Vijayapura City Election Result: ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗುಮ್ಮಟ ನಗರಿ ಮುಕುಟ ಯಾರಿಗೆ?
Vijayapura city Assembly Election Result 2023 Live Counting Updates: ಗುಮ್ಮಟ ನಗರಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್ನಿಂದ ಅಬ್ದುಲ್ ಹಮೀದ್ ಮುಶ್ರಿಫ್ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Vijayapura City Assembly Election Result 2023: ವಿಜಯಪುರ (ಹಿಂದಿನ ಬಿಜಾಪುರ) ನಗರ ಸೂಫಿಸಂತರ ನೆಲೆಬೀಡು. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿಂದ ಖ್ಯಾತಿ ಪಡೆದ ನಗರ. ಐತಿಹಾಸಿಕವಾಗಿ ನೋಡುವುದಾದರೆ ವಿಜಯಪುರವನ್ನು ಆದಿಲ್‌ಶಾಹಿ, ಕಲ್ಯಾಣಿ ಚಾಲುಕ್ಯರು, ಬಹಮನಿ ಸುಲ್ತಾನರು, ಮೊಘಲರು, ಮರಾಠರು ಸೇರಿದಂತೆ ಹಲವರು ಆಳ್ವಿಕೆ ನಡೆಸಿದ್ದಾರೆ.
ಜಾತ್ಯತೀತ ಧಾರ್ಮಿಕ ಪರಂಪರೆ ಹೊಂದಿರುವ ವಿಜಯಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸ ವೈಶಿಷ್ಟಪೂರ್ಣವಾಗಿದೆ. ವಿಜಯಪುರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಎನ್ಪಿ ಮತ್ತು ಪಕ್ಷೇತರರಿಗೂ ಮತದಾರ ಮಣೆ ಹಾಕಿದ್ದಾರೆ. ಅಷ್ಟೇ ಅಲ್ಲ ಹಿಂದೂ, ಮುಸ್ಲಿಮರಿಗೂ ಪ್ರಾತಿನಿಧ್ಯ ನೀಡಿರುವುದು ವಿಶೇಷ. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವುದು ಕ್ಷೇತ್ರದ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇದುವರೆಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬೇರಾವು ಪಕ್ಷವೂ ಮುಸ್ಲಿಮರಿಗೆ ಅವಕಾಶ ಕಲ್ಪಿಸಿಲ್ಲ. ಇನ್ನು ವಿಜಯಪುರ ನಗರ ಕ್ಷೇತ್ರಕ್ಕೆ ಇದುವರೆಗಿನನ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. ಆದ್ರೆ, ಯಾರು ಗೆದ್ದಿಲ್ಲ.
ವಿಜಯಪುರದಲ್ಲಿ 1951ರಿಂದ 2018ರವರೆಗೆ ಒಟ್ಟು 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಮುಸ್ಲಿಂ ಹಾಗೂ ಲಿಂಗಾಯತ ಸಮುದಾಯದ ಮತದಾರರೇ ಇಲ್ಲಿ ನಿರ್ಣಾಯಕ. 1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಗುಮ್ಮಟನಗರಿಯ ಜನರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಬದಲು ಪಕ್ಷೇತರ ಅಭ್ಯರ್ಥಿ ಸರ್ದಾರ್ ಬಸವರಾಜ ನಾಗೂರ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಇದುವರೆಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ 7 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 5 ಮತ್ತು ಜೆಎನ್ಪಿ ಒಂದು ಬಾರಿ ಗೆದ್ದಿದೆ. ಹಾಗೇ ಪಕ್ಷೇತರರು ಸಹ ಒಂದು ಬಾರಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಿಂದ ರೇವಣಸಿದ್ಧಪ್ಪ ನಾವದಗಿ ಕಾಂಗ್ರೆಸ್ನ ಪ್ರಥಮ ಶಾಸಕರಾಗಿದ್ದರೆ, ಚಂದ್ರಶೇಖರ್ ಗಚ್ಚಿನಮಠ ಬಿಜೆಪಿಯ ಫಸ್ಟ್ ಎಂಎಲ್ಎ.
ಎಂಎಲ್ ಉಸ್ತಾದ ಮೂರು ಬಾರಿ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ತಲಾ ಎರಡು ಬಾರಿ ಈ ಕ್ಷೇತ್ರದಿಂದ ಪ್ರತಿನಿಧಿಸಿದ್ದಾರೆ. 1994ರಲ್ಲಿ ಈ ಕ್ಷೇತ್ರದ ಶಾಸಕರಾಗುವ ಮೂಲಕ ರಾಜಕೀಯ ಭವಿಷ್ಯ ಕಲ್ಪಿಸಿಕೊಂಡಿರುವ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 1999ರ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಲೋಕಸಭೆ ಸ್ಪರ್ಧಿಸಿದ್ದರು. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದರಾದರೂ ಗೆದ್ದಿರಲಿಲ್ಲ.
ಕಳೆದ ಮೂರು ಚುನಾವಣೆಗಳ ಚಿತ್ರಣ
2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ವಿಜಯಪುರ ನಗರ ಕ್ಷೇತ್ರವಾದ ನಂತರ ಕ್ಷೇತ್ರದಲ್ಲಿ ಗೆಲುವು ಕಂಡಿದ್ದು ಬಿಜೆಪಿಯ ಅಪ್ಪಾ ಸಾಹೇಬ್ ಪಟ್ಟಣಶೆಟ್ಟಿ . 2013ರಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮಕಬೂಲ ಎಸ್ ಭಗವಾನ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 9380 ಮತಗಳಿಂದ ಸೋಲಿಸಿದ್ದರು. ಇನ್ನು ಕಳೆದ 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಮುಶ್ರಿಫ್ ಅವರ ವಿರುದ್ಧ ಕೇವಲ 6,413 ಮತಗಳಿಂದ ಗೆದ್ದಿದ್ದರು.
ಈ ಬಾರಿ ಕಾಂಗ್ರೆಸ್-ಬಿಜೆಪಿ ನಡುವೆ ಪೈಪೋಟಿ
ಇದೀಗ ಈ ಬಾರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ನಿಂದ ಮತ್ತೆ ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್ ಸ್ಪರ್ಧೆ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಧರ್ಮಾಧಾರಿತ ರಾಜಕಾರಣದ ಅಖಾಡವಾಗುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಕೀಯದ ಗಮನ ಸೆಳೆದಿದೆ. ಈ ಹಿಂದೆ ಕಾಂಗ್ರೆಸ್ ಹಿಡಿತದಲ್ಲಿತ್ತು. ಈಗ ಬಿಜೆಪಿ ತೆಕ್ಕೆಯಲ್ಲಿದೆ. ಮುಸ್ಲಿಂ ಸಮುದಾಯದ ಮತಗಳೇ ಹೆಚ್ಚಿರುವ ಕಾರಣ ಇಲ್ಲಿ ಧರ್ಮ ಆಧರಿತ ರಾಜಕಾರಣ ನಡೆಯುತ್ತಿದೆ. ಅದಕ್ಕಾಗಿಯೇ ಕಳೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಈ ಬಾರಿಯೂ ಸಹ ಅದೇ ಸಂಪ್ರದಾಯ ಮುಂದುವರೆದಿದೆ. ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ.