕೂಡ ನೀಡಿದೆ.
ಸಮುದಾಯದ ಪರವಾಗಿ ಜಯಮೃತ್ಯುಂಜಯ ಸ್ವಾಮೀಜಿ, ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ವಿಜಯನಾಂದ ಕಾಶಪ್ಪ್ನವರ್ ಸೇರಿದಂತೆ ಸಮುದಾಯದ ದೊಡ್ಡನಾಯಕರೇ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಹಲವು ಭಾರೀ ಸರ್ಕಾರದ ಭರವಸೆ ನುಡಿಗಳನ್ನು ನೆಚ್ಚಿಕೊಂಡು ಹತಾಷಾರಾಗಿದ್ದಾರೆ. ಹೀಗಾಗಿ ಸದ್ಯ ಮತ್ತೊಮ್ಮೆ ಬೊಮ್ಮಾಯಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಪಂಚಮಸಾಲಿ ಲಿಂಗಾಯುತ ಸಮುದಾಯ. ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಹಿಂದುಳಿದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಡಿಸೆಂಬರ್ 22 ರಂದು ಸುಮಾರು 10ಲಕ್ಷ ಜನರೊಂದಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
12 ಪರ್ಸೆಂಟ್ ಮೀಸಲಾತಿ ಹೆಚ್ಚಳಕ್ಕೆ ಪಟ್ಟು ಹಿಡಿದ ಒಕ್ಕಲಿಗರು
ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಮತ್ತೊಂದು ಬಹುದೊಡ್ಡ ಸಮುದಾಯ ಒಕ್ಕಲಿಗರು ಕೂಡ ಮೀಸಲಾತಿಯ ಪಟ್ಟುಹಿಡಿದಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕಾದರೇ ನಮಗೆ ಹೆಚ್ಚು ಪಾಲು ಮೀಸಲಾತಿ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಶೇಕಡಾ ನಾಲ್ಕರಿಂದ 12 ಪರ್ಸೆಂಟ್ ನಮ್ಮ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂದು ಸರ್ಕಾರದ ಮುಂದೆ ಸವಾಲೆಸಿದಿದ್ದಾರೆ. ಒಂದು ವೇಳೆ ನಮಗೂ ಮೀಸಲಾತಿ ಕೊಡದಿದ್ದರೇ ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟವನ್ನು ನಮ್ಮ ಸಮಾಜ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸುಮಾರು 90ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರೇ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಗೇರಲು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಂಚಮಸಾಲಿಗಳು ಎಷ್ಟು ಮುಖ್ಯವೋ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಅಷ್ಟೇ ಮುಖ್ಯ. ಹೀಗಾಗಿ ಒಕ್ಕಲಿಗರ ವಿರೋಧ ಕಟ್ಟಿಕೊಂಡರೇ ಬೊಮ್ಮಾಯಿಗೆ ಬಹುದೊಡ್ಡ ಕಂಟಕ ಮತ್ತೊಂದಿಲ್ಲ.
ಈಗಾಗಲೇ ಸಮುದಾಯದ ಮೀಸಲಾತಿಗಾಗಿ ನಿರ್ಮಲನಂದನಾಥ ಸ್ವಾಮೀಜಿ, ನಂಜಾವಧೂತಸ್ವಾಮೀಜಿ, ಹೆಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್, ತಮ್ಮ ಪಕ್ಷದವರೇ ಆದ ಡಿ.ವಿ ಸದಾನಂದಗೌಡ, ಡಾ.ಸಿಎನ್ ಅಶ್ವಥ್ ನಾರಯಣ್, ಆರ್.ಅಶೋಕ್, ಡಾ.ಕೆ ಸುಧಾಕರ್ರಂತಹ ನಾಯಕರು ಕೂಡ ಆಗ್ರಹಿಸುತ್ತಿದ್ದಾರೆ. ಸ್ವಾಮೀಜಿಗಳಂತೂ ಈಗಾಗಲೇ ಹೋರಾಟದ ಬ್ಲೂಪ್ರಿಂಟ್ ಸಿದ್ದಪಡಿಸುತ್ತಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಮುಂದೆ ಇದು ಕೂಡ ದೊಡ್ಡಮಟ್ಟದ ಸವಾಲಾಗಿದೆ.
ಮೀಸಲಾತಿಯಿಂದ ಒಂದು ಹೆಜ್ಜೆಯೂ ಹಿಂದೆ ಸರಿದಿಲ್ಲ ಕುರುಬ ಸಮುದಾಯ
ಪಂಚಮಸಾಲಿ, ಒಕ್ಕಲಿಗರಷ್ಟೇ ಗಟ್ಟಿಧ್ವನಿಯಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ ಕುರುಬ ಸಮುದಾಯ. ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ದೊಡ್ಡಮಟ್ಟದ ಸಮಾವೇಶಗಳನ್ನು ನಡೆಸಿ, ಬೊಮ್ಮಾಯಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತಿದೆ. ಕುರುಬ ಸಮುದಾಯ 2ಎ ಯಿಂದ ಎಸ್.ಟಿಗೆ ಕುರುಬ ಸಮುದಾಯವನ್ನ ಸೇರಿಸಬೇಕೆಂದು ಬಿಗಿಪಟ್ಟುಹಿಡಿದಿದ್ದಾರೆ. ಈ ಸಮಾಜದ ದೊಡ್ಡ ದೊಡ್ಡನಾಯಕರು ರಾಜ್ಯ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ರಾಜಗೊಂಡ, ಜೇನುಕುರುಬ, ಕಾಡು ಕುರುಬ, ಕುರುಮನ್ಸ್, ಕಟ್ಟುನಾಯಕನ್ ನಂತಹ ಉಪಜಾತಿಗಳು ಎಸ್.ಟಿ ವ್ಯಾಪ್ತಿಗೆ ಬಂದಿದ್ದರೂ ಸಹ ರಾಜ್ಯವ್ಯಾಪ್ತಿ ವಿಸ್ತಾರ ಮಾಡಿಲ್ಲ. ಹೀಗಾಗಿ ಇಡೀ ಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸಬೇಕೆಂದು ಪಟ್ಟುಹಿಡಿದು ನಿಂತಿದ್ದಾರೆ. ಸಮುದಾಯದ ನಾಯಕರು. ರಾಜ್ಯದಲ್ಲಿ ಲಿಂಗಾಯುತ, ಒಕ್ಕಲಿಗರ ನಂತರ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುರುಬರು ಸದ್ಯ ಮೀಸಲಾತಿ ಬೇಕು ಎಂದು ಬೊಮ್ಮಾಯಿ ಸರ್ಕಾರಕ್ಕೆ ಪಟ್ಟುಹಿಡಿದು ನಿಂತಿದ್ದಾರೆ. ಸಮುದಾಯದ ಪರವಾಗಿ ಆಡಳಿತ ಪಕ್ಷದವರಾದ ಕೆ.ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್ ರಂತಹ ನಾಯಕರು ತುಂಬಾ ಗಟ್ಟಿ ಧ್ವನಿ ಎತ್ತುತ್ತಿದ್ದಾರೆ.
ಆಪ್ತರ ಮುಂದೆ ಮೀಸಲಾತಿಯ ಸಂಕಷ್ಟ ತೋಡಿಕೊಂಡ ಸಿಎಂ ಬೊಮ್ಮಾಯಿ
ಮೀಸಲಾತಿಗಾಗಿ ಹೀಗೆ ಸಾಲು ಸಾಲಾಗಿ ದೊಡ್ಡದೊಡ್ಡ ಸಮುದಾಯಗಳೇ ಸಮರ ಸಾರಿ ನಿಂತಿವೆ. ಇದರ ನಡುವೆ ಉಪ್ಪಾರ, ಗಾಣಿಗ, ಗೊಲ್ಲ, ಬೇಡ, ಬಲಿಜಗ ಸಮುದಾಯಗಳ ಸಣ್ಣಧ್ವನಿಯ ಹೋರಾಟವೂ ಆಗಾಗ ಬೊಮ್ಮಾಯಿ ಕಣ್ಮುಂದೆ ಹಾದುಹೋಗುತ್ತಿದೆ. ಆದರೆ ಎಸ್.ಸಿ, ಎಸ್.ಟಿಗೆ ಮೀಸಲಾತಿ ಘೋಷಿಸಿದ ಬೆನ್ನಲ್ಲಿಯೇ ಪಂಚಮಸಾಲಿ, ಒಕ್ಕಲಿಗ ಹಾಗೂ ಕುರುಬ ಸಮುದಾಯಗಳು ಮೀಸಲಾತಿಗಾಗಿ ಬಿಗಿಪಟ್ಟುಹಿಡಿದು ನಿಂತಿವೆ. ಇದು ಸಿಎಂ ಬೊಮ್ಮಾಯಿಗೆ ಭಾರೀ ಸಂಕಷ್ಟವನ್ನುಂಟುಮಾಡಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಈ ಮೂರು ಸಮುದಾಯಗಳೇ ರಾಜ್ಯ ರಾಜಕೀಯದ ಭವಿಷ್ಯ ಬರೆಯುವುದು.ಇಂಥಹ ಸಮುದಾಯಗಳು ಒಮ್ಮೇಲೇ ಸರ್ಕಾರದ ಮೇಲೆ ಮುಗಿಬಿದ್ದಿರುವುದು ಸಿಎಂ ಪೇಚಿಗೆ ಸಿಲುಕುವಂತೆ ಮಾಡಿವೆ.
ಇದರಿಂದ ಪಾರಾಗುವುದು ಹೇಗೆ, ಈ ಸಮುದಾಯಗಳನ್ನು ಸಮಾಧಾನಪಡಿಸುವುದು ಹೇಗೆ. ಈ ಸಮುದಾಯಗಳಿಗೆ ಹೆಚ್ಚು ಅನುದಾನ ನೀಡಿ ಅಥವಾ ಮೀಸಲಾತಿ ನೀಡಲೇಬೇಕಾದ ಅನಿವಾರ್ಯತೆ ಎದುರಾದರೇ ಯಾವ ಮಾನದಂಡ ಅನುಸರಿಸಿದರೇ ಸಾಧ್ಯವಾಗುತ್ತದೆ. ಈಗಾಗಲೇ 50 ಪರ್ಸೆಂಟ್ ಮೀಸಲಾತಿ ಅನುಪಾತ ದಾಟಿ ಆಗಿದೆ. ಇದರ ನಡುವೆ ಈ ಸಮುದಾಯಗಳಿಗೆ ಯಾವ ಆಧಾರದಲ್ಲಿ ನೀಡಲು ಸಾದ್ಯ. ಎಲ್ಲರೂ ಹೀಗೆ ಒಟ್ಟಿಗೆ ಡಿಮ್ಯಾಂಡ್ ಮಾಡಿದರೇ ಹೇಗೆ ಎಂದು ಕೆಲ ಆಪ್ತ ಸಚಿವರ ಬಳಿ ಸಿಎಂ ಬೊಮ್ಮಾಯಿ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ದೇಶ ಅಭಿವೃದ್ಧಿ ಹೊಂದಬೇಕಾದರೆ ಹಿಂದೂ-ಮುಸ್ಲಿಂ ಅಂತ ತಾರತಮ್ಯ ಮಾಡಬಾರದು: ಮುಸ್ಲಿಂ ವ್ಯಾಪಾರಿಗಳು
ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಅಧಿಕಾರಿದ ಪಟ್ಟ ಅಲಂಕರಿಸಬೇಕಾದರೇ ಈ ಸಮುದಾಯಗಳ ಓಲೈಕೆ ಬಹಳ ಮುಖ್ಯ. ಅದು ಸಿಎಂ ಬಸವರಾಜ ಬೊಮ್ಮಾಯಿಗೂ ಚೆನ್ನಾಗಿಯೇ ತಿಳಿದಿದೆ. ಹೀಗಾಗಿಯೇ ಮೀಸಲಾತಿ ಎಂಬ ಮಹಾಯುದ್ಧವನ್ನು ತುಂಬಾ ಚಾಣಾಕ್ಷತನದಿಂದ ಎದುರಿಸಿ, ಸಮುದಾಯಗಳ ಮನಗೆದ್ದು ಗೆಲುವಿನ ಝೇಂಕಾರ ಮೊಳಗಿಸುವ ಸವಾಲು ಮುಖ್ಯಮಂತ್ರಿ ಬಸವರಾಜ ಸೋಮಪ್ಪ ಬೊಮ್ಮಾಯಿ ಮುಂದೆ ಇರುವುದಂತು ಸುಳ್ಳಲ್ಲ.
ವರದಿ: ಶಿವರಾಜ್ ಕುಮಾರ್, ಪೊಲಿಟಿಕಲ್ ಬ್ಯೂರೋ, ಟಿವಿ9 ಬೆಂಗಳೂರು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ