ಶೂಟಿಂಗ್ ವೇಳೆ ನಟ ಅಜಿತ್ ಕಾರು ಅಪಘಾತ; ಭಯಾನಕ ವಿಡಿಯೋ ವೈರಲ್
ನಟ ಅಜಿತ್ ಕುಮಾರ್ ಅವರ ಕಾರು ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ಅಪಘಾತಕ್ಕೀಡಾಯಿತು ಎಂಬುದನ್ನು ವಿವರಿಸುವಂತಹ ವಿಡಿಯೋ ವೈರಲ್ ಆಗಿದೆ. ಇದನ್ನು ಅವರ ಮ್ಯಾನೇಜರ್ ಸುರೇಶ್ ಚಂದ್ರ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಜಿತ್ ಕುಮಾರ್ ಅವರ ಉತ್ಸಾಹ ಮತ್ತು ಸಾಹಸ ಗುಣವನ್ನು ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರು ಡ್ಯೂಪ್ ಬಳಸದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೇಸಿಂಗ್ ಮತ್ತು ಸಾಹಸ ದೃಶ್ಯಗಳಲ್ಲಿ ತಮ್ಮದೇ ಆದ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಈ ಮೊದಲು ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಅನೇಕ ಬಾರಿ ಗಾಯಗಳನ್ನು ಮಾಡಿಕೊಂಡಿದ್ದರು. ಹಾಗಂತ ಅದರಿಂದ ಅವರ ಉತ್ಸಾಹ ಕಡಿಮೆ ಆಗಿಲ್ಲ. ಕಳೆದ ವರ್ಷ ಅವರು ‘ವಿದಾಮುಯಾರ್ಚಿ’ ಸಿನಿಮಾದ ಚಿತ್ರೀಕರಣದ ವೇಳೆ ಕಾರು ಅಪಘಾತ (Ajith Kumar Car Accident) ಮಾಡಿಕೊಂಡಿದ್ದು ಸುದ್ದಿ ಆಗಿತ್ತು. ಈಗ ಆ ಅಪಘಾತದ ವಿಡಿಯೋ ಲಭ್ಯವಾಗಿದೆ.
ಅಜಿತ್ ಕುಮಾರ್ ಅವರು ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ಅಪಘಾತಕ್ಕೀಡಾದರು ಎಂಬುದನ್ನು ವಿವರಿಸುವಂತಹ ವಿಡಿಯೋವನ್ನು ಇಂದು ಅವರ ಮ್ಯಾನೇಜರ್ ಸುರೇಶ್ ಚಂದ್ರ ಬಹಿರಂಗಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಜಿತ್ ಕುಮಾರ್ ಅವರ ಉತ್ಸಾಹ ಮತ್ತು ಸಾಹಸ ಗುಣವನ್ನು ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.
Vidaamuyarchi filming November 2023.#VidaaMuyarchi pic.twitter.com/M210ikLI5e
— Suresh Chandra (@SureshChandraa) April 4, 2024
ನಟರಾದ ಅಜಿತ್ ಕುಮಾರ್ ಮತ್ತು ಆರವ್ ಅವರು ಕಾರ್ ಚೇಸ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಅಜಿತ್ ಕುಮಾರ್ ಅವರು ಓಡಿಸುತ್ತಿದ್ದ ಕಾರು ಸ್ಕಿಡ್ ಆಯಿತು. ಭಾರಿ ದುರಂತ ಆಗುವುದನ್ನು ಅಜಿತ್ ಅವರು ಸಾಧ್ಯವಾದಷ್ಟು ತಪ್ಪಿಸಿದರು. ಈ ಅಪಘಾತದಿಂದ ಇಬ್ಬರು ನಟರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಅಜಿತ್ ಕುಮಾರ್ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಟೈಟಲ್; ‘ಪುಷ್ಪ’ ನಿರ್ಮಾಪಕನಿಂದ ಬಂಡವಾಳ
‘ವಿದಾಮುಯಾರ್ಚಿ’ ಸಿನಿಮಾದ ತಾರಾಗಣದಲ್ಲಿ ಅಜಿತ್ ಕುಮಾರ್ ಜೊತೆ ತ್ರಿಷಾ, ಅರ್ಜುನ್, ಆರವ್, ರೆಜಿನಾ ಕಸ್ಸಂದ್ರ ಮತ್ತು ಅನೇಕರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣವನ್ನು 2023ರ ಅಕ್ಟೋಬರ್ನಿಂದ ಅಜೆರ್ಬೈಜಾನ್‌ನಲ್ಲಿ ನಡೆಸುತ್ತಿದ್ದಾರೆ. ಈ ಪ್ರಾಜೆಕ್ಟ್ನ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದರು. ಈ ಸಮಯಕ್ಕೆ ಸರಿಯಾಗಿ ಅಜಿತ್ ಕುಮಾರ್ ಅವರ ಕಾರು ಅಪಘಾತದ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.