‘ಕಲ್ಕಿ 2898 ಎಡಿ’ ಚಿತ್ರದಿಂದ ಪ್ರಭಾಸ್ ಮುಂದಿನ ಚಿತ್ರಗಳಿಗೆ ಶುರುವಾಗಿದೆ ಆತಂಕ
‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಪ್ರಭಾಸ್ ಖ್ಯಾತಿ ಮತ್ತೆ ಹಿರಿದಾಗಿದೆ. ‘ಬಾಹುಬಲಿ 2’ ಬಳಿಕ ಅವರಿಗೆ ಇಷ್ಟು ದೊಡ್ಡ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಈ ಚಿತ್ರದ ಯಶಸ್ಸು ಅವರ ಮುಂದಿನ ಸಿನಿಮಾಗಳ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವೀಕೆಂಡ್ನಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಇದರ ಜೊತೆಗೆ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ಒತ್ತಡ ಬಿದ್ದಂತೆ ಆಗಲಿದೆ. ಇದರಿಂದ ಸಿನಿಮಾ ತಂಡದವರು ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಬಹುವಾಗಿ ಕಾಡುತ್ತಿದೆ.
‘ಬಾಹುಬಲಿ 2’ ಸಿನಿಮಾ ರಿಲೀಸ್ ಆದ ಬಳಿಕ ಪ್ರಭಾಸ್ ಸಿನಿಮಾಗಳ ಮೇಲೆ ಬಹುವಾಗಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಈ ಕಾರಣದಿಂದಲೇ ‘ಸಾಹೋ’, ‘ರಾಧೆ ಶ್ಯಾಮ್’ ಸಿನಿಮಾಗಳು ಹೀನಾಯವಾಗಿ ಸೋತವು. ‘ರಾಧೆ ಶ್ಯಾಮ್’ ಪ್ರಭಾಸ್ ವೃತ್ತಿ ಜೀವನದಲ್ಲಿ ಹೊಸ ಪ್ರಯೋಗ ಆಗಿತ್ತು. ಆದರೆ, ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದ ಅವರನ್ನು ಹೊಸ ಅವತಾರದಲ್ಲಿ ಜನರು ಒಪ್ಪಿಕೊಳ್ಳಲೇ ಇಲ್ಲ. ಇನ್ನು ‘ಆದಿಪುರುಷ್’ ಚಿತ್ರವಂತೂ ದುರಂತ ಅಂತ್ಯ ಕಂಡಿತು.
ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆದ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹೀಗಾಗಿ, ‘ಕಲ್ಕಿ 2898 ಎಡಿ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿದೆ. ಇದು ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ.
‘ರಾಜಾಸಾಬ್’ ಚಿತ್ರದಲ್ಲಿ ಪ್ರಭಾಸ್ ಬೇರೆ ರೀತಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಹಾರರ್ ಹಾಗೂ ಕಾಮಿಡಿ ಅಂಶ ಇದೆ. ಈ ಚಿತ್ರದ ನಿರ್ದೇಶಕ ಮಾರುತಿ ಕೂಡ ಈ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದ ಗೆಲುವು ‘ರಾಜಾಸಾಬ್’ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಎನ್ನುವ ಪ್ರಶ್ನೆ ಮೂಡಿದೆ.
ಪ್ರಭಾಸ್ ಅವರು ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಇಂಥ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾರರ್, ಕಾಮಿಡಿ ಶೈಲಿಯ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ, ಹೊಸ ಪ್ರಯೋಗ ಮಾಡಿದ ‘ರಾಜಾಸಾಬ್’ ಚಿತ್ರದ ಮೇಲೆ ಒತ್ತಡ ಹೆಚ್ಚಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಬಂಗಾರದ ಬೆಳೆ ತೆಗೆದ ‘ಕಲ್ಕಿ’; ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ಪ್ರಭಾಸ್ ಸಿನಿಮಾ
ವಿಂಟೇಜ್ ಪ್ರಭಾಸ್ ಅವರನ್ನು ನೋಡೋದು ಎಂದರೆ ಫ್ಯಾನ್ಸ್ಗೆ ಸಖತ್ ಇಷ್ಟ. ‘ರಾಜಾಸಾಬ್’ನಲ್ಲಿ ಪ್ರಭಾಸ್ ಇದೇ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಭಿನ್ನವಾಗಿ ಮೂಡಿ ಬರಲಿದೆ ಎಂದು ನಿರ್ದೇಶಕ ಮಾರುತಿ ಅವರು ಪ್ರಾಮಿಸ್ ಮಾಡಿದ್ದಾರೆ.
ಕಲ್ಕಿ ಗಳಿಕೆ
‘ಕಲ್ಕಿ 2898 ಎಡಿ’ ಚಿತ್ರ ಗುರುವಾರ (ಜುಲೈ 4) 22 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಗಳಿಕೆ 414 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಸಿನಿಮಾ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.