‘ಪುಷ್ಪ 2’ ಎದುರು ಬರಲ್ಲ ‘ಸಿಂಗಂ ಅಗೇನ್’; ರಿಲೀಸ್ ಮುಂದೂಡಿಕೊಂಡ ರೋಹಿತ್ ಶೆಟ್ಟಿ?
ಕೆಲವೇ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಆ ಬಳಿಕ ‘ಸಿಂಗಂ ಅಗೇನ್’ ಚಿತ್ರತಂಡದ ನಿರ್ಧಾರದಲ್ಲಿ ಬದಲಾವಣೆ ಆದಂತಿದೆ. ವರದಿಗಳ ಪ್ರಕಾರ, ನಿರ್ದೇಶಕ ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವುದಷ್ಟೇ ಬಾಕಿ.
ಎರಡು ಹೈ ಬಜೆಟ್ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೆ ಎರಡೂ ಚಿತ್ರತಂಡಕ್ಕೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗುವುದಿಲ್ಲ. ಹಾಗಾಗಿ ಈ ಕ್ಲ್ಯಾಶ್ ತಪ್ಪಿಸಲು ಪ್ರಯತ್ನಿಸಲಾಗುತ್ತದೆ. ಈಗ ‘ಪುಷ್ಪ 2’ (Pushpa 2) ಮತ್ತು ‘ಸಿಂಗಂ ಅಗೇನ್’ ಚಿತ್ರಗಳ ವಿಚಾರದಲ್ಲಿ ಹಾಗೆಯೇ ಆಗಿದೆ. ಆಗಸ್ಟ್ 15ರಂದು ಈ ಸಿನಿಮಾಗಳು ಬಿಡುಗಡೆ ಆಗಲಿವೆ ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ, ‘ಸಿಂಗಂ ಅಗೇನ್’ (Singham Again) ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ.
ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಉತ್ತರ ಭಾರತದಲ್ಲೂ ನಿರೀಕ್ಷೆ ಹೆಚ್ಚಾಗಿದೆ. ‘ಪುಷ್ಪ 2’ ಎದುರು ಬರಲು ಬೇರೆ ಯಾವುದೇ ಸಿನಿಮಾ ತಂಡ ಕೂಡ ಧೈರ್ಯ ತೋರಿಸುವುದು ಕಷ್ಟ. ‘ಸಿಂಗಂ ಅಗೇನ್’ ಸಿನಿಮಾ ತಂಡದವರು ರಿಲೀಸ್ ಡೇಟ್ ಮುಂದಕ್ಕೆ ಹಾಕಿರುವ ಸಾಧ್ಯತೆ ದಟ್ಟವಾಗಿದೆ.
ಅಜಯ್ ದೇವಗನ್ ಅವರು ‘ಸಿಂಗಂ ಅಗೇನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಅನೇಕ ಕಲಾವಿದರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಆಗಸ್ಟ್ 15ರ ಬದಲು ಈ ವರ್ಷ ದೀಪಾವಳಿ ಹಬ್ಬಕ್ಕೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಇದನ್ನೂ ಓದಿ: ಒಂದೇ ದೃಶ್ಯಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಿದ ‘ಪುಷ್ಪ 2’ ಸಿನಿಮಾ ತಂಡ
ಒಂದು ಮೂಲದ ಪ್ರಕಾರ ‘ಸಿಂಗಂ ಅಗೇನ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಲು ‘ಪುಷ್ಪ 2’ ತಂಡದ ಪೈಪೋಟಿ ಕಾರಣ ಅಲ್ಲ. ಅಂದುಕೊಂಡ ವೇಗದಲ್ಲಿ ಈ ಸಿನಿಮಾದ ಕೆಲಸಗಳು ಮುಗಿಯುತ್ತಿಲ್ಲ. ಗುಣಮಟ್ಟದಲ್ಲಿ ರಾಜಿಯಾಗಲು ರೋಹಿತ್ ಶೆಟ್ಟಿ ಸಿದ್ಧರಿಲ್ಲ. ಹಾಗಾಗಿ ಇನ್ನಷ್ಟು ಸಮಯ ತೆಗೆದುಕೊಂಡು ಉತ್ತಮ ಗುಣಮಟ್ಟದ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಉದ್ದೇಶದಿಂದ ರಿಲೀಸ್ ಡೇಟ್ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.