Actor Darshan ಚಾಲೆಂಜಿಂಗ್​ ಸ್ಟಾರ್​ ದರ್ಶನ್​ರಿಗೆ ಇಂದು ವಿಶೇಷ ದಿನ; 19 ವರ್ಷದ ಹಿಂದೆ ಈ ದಿನ ಮೊದಲ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದರು!​

dboss darshan ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟ ದರ್ಶನ್​ ಹೀರೋ ಆಗಿ 19 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಹಾಗೇ, ಮುಂದಿನ ರಾಬರ್ಟ್​ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

Actor Darshan ಚಾಲೆಂಜಿಂಗ್​ ಸ್ಟಾರ್​ ದರ್ಶನ್​ರಿಗೆ ಇಂದು ವಿಶೇಷ ದಿನ; 19 ವರ್ಷದ ಹಿಂದೆ ಈ ದಿನ ಮೊದಲ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದರು!​
ನಟ ದರ್ಶನ್​
Follow us
Lakshmi Hegde
|

Updated on:Feb 08, 2021 | 6:06 PM

ಸ್ಯಾಂಡಲ್​ವುಡ್​ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳಿಂದ ಡಿ ಬಾಸ್​ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಇಂದು ವಿಶೇಷ ದಿನ. ಅದಕ್ಕೊಂದು ಪ್ರಮುಖ ಕಾರಣವೂ ಇದೆ. ದರ್ಶನ್​ ಚಿತ್ರರಂಗಕ್ಕೆ ಬಂದು ಈಗಾಗಲೇ 24 ವರ್ಷವಾಯಿತು. ಆದರೆ ದೊಡ್ಡ ನಟನ ಪುತ್ರನಾಗಿದ್ದರೂ ಬರುತ್ತಲೇ ಹೀರೋ ಆಗಿ ಬಂದವರಲ್ಲ ಅವರು, ಬದಲಿಗೆ ಲೈಟ್​ ಬಾಯ್​ ಆಗಿ ಚಿತ್ರರಂಗ ಸೇರಿದವರು. ಆದರೆ ಇಂದಿನ ವಿಶೇಷ ಬೇರೆಯದ್ದೇ ಇದೆ..

ದರ್ಶನ್​ (challenging star darshan) ಹೀರೋ ಆಗಿ ಇಂದಿಗೆ 19 ವರ್ಷ. ಅಂದರೆ ದರ್ಶನ್​ ನಾಯಕರಾಗಿ ನಟಿಸಿದ ಮೆಜೆಸ್ಟಿಕ್ ಸಿನಿಮಾ ಬಿಡುಡೆಯಾಗಿ ಇಂದಿಗೆ ಸರಿಯಾಗಿ 19 ವರ್ಷ ಕಳೆದಿದೆ. ದರ್ಶನ್​ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ ಮೆಜೆಸ್ಟಿಕ್​ 2002ರ ಫೆಬ್ರವರಿ 8ರಂದು ಬಿಡುಗಡೆಯಾಗಿತ್ತು. ನೋಡೋಕೆ ಚಾಕೊಲೇಟ್ ಹೀರೋ ಥರ ಇದ್ದರೂ ಮೊದಲ ಸಿನಿಮಾದಲ್ಲೇ ಗ್ಯಾಂಗ್​ಸ್ಟರ್​ ಆಗಿ ಅಭಿನಯಿಸಿದ್ದರು. ಈ ಫಿಲ್ಮ್​ನಲ್ಲಿ ದರ್ಶನ್​ಗೆ ಜತೆ ನಟಿ ರೇಖಾ ನಟಿಸಿದ್ದರು. ಅಂದ ಹಾಗೆ ಮೆಜೆಸ್ಟಿಕ್​ ಸಿನಿಮಾ ನಿರ್ದೇಶಿಸಿದ್ದು, ಪಿ.ಎನ್​.ಸತ್ಯ. ನಿರ್ಮಾಪಕರು ಎಂ.ಜಿ.ರಾಮಮೂರ್ತಿ ಮತ್ತು ಬಾ.ಮಾ.ಹರೀಶ್​.

ಮಾಡೆಲಿಂಗ್​ ಕೂಡ ಮಾಡಿದ್ದರು ಕನ್ನಡ ಚಿತ್ರರಂಗದಲ್ಲಿ ಖಳನಾಯಕರಾಗಿ ಖ್ಯಾತಿ ಪಡೆದಿದ್ದ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾದರೂ ದರ್ಶನ್​ಗೆ ಚಿತ್ರರಂಗದಲ್ಲಿ ಹಾದಿ ಸುಗಮವಾಗಿರಲಿಲ್ಲ. ಅವರೊಬ್ಬ ಲೈಟ್​ಬಾಯ್​ ಆಗಿ ಕೆಲಸ ಮಾಡಿದ್ದರು. 2002ರಲ್ಲಿ ಮೆಜೆಸ್ಟಿಕ್​ ಸಿನಿಮಾ ಬರುವ ಮೊದಲೂ ದರ್ಶನ್​ ಐದಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹೀಗೆ ಹಂತಹಂತವಾಗಿ ಬೆಳೆದ ದರ್ಶನ್ ಇಂದು ಚಿತ್ರರಂಗವನ್ನು ಆಳುತ್ತಿದ್ದಾರೆ.

ಮೆಜೆಸ್ಟಿಕ್​ ನಂತರ ದರ್ಶನ್​ ಮತ್ತೆ ತಿರುಗಿ ನೋಡಲಿಲ್ಲ. ಮೊದಲ ಸಿನಿಮಾದಲ್ಲಿ ಮಾಸ್​ ಹೀರೋ ಎನ್ನಿಸಿಕೊಂಡ ಅವರು ಅದೇ ತರಹದ ಸಿನಿಮಾಗಳನ್ನು ಕೊಡುತ್ತ ಬಂದರು. ಹಾಗೇ ‘ಲಾಲಿ ಹಾಡು’ ಸಿನಿಮಾದಲ್ಲಿ ತುಸು ವಿಭಿನ್ನವಾಗಿ, ಒಬ್ಬ ಗಾಯಕನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. 2012ರಲ್ಲಿ ಸಂಗೊಳ್ಳಿ ರಾಯಣ್ಣ ತೆರೆಕಂಡಾಗ, ಸಂಗೊಳ್ಳಿ ರಾಯಣ್ಣನ ಪಾತ್ರ ದರ್ಶನ್​​ಗೆ ಪರ್​ಫೆಕ್ಟ್​ ಎಂದೇ ಅಭಿಮಾನಿಗಳು ಹೇಳಿದರು. ಹಾಗೇ 2019ರಲ್ಲಿ ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನ ಪಾತ್ರದಲ್ಲಿ ಮಿಂಚಿ, ಸಿನಿಪ್ರಿಯರ ಬಳಿ ಶಹಭಾಸ್​ ಎನ್ನಿಸಿಕೊಂಡರು.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಇಷ್ಟೆಲ್ಲ ಸಾಧನೆ ಮಾಡಿದ ದಾರಿಯಲ್ಲಿ ಹೆಜ್ಜೆಹೆಜ್ಜೆಗೂ ಚಾಲೆಂಜ್​ಗಳು ಎದುರಾಗಿದ್ದವು. ಇನ್ನೂ ಒಂದು ಇಂಟರೆಸ್ಟಿಂಗ್​ ವಿಚಾರವೆಂದರೆ ಮೈಸೂರಲ್ಲಿ ಮಾಡೆಲಿಂಗ್ ಕೂಡ ಮಾಡಿದ್ದರು. ಇದನ್ನವರು ವೀಕೆಂಡ್ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ನನಗೆ ಮಾಡೆಲಿಂಗ್​ ಬಗ್ಗೆ ಜಾಸ್ತಿ ಏನೂ ಗೊತ್ತಿರಲಿಲ್ಲ. ಎತ್ತರಕ್ಕೆ ಇದ್ದೆ ಬಿಟ್ಟರೆ ಬೇರೆ ಯಾವುದೇ ಕ್ವಾಲಿಫಿಕೇಶನ್​ ಇರಲಿಲ್ಲ. ದಿನಕ್ಕೆ ಒಂದು ಸಾವಿರ ರೂ. ಕೊಡುತ್ತಿದ್ದರು. ನನಗೆ ಅದೇ ದೊಡ್ಡ ಮೊತ್ತವಾಗಿತ್ತು ಎಂದು ತಿಳಿಸಿದ್ದರು.

ನೆರವಿಗೆ ನಿಲ್ಲುವ ದರ್ಶನ್ ದರ್ಶನ್ ಅವರಲ್ಲಿ ಒಂದು ವಿಶೇಷ ಸ್ವಭಾವ ಇದೆ. ಇವರು ತಾವು ಮಾತ್ರ ಬೆಳೆಯುತ್ತಿಲ್ಲ. ಅದೆಷ್ಟೋ ಸಣ್ಣ ಕಲಾವಿದರು, ತಂತ್ರಜ್ಞರನ್ನು ಬೆಳೆಸುತ್ತಿದ್ದಾರೆ. ಚಿತ್ರರಂಗದಲ್ಲಿ ಹೊಸದಾಗಿ ಬರುವವರ ಬೆನ್ನಿಗೆ ಹಿರಿಯಣ್ಣನಂತೆ ನಿಲ್ಲುತ್ತಾರೆ. ಯಾರದ್ದೇ ಸಿನಿಮಾಗಳು ಸೋತು, ನಷ್ಟವಾದರೂ ನೆರವಿಗೆ ಧಾವಿಸುತ್ತಾರೆ. ಯಾವುದೇ ಸಾವು-ನೋವಾದಾಗ ಮುಂದೆ ನಿಂತು ಕೆಲಸ ಮಾಡುತ್ತಾರೆ. ಸಾಂತ್ವನಕ್ಕೆ ನಿಲ್ಲುತ್ತಾರೆ. ಇನ್ನು ವನ್ಯಜೀವಿ, ಫೋಟೋಗ್ರಫಿಗಳೆಲ್ಲ ಡಿ ಬಾಸ್​ಗೆ ತುಂಬಾ ಖುಷಿ ಕೊಡುವ ಕ್ಷೇತ್ರಗಳು.

ಮೆಜೆಸ್ಟಿಕ್​​ನಿಂದ ರಾಬರ್ಟ್​ವರೆಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಮೊದಲ ಸಿನಿಮಾ ಮೆಜೆಸ್ಟಿಕ್​ನಲ್ಲಿ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ರೌಡಿ ಪಾತ್ರದ ಹೆಸರು ದಾಸ. ಇನ್ನೊಂದು ಮೃದು ಸ್ವಭಾವದ, ಲವರ್​ ಬಾಯ್​ ಪಾತ್ರವಾಗಿತ್ತು. ಇದರಲ್ಲಿ ದಾಸ ಪಾತ್ರ ದರ್ಶನ್​ಗೆ ತುಂಬ ಖ್ಯಾತಿ ತಂದುಕೊಟ್ಟಿತ್ತು. ಹಾಗಾಗಿ 2003ರಲ್ಲಿ ದಾಸ ಎಂಬ ಹೆಸರಿನ ಸಿನಿಮಾವನ್ನೇ ಮಾಡಿದರು. ಹೀಗೆ, ಅಯ್ಯ, ದರ್ಶನ್​, ಚಿಂಗಾರಿ, ಸಾರಥಿ, ಗಜ, ಮಿ.ಐರಾವತ, ಜಗ್ಗುದಾದ, ಒಡೆಯ, ಯಜಮಾನ, ತಾರಕ್​ ಸಿನಿಮಾಗಳ ಪಟ್ಟಿ ಮುಂದುವರಿಯುತ್ತದೆ. ಇನ್ನು ರಾಬರ್ಟ್​ ಸಿನಿಮಾ ತೆರೆಕಾಣಲು ಸಜ್ಜಾಗಿದೆ. 2020ರ ಏಪ್ರಿಲ್​ನಲ್ಲೇ ಬಿಡುಗಡೆಯಾಗಬೇಕಿದ್ದ ಸಿನಿಮಾಕ್ಕೆ ಕೊರೊನಾ ಕಾರಣದಿಂದ ಹಿನ್ನಡೆಯಾಗಿತ್ತು. ಶೂಟಿಂಗ್​ ಕೂಡ ಪೂರ್ತಿ ಮುಗಿದಿರಲಿಲ್ಲ. ಆದರೆ ಇದೀಗ ಸಿನಿಮಾ ಸಂಬಂಧ ಕೆಲಸಗಳೆಲ್ಲ ಮುಗಿದಿದ್ದು, ಮಾರ್ಚ್​ 11ಕ್ಕೆ ಬಿಡುಗಡೆಯಾಗಲಿದೆ. ಇದನ್ನು ಇತ್ತೀಚೆಗಷ್ಟೇ ದರ್ಶನ್​ ಫೇಸ್​ಬುಕ್​ ಲೈವ್​ನಲ್ಲಿ ತಿಳಿಸಿದ್ದಾರೆ.

ಅಭಿಮಾನಿಗಳಲ್ಲಿ ನಿರೀಕ್ಷೆ ದರ್ಶನ್​ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟ ದರ್ಶನ್​ ಹೀರೋ ಆಗಿ 19 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಹಾಗೇ, ಮುಂದಿನ ರಾಬರ್ಟ್​ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನಿರೀಕ್ಷೆಯೂ ಹೆಚ್ಚಾಗಿದೆ.

Mejestic Film poster

ಮೆಜೆಸ್ಟಿಕ್​ ಸಿನಿಮಾದ ಪೋಸ್ಟರ್​

ಶ್ಯಾಡೋ ಹಾಗೂ ಇನ್ಸ್​ಪೆಕ್ಟರ್ ವಿಕ್ರಮ್ ಸಿನಿಮಾ ಯಶಸ್ಸು ಕಾಣಲಿ; ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Published On - 5:53 pm, Mon, 8 February 21