‘ಹನುಮಾನ್’ ಸಿನಿಮಾಕ್ಕೆ ಭಾರಿ ನಷ್ಟ, ನಿರ್ಮಾಪಕ ದಿಲ್ ರಾಜು ಮೇಲೆ ಗುಮಾನಿ
HanuMan: ಸಂಕ್ರಾಂತಿಗೆ ಬಿಡುಗಡೆ ಆಗಿ ಗಮನ ಸೆಳೆಯುತ್ತಿರುವ ‘ಹನುಮಾನ್’ ಸಿನಿಮಾಕ್ಕೆ ಅನ್ಯಾಯವಾಗಿದ್ದು ನಷ್ಟ ಅನುಭವಿಸಿದೆ. ಎಲ್ಲರ ದೃಷ್ಟಿ ನಿರ್ಮಾಪಕ ದಿಲ್ ರಾಜು ಅತ್ತ ತಿರುಗಿದೆ.
ಸಂಕ್ರಾಂತಿ (Sankranthi) ಬಂತೆಂದರೆ ತೆಲುಗು ಚಿತ್ರರಂಗದಲ್ಲಿ (Tollywood) ಗದ್ದಲ ಸೃಷ್ಟಿಯಾಗುತ್ತದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಕಾಯುತ್ತಿರುತ್ತಾರೆ. ಪ್ರತಿ ಬಾರಿ ಸಂಕ್ರಾಂತಿ ಬಂದಾಗಲು ದೊಡ್ಡ ಸ್ಟಾರ್ಗಳ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ಸ್ಪರ್ಧೆ ಏರ್ಪಡುತ್ತದೆ. ಪ್ರತಿ ಬಾರಿಯೂ ಕೆಲವರಿಗೆ ನಷ್ಟ ಮಾಮೂಲು. ಈ ಬಾರಿ ಹಾಗಾಗದಂತೆ ತಡೆಯಲು ತೆಲುಗು ಸಿನಿಮಾ ನಿರ್ಮಾಪಕರ ಸಂಘ ಪ್ರಯತ್ನಿಸಿತಾದರೂ ವಿಫಲವಾಯ್ತು. ಇದು ‘ಹನುಮಾನ್’ ಸಿನಿಮಾ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ದಿಲ್ ರಾಜು ನಡುವೆ ವಿವಾದಕ್ಕೆ ಕಾರಣವಾಯ್ತು.
ಈ ಬಾರಿ ಸಂಕ್ರಾಂತಿಗೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ‘ಹನುಮಾನ್’, ವೆಂಕಟೇಶ್ ನಟನೆಯ ‘ಸೈಂಧವ’, ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಸಿನಿಮಾಗಳು ಬಿಡುಗಡೆ ಆಗಿವೆ. ಈ ನಾಲ್ಕು ಸಿನಿಮಾಗಳು ಕೇವಲ ಮೂರು ದಿನದ ಅಂತರದಲ್ಲಿ ಬಿಡುಗಡೆ ಆಗಿವೆ. ‘ಹನುಮಾನ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲು ನಿರ್ಮಾಪಕರ ಸಂಘದ ಅಧ್ಯಕ್ಷ, ಸ್ವತಃ ಬಿಗ್ ಬಜೆಟ್ ನಿರ್ಮಾಪಕರಾಗಿರುವ ದಿಲ್ ರಾಜು ಪ್ರಯತ್ನಿಸಿ ವಿಫಲವಾದರು.
‘ಹನುಮಾನ್’ ಸಿನಿಮಾ ಮೊದಲು ಘೋಷಿಸಿದ್ದ ದಿನಾಂಕದಂದೆ ಬಿಡುಗಡೆ ಆಯ್ತು. ಆದರೆ ಆ ಸಿನಿಮಾಕ್ಕೆ ಕೆಲ ಭಾಗಗಳಲ್ಲಿ ಮೋಸಲಾಗಿದ್ದು ಇದರಿಂದ ಭಾರಿ ನಷ್ಟ ಅನುಭವಿಸಿದೆ. ‘ಹನುಮಾನ್’ ಸ್ಟಾರ್ ನಟನ ಸಿನಿಮಾ ಅಲ್ಲದ ಕಾರಣ, ಅಡ್ವಾನ್ಸ್ ನೀಡಿ ಚಿತ್ರಮಂದಿರಗಳನ್ನು ನಿರ್ಮಾಪಕರು ಬುಕ್ ಮಾಡಿದ್ದರು. ಅಂತೆಯೇ ನಿಜಾಂ ಏರಿಯಾನಲ್ಲಿ ಹಲವು ಚಿತ್ರಮಂದಿರಗಳಿಗೆ ಅಡ್ವಾನ್ಸ್ ನೀಡಿ ಬುಕ್ ಮಾಡಲಾಗಿತ್ತು. ಆದರೆ ಅಡ್ವಾನ್ಸ್ ಪಡೆದ ಕೆಲವು ಚಿತ್ರಮಂದಿರಗಳು ‘ಹನುಮಾನ್’ ಸಿನಿಮಾ ಪ್ರದರ್ಶಿಸದೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಪ್ರದರ್ಶಿಸಿವೆ.
ಇದನ್ನೂ ಓದಿ:‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆ ವಿವರ ಇಲ್ಲಿದೆ..
ಚಿತ್ರಮಂದಿರಗಳ ಈ ಕೃತ್ಯದ ಹಿಂದೆ ನಿರ್ಮಾಪಕರ ಸಂಘದ ಅಧ್ಯಕ್ಷ ದಿಲ್ ರಾಜು ಕೈವಾಡ ಇದೆ ಎನ್ನಲಾಗುತ್ತಿದೆ. ನಿರ್ಮಾಪಕ ಹಾಗೂ ವಿತರಕ ಆಗಿರುವ ದಿಲ್ ರಾಜು, ‘ಗುಂಟೂರು ಖಾರಂ’ ಸಿನಿಮಾದ ವಿತರಕರಾಗಿದ್ದಾರೆ. ಇದೇ ಕಾರಣಕ್ಕೆ ಅವರು ಹೈಪ್ ಚೆನ್ನಾಗಿರುವ ‘ಹನುಮಾನ್’ ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದೇ ಹೋದಾಗ ತಮ್ಮ ಪ್ರಭಾವ ಬಳಸಿ ಚಿತ್ರಮಂದಿರಗಳ ಮಾಲೀಕರನ್ನು ದಾರಿ ತಪ್ಪಿಸಿ ತಮ್ಮ ಸಿನಿಮಾ ಪ್ರದರ್ಶನಗೊಳ್ಳುವಂತೆ ಮಾಡಿದ್ದಾರೆ ಎಂದು ‘ಹನುಮಾನ್’ ಚಿತ್ರತಂಡ ಆರೋಪಿಸಿದೆ.
ತಮ್ಮ ಸಿನಿಮಾಕ್ಕೆ ಚಿತ್ರಮಂದಿರ ಮಾಲೀಕರಿಂದ ಮೋಸ ಆಗಿರುವ ಬಗ್ಗೆ ‘ಹನುಮಾನ್’ ಸಿನಿಮಾ ನಿರ್ಮಾಪಕರು, ತೆಲುಗು ಸಿನಿಮಾ ಚೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ‘ಹನುಮಾನ್’ ಸಿನಿಮಾದಿಂದ ಅಡ್ವಾನ್ಸ್ ಪಡೆದು ಬೇರೆ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರಗಳು ನಷ್ಟ ತುಂಬಿಕೊಡಬೇಕು ಎಂದು ನಿರ್ಮಾಪಕರ ಸಂಘ ಚಿತ್ರಮಂದಿರಗಳ ಮಾಲೀಕರಿಗೆ ಪತ್ರ ಬರೆದಿದೆ.
‘ಹನುಮಾನ್’ ಸಿನಿಮಾ ಸ್ಟಾರ್ ನಟರಿಲ್ಲದ ಸಿನಿಮಾ ಆದರೂ ಸಹ ತನ್ನ ಕತೆ, ಕಡಿಮೆ ಬಜೆಟ್ನಲ್ಲಿ ನೀಡಿರುವ ಅದ್ಭುತ ವಿಎಫ್ಎಕ್ಸ್, ಗ್ರಾಫಿಕ್ಸ್ ಔಟ್ಪುಟ್ಗಳಿಂದ ಗಮನ ಸೆಳೆಯುತ್ತಿದೆ. ಈ ಸಂಕ್ರಾಂತಿಗೆ ಬಿಡುಗಡೆ ಆಗಿರುವ ಸಿನಿಮಾಗಳಲ್ಲಿ ‘ಹನುಮಾನ್’ ಮಾತ್ರವೇ ಗೆದ್ದಿದೆ ಎಂಬ ವಾರ್ತೆಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sun, 14 January 24