
ತಮಿಳು ಚಿತ್ರರಂಗದ ಖ್ಯಾತ ವಿತರಕ ಮತ್ತು ಫೈನಾನ್ಸಿಯರ್ ತಿರುಪ್ಪುರ್ ಸುಬ್ರಮಣ್ಯಂ ಅವರು ನಟ ಅಜಿತ್ ಕುಮಾರ್ ಮತ್ತು ನಟಿ ನಯನತಾರಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾರೆಯರು ಸಂಭಾವನೆ ಹೆಚ್ಚಿಸಿಕೊಂಡು, ಸಿನಿಮಾದ ಪ್ರಚಾರದಿಂದ ದೂರ ಉಳಿಯುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ನಿರ್ಮಾಪಕರು ಈ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಬೇಕು ಎಂದು ಅವರು ಕರೆ ನೀಡಿದ್ದಾರೆ.
‘ನಟ ಅಜಿತ್ ಕುಮಾರ್ ತಮ್ಮ ಸಂಭಾವನೆಯನ್ನು ಕಡಿತಗೊಳಿಸಲು ಒಪ್ಪಿಲ್ಲ.ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಯಾವ ನಿರ್ಮಾಪಕರೂ ಸಿದ್ಧರಿಲ್ಲ. ಸುಮಾರು ಒಂದೂವರೆ ವರ್ಷಗಳ ಕಾಲ ಅಜಿತ್ ಹೊಸ ಅವಕಾಶಗಳಿಗಾಗಿ ಕಾದಿದ್ದರು. ಕೊನೆಗೆ ಯಾವುದೇ ನಿರ್ಮಾಪಕರು ಮುಂದೆ ಬಾರದಿದ್ದಾಗ, ಅವರು ಸ್ವಂತ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಡೇರ್‌ಡೆವಿಲ್’ ಚಿತ್ರವನ್ನು ಅಜಿತ್ ಅವರ ಪತ್ನಿ ಶಾಲಿನಿ ನಿರ್ಮಿಸುತ್ತಿದ್ದಾರೆ. ಬೇರೆ ನಿರ್ಮಾಪಕರಿಗೆ ಲಾಭದಲ್ಲಿ ಪಾಲು ಕೇಳುವ ನಟರು, ಸ್ವಂತ ಸಿನಿಮಾಗೆ ಉಚಿತವಾಗಿ ಕೆಲಸ ಮಾಡಲು ಸಿದ್ಧರಿರುತ್ತಾರೆ’ ಎಂದು ಸುಬ್ರಮಣ್ಯಂ ವ್ಯಂಗ್ಯವಾಡಿದ್ದಾರೆ.
ಸಿನಿಮಾ ಪ್ರಚಾರದ ವಿಷಯದಲ್ಲೂ ತಾರೆಯರ ನಡೆ ಸರಿಯಿಲ್ಲ ಎಂದು ಸುಬ್ರಮಣ್ಯಂ ಆರೋಪಿಸಿದ್ದಾರೆ. ‘ಅಜಿತ್ ಮತ್ತು ನಯನತಾರಾ ತಮ್ಮ ಚಿತ್ರಗಳ ಪ್ರಚಾರಕ್ಕೆ ಬರುವುದಿಲ್ಲ. ಆದರೆ, ತಮ್ಮ ಸ್ವಂತ ಬ್ರ್ಯಾಂಡ್ ಅಥವಾ ನಿರ್ಮಾಣದ ಪ್ರಾಜೆಕ್ಟ್‌ಗಳನ್ನು ಪ್ರಚಾರ ಮಾಡುತ್ತಾರೆ. ಅಜಿತ್ ರೇಸಿಂಗ್ ತಂಡ ಹಾಗೂ ಕೋಲ್ಡ್ ಡ್ರಿಂಕ್ಸ್ ಜಾಹೀರಾತಿನಲ್ಲಿ ಭಾಗವಹಿಸುತ್ತಾರೆ. ನಯನತಾರಾ ಕೂಡ ತಮ್ಮ ಸ್ವಂತ ಬ್ಯಾನರ್‌ನ ಸಿನಿಮಾಗಳನ್ನು ಪ್ರಚಾರ ಮಾಡುತ್ತಾರೆ. ಬಾಲಿವುಡ್ ಮತ್ತು ಟಾಲಿವುಡ್ ನಟರು ತಮ್ಮ ಚಿತ್ರಗಳನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಈ ರೀತಿಯ ಪರಿಸ್ಥಿತಿ ಇದೆ’ ಎಂದು ಮರುಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಜಿತ್ ಕುಮಾರ್ 64ನೇ ಸಿನಿಮಾಗೆ ಡೇರ್‌ಡೆವಿಲ್; ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ ಗ್ಲಾಡಿಯೇಟರ್ಸ್ ಫಸ್ಟ್ ಲುಕ್ ಔಟ್
‘ನಿರ್ಮಾಪಕರು ಒಪ್ಪಂದಕ್ಕೆ ಸಹಿ ಹಾಕುವಾಗಲೇ ಪ್ರಚಾರದ ಷರತ್ತನ್ನು ಸೇರಿಸಬೇಕು. ಸಿನಿಮಾ ಪ್ರಚಾರಕ್ಕೆ ಬರದಿದ್ದರೆ ಅಂತಹ ನಟರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು. ನಟರು ತಮ್ಮ ಸಂಭಾವನೆ ಮತ್ತು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ. ಮಾರುಕಟ್ಟೆಯ ಸ್ಥಿತಿಯನ್ನು ಅರ್ಥೈಸಿಕೊಂಡು ನಿರ್ಮಾಪಕರ ಹಿತವನ್ನು ಕಾಯಬೇಕಿದೆ. ನಟರು ಸಹಕರಿಸದಿದ್ದರೆ ಚಿತ್ರರಂಗದ ಭವಿಷ್ಯ ಕಷ್ಟಕರವಾಗಲಿದೆ’ ಎಂದು ಸುಬ್ರಮಣ್ಯಂ ಎಚ್ಚರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.