ಮೋದಿಗೆ ಅವಹೇಳನ: ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ನಾಗಾರ್ಜುನ

Nagarjuna: ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಕುಟುಂಬ ಜನವರಿ 17ರಂದು ಮಾಲ್ಡೀವ್ಸ್​ಗೆ ತೆರಳಬೇಕಿತ್ತು, ಮಾಲ್ಡೀವ್ಸ್​ನ ಸಚಿವರು ಪ್ರಧಾನಿ ಮೋದಿಗೆ ಅಪಮಾನ ಮಾಡಿದ ಬಳಿಕ ನಾಗಾರ್ಜುನ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ.

ಮೋದಿಗೆ ಅವಹೇಳನ: ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ನಾಗಾರ್ಜುನ
Follow us
|

Updated on:Jan 14, 2024 | 6:18 PM

ಮಾಲ್ಡೀವ್ಸ್ (Maldives) ಭಾರತೀಯ ಸಿನಿಮಾ ತಾರೆಯರ ಮೆಚ್ಚಿನ ಪ್ರವಾಸಿ ತಾಣ, ಅದರಲ್ಲಿಯೂ ಬಾಲಿವುಡ್​ನ ಹಲವು ತಾರೆಯವರು ತಮ್ಮ ಬಿಡುವಿನ ಸಮಯ ಕಳೆಯುವುದು ಮಾಲ್ಡೀವ್ಸ್​ನಲ್ಲಿಯೇ. ಮಾಲ್ಡೀವ್ಸ್​ನ ಪ್ರವಾಸೋದ್ಯಮ ಹೆಚ್ಚಳದಲ್ಲಿ ಭಾರತೀಯ ಸಿನಿಮಾ ಸೆಲೆಬ್ರಿಟಿಗಳ ಪಾತ್ರ ಬಹಳ ದೊಡ್ಡದು. ಆದರೆ ಇದೀಗ ಮಾಲ್ಡೀವ್ಸ್ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಮಾಲ್ಡೀವ್ಸ್​ನ ಮೂವರು ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಹಂಚಿಕೊಂಡು ಅಪಮಾನಿಸಿದ್ದಾರೆ.

ಇದರ ಬೆನ್ನಲ್ಲೆ ಭಾರತದಲ್ಲಿ ಮಾಲ್ಡೀವ್ಸ್​ ವಿರುದ್ಧ ಅಭಿಯಾನ ಆರಂಭವಾಗಿದ್ದು, ಭಾರತದ ಪ್ರಧಾನಿಗೆ ಅಪಮಾನಿಸಿದ ಮಾಲ್ಡೀವ್ಸ್​ಗೆ ಭಾರತೀಯರು ಪ್ರವಾಸ ಹೋಗಬಾರದೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಮನವಿ ಮಾಡಿದ್ದಾರೆ. ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಸಹ ಇದಕ್ಕೆ ದನಿ ಗೂಡಿಸಿದ್ದಾರೆ. ಕೆಲವರಂತೂ ತಮ್ಮ ಪೂರ್ವನಿಯೋಜಿತ ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಗೊಳಿಸಿ ಆಕ್ರೋಶ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ:ನಾಗಾರ್ಜುನ ತೊಟ್ಟಿರುವ ಈ ಹಳದಿ ಟಿ-ಶರ್ಟ್​ನ ಬೆಲೆ ಸಾವಿರಗಳಲ್ಲ, ಲಕ್ಷಗಳು

ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಸಹ ತಮ್ಮ ಪೂರ್ವನಿಯೋಜಿತ ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದಾರೆ. ಸಂಕ್ರಾಂತಿಗೆ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಹೆಸರಿನ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಬಳಿಕ ಮಾಲ್ಡೀವ್ಸ್​ಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳುವ ಯೋಜನೆಯನ್ನು ನಾಗಾರ್ಜುನ ಹಾಕಿಕೊಂಡಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿ ನಾಗಾರ್ಜುನ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ.

‘‘ನನ್ನ ಕುಟುಂಬದ ಜೊತೆಗೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗದೇ ಇದ್ದ ಕಾರಣ, ನಾನು ಜನವರಿ 17 ರಂದು ರಜೆಗಾಗಿ ಮಾಲ್ಡೀವ್ಸ್‌ಗೆ ಹೋಗಬೇಕಿತ್ತು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವರ ಮಂತ್ರಿಗಳ ಕೆಟ್ಟ ಅಭಿರುಚಿಯ ಪೋಸ್ಟ್​ಗಳನ್ನು ನೋಡಿದ ಬಳಿಕ ಮನಸ್ಸು ಬದಲಾಯಿಸಿದೆ. ಕೆಟ್ಟ ಪೋಸ್ಟ್​ಗಳಿಗೆ ಅವರು ಬೆಲೆ ತೆರಲಿದ್ದಾರೆ. ಪ್ರಧಾನಿ ಮೋದಿ 1.5 ಶತಕೋಟಿ ಜನರ ನಾಯಕ ಮತ್ತು ಪ್ರಪಂಚದಾದ್ಯಂತ ಹೆಚ್ಚು ಗೌರವಾನ್ವಿತರಾಗಿದ್ದಾರೆ’’ ಎಂದಿದ್ದಾರೆ ನಾಗಾರ್ಜುನ. ಅಕ್ಕಿನೇನಿ ನಾಗಾರ್ಜುನ ಅವರ ಈ ನಿರ್ಣಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Sun, 14 January 24