ಸಿಕ್ಕಿದ್ದು ಕೆಟ್ಟ ವಿಮರ್ಶೆಯಾದರೂ ಭಾನುವಾರ ಡೆವಿಲ್ಗಿಂತ ನಾಲ್ಕುಪಟ್ಟು ಹೆಚ್ಚು ಗಳಿಸಿದ ‘ಅಖಂಡ 2’
Akhanda 2 Collection: ಕೆಟ್ಟ ವಿಮರ್ಶೆಗಳ ನಡುವೆಯೂ ನಂದಮೂರಿ ಬಾಲಕೃಷ್ಣರ 'ಅಖಂಡ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ. ಸಿನಿಮಾ ಟಾರ್ಚರ್ ಎಂದರೂ, ಅಭಿಮಾನಿಗಳು ಕೈಬಿಟ್ಟಿಲ್ಲ. ಇದುವರೆಗೂ 61 ಕೋಟಿ ಕಲೆಕ್ಷನ್ ಮಾಡಿ ನಿರ್ಮಾಪಕರಿಗೆ ಲಾಭ ತಂದಿದೆ. ಕರ್ನಾಟಕದ ಜೊತೆ ಆಂಧ್ರ-ತೆಲಂಗಾಣದಲ್ಲೂ ಭಾರಿ ಗಳಿಕೆ ಕಂಡಿದೆ.

ಕೆಲವು ಸಿನಿಮಾಗಳೇ ಹಾಗೆ, ವಿಮರ್ಶೆಗಳ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಸಿನಿಮಾದಿಂದ ಮನರಂಜನೆ ಸಿಕ್ಕಿತಾ? ಅಷ್ಟಕ್ಕೆ ಸಂತೃಪ್ತರಾಗಿಬಿಡುತ್ತಾರೆ. ಈಗ ‘ಅಖಂಡ 2’ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಮೊದಲ ದಿನ ಸಿನಿಮಾಗೆ ಕೆಟ್ಟ ವಿಮರ್ಶೆಗಳು ಸಿಕ್ಕವು. ಸಿನಿಮಾ ತುಂಬಾನೇ ಟಾರ್ಚರ್ ಎಂದೆಲ್ಲ ಹೇಳಲಾಯಿತು. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಅಬ್ಬರಿಸುತ್ತಲೇ ಇದೆ. ನಂದಮೂರಿ ಬಾಲಕೃಷ್ಣ, ಸಂಯುಕ್ತಾ ಮೆನನ್ ಮೊದಲಾದವರು ನಟಿಸಿರೋ ಈ ಸಿನಿಮಾದ ಒಟ್ಟೂ ಕಲೆಕ್ಷನ್ ಭರ್ಜರಿಯಾಗಿಯೇ ಇದೆ.
‘ಅಖಂಡ 2’ ಚಿತ್ರ ನೋಡಿ ಮೊದಲ ದಿನ ವಿಮರ್ಶೆ ಮಾಡಿದ ಬಹುತೇಕ ಮಾಧ್ಯಮಗಳು ಹಾಗೂ ಸಿನಿಪ್ರಿಯರು ಈ ಚಿತ್ರಕ್ಕೆ ಐದಕ್ಕೆ ಕೊಟ್ಟಿದ್ದು ಎರಡು ಸ್ಟಾರ್ ಮಾತ್ರ. ಆದರೆ, ಅಭಿಮಾನಿಗಳು ಮಾತ್ರ ಬಾಲಯ್ಯ ಅವರನ್ನು ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ ಅವರ ಕಡೆಯಿಂದ ಬೆಂಬಲ ಸಿಕ್ಕಿದೆ. ಹೀಗಾಗಿ, ಬುಕ್ ಮೈ ಶೋನಲ್ಲಿ ಈವರೆಗೆ 47 ಸಾವಿರ ಜನರು ರೇಟಿಂಗ್ ಕೊಟ್ಟಿದ್ದು, 10ಕ್ಕೆ 8.8 ರೇಟಿಂಗ್ ಸಿಕ್ಕಿದೆ. ಇದು ಚಿತ್ರದ ಹೆಚ್ಚುಗಾರಿಕೆ.
‘ಅಖಂಡ 2’ ಸಿನಿಮಾ ಮೊದಲ ದಿನ ಹಾಗೂ ಪ್ರೀಮಿಯರ್ ಶೋಗಳಿಂದ ಗಳಿಕೆ ಮಾಡಿದ್ದು, 30 ಕೋಟಿ ರೂಪಾಯಿ. ಎರಡು ಹಾಗೂ ಮೂರನೇ ದಿನ ಸಿನಿಮಾ ತಲಾ 15.5 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 61 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಮೂಲಕ ಬಾಲಯ್ಯ ಅವರು ನಿರ್ಮಾಪಕರಿಗೆ ಲಾಭ ತಂದುಕೊಡುವ ಸಾಧ್ಯತೆ ಇದೆ.
ಇನ್ನು, ಡೆವಿಲ್’ ಹಾಗೂ ‘ಅಖಂಡ 2’ ಸಿನಿಮಾ ಒಟ್ಟಿಗೆ ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳ ಮಧ್ಯೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ‘ಡೆವಿಲ್’ ಸಿನಿಮಾ ಭಾನುವಾರ 4 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರಕ್ಕಿಂತ ‘ಅಖಂಡ 2’ ನಾಲ್ಕು ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದಂತೆ ಆಗಿದೆ.
ಇದನ್ನೂ ಓದಿ: ಭಾನುವಾರ ‘ಡೆವಿಲ್’ ಸಿನಿಮಾ ಕಲೆಕ್ಷನ್ ಹೇಗಿದೆ? ಒಟ್ಟೂ ಗಳಿಕೆ ಇಷ್ಟೊಂದಾ?
‘ಡೆವಿಲ್’ ಕರ್ನಾಟಕದ ಕಲೆಕ್ಷನ್ ಮಾತ್ರ ನಂಬಿಕೊಂಡಿದೆ. ಆದರೆ, ‘ಅಖಂಡ 2’ ಹಾಗಲ್ಲ. ಆಂಧ್ರ ಪ್ರದೇಶ, ತೆಲಂಗಾಣದ ಜೊತೆ ಕರ್ನಾಟಕದಲ್ಲೂ ಪ್ರದರ್ಶನ ಕಾಣುತ್ತಿದೆ. ಇದರಿಂದ ಚಿತ್ರದ ಗಳಿಕೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




