ಕನ್ನಡಿಗರು ಮಾಡಿದ ಸಹಾಯ ಸ್ಮರಿಸಿದ ತೆಲುಗು ಸ್ಟಾರ್ ನಟ ನಾಗಾರ್ಜುನ
Akkineni Nagarjuna: ನಾಗಾರ್ಜುನ ತೆಲುಗಿನ ಸ್ಟಾರ್ ಹೀರೋ. ಜೊತೆಗೆ ಬಹು ದೊಡ್ಡ ಉದ್ಯಮಿಯೂ ಹೌದು. ಇದೀಗ ಅವರು ತೆಲುಗಿನ ಸಣ್ಣ ಸಿನಿಮಾ ಒಂದರ ಪ್ರಚಾರಾರ್ಥ ಸಂದರ್ಶನವೊಂದರಲ್ಲಿ, ಹಳ್ಳಿಗರು ತೋರುವ ಪ್ರೀತಿ, ಗೌರವದ ಬಗ್ಗೆ ಮಾತನಾಡುತ್ತಾ, ತಮಗೆ ಕರ್ನಾಟಕದಲ್ಲಿ ಒಮ್ಮೆ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಮಾಹಿತಿ ಇಲ್ಲಿದೆ....

ಮುಖ್ಯಾಂಶಗಳು
- ಅಕ್ಕಿನೇನಿ ನಾಗಾರ್ಜುನ ತೆಲುಗಿನ ಜನಪ್ರಿಯ ನಟ
- ಅಕ್ಕಿನೇನಿ ನಾಗಾರ್ಜುನ ಕರ್ನಾಟಕದಲ್ಲಿ ನಡೆದ ಘಟನೆ ಸ್ಮರಿಸಿದ್ದಾರೆ.
- ಕನ್ನಡಿಗರು ತಮಗೆ ಮಾಡಿದ ಸಹಾಯ ಸ್ಮರಿಸಿದ್ದಾರೆ.
ಅಕ್ಕಿನೇನಿ ನಾಗಾರ್ಜುನ (Akkineni Nagarjuna) ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ನಟ ಮತ್ತು ಮನೊರಂಜನಾ ಕ್ಷೇತ್ರದಲ್ಲಿ ಬಲು ದೊಡ್ಡ ಉದ್ಯಮಿಯೂ ಹೌದು. ಟಿವಿ ಚಾನೆಲ್ಗಳು, ನಿರ್ಮಾಣ ಸಂಸ್ಥೆಯ ಜೊತೆಗೆ ಬಲು ಜನಪ್ರಿಯವಾದ ಅನ್ನಪೂರ್ಣ ಸ್ಟುಡಿಯೋದ ಮಾಲೀಕರು ಸಹ ಹೌದು. ಹಲವಾರು ತೆಲುಗು ಸಿನಿಮಾ, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿರುವ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಇದೀಗ ಕನ್ನಡಿಗರು ಹಿಂದೊಮ್ಮೆ ತಮಗೆ ಮಾಡಿದ ಸಹಾಯವನ್ನು ಸ್ಮರಣೆ ಮಾಡಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಅವರನ್ನು ‘ಗ್ರೀಕು ವೀರುಡು’ (ಗ್ರೀಕ್ ವೀರ), ‘ಮನ್ಮಥ’ ಎಂದೆಲ್ಲ ಕರೆಯಲಾಗುತ್ತಿತ್ತು. ಅಂದಗಾರರಾಗಿದ್ದ ನಾಗಾರ್ಜುನ ಅವರು ಹಲವಾರು ಸೂಪರ್ ಹಿಟ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದರ ಜೊತೆಗೆ ಕೆಲವು ಭಕ್ತಿ ಪ್ರಧಾನ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದು, ಅವು ಬಲು ದೊಡ್ಡ ಹಿಟ್ ಆಗಿವೆ. ಅವುಗಳಲ್ಲಿ 2012 ರಲ್ಲಿ ಬಿಡುಗಡೆ ಆದ ಶಿರಡಿ ಸಾಯಿಬಾಬ ಸಹ ಒಂದು.
‘ಶ್ರೀ ಶಿರಡಿ ಬಾಬ’ ಸಿನಿಮಾನಲ್ಲಿ ನಾಗಾರ್ಜುನ ಅವರು ಶಿರಡಿ ಬಾಬಾ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಚಿತ್ರೀಕರಣವನ್ನು ಆಗಿನ ಅಖಂಡ ಆಂಧ್ರ ಪ್ರದೇಶದ ಜೊತೆಗೆ ಕರ್ನಾಟಕದ ಬದಾಮಿ ಹಾಗೂ ಇನ್ನೂ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಬಗ್ಗೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ನಾಗಾರ್ಜುನ, ಆ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕನ್ನಡಿಗರು ತಮಗೆ ಮಾಡಿದ ಸಹಾಯ ನೆನಪು ಮಾಡಿಕೊಂಡಿದ್ದಾರೆ.
ಹಳ್ಳಿಯ ಜನರ ಪ್ರೀತಿ, ವಿಶ್ವಾಸದ ಬಗ್ಗೆ ಮಾತನಾಡುತ್ತಾ, ‘ಶಿರಡಿ ಬಾಬಾ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಾನು ಕರ್ನಾಟಕಕ್ಕೆ ಹೋಗಿದ್ದೆ. ಆ ಸಿನಿಮಾದ ಕೆಲ ಭಾಗಗಳನ್ನು ಬದಾಮಿಯಲ್ಲಿ ಶೂಟ್ ಮಾಡಿದ್ದೆವು. ಆಗೊಮ್ಮೆ ಶೂಟಿಂಗ್ಗೆಂದು ಹೈದರಾಬಾದ್ನಿಂದ ಬಾದಾಮಿಗೆ ಕಾರು ಚಲಾಯಿಸಿಕೊಂಡು ಹೋಗಿದ್ದೆ. ಆಗ ಗೂಗಲ್ ಈಗಿನಷ್ಟು ನಿಖರವಾಗಿರಲಿಲ್ಲ. ಹೇಗೋ ಏನೋ ಅದು ಒಂದು ಸಣ್ಣ ಇಂಟೀರಿಯರ್ ರಸ್ತೆಗೆ ನನ್ನನ್ನು ಕರೆದುಕೊಂಡು ಹೋಗಿತು. ಅಲ್ಲಿ ನನಗೆ ದಾರಿಯೇ ತಿಳಿಯಲಿಲ್ಲ. ಒಂದು ಸಣ್ಣ ಹಳ್ಳಿಯಲ್ಲಿ ನಿಲ್ಲಿಸಿ ಸಹಾಯ ಕೇಳಿದಾಗ ಅಲ್ಲಿನವರು ಬಹಳ ಪ್ರೀತಿ ತೋರಿಸಿದರು’ ಎಂದು ನಾಗಾರ್ಜುನ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:28 ವರ್ಷಗಳ ಬಳಿಕ ಒಂದಾಗುತ್ತಿರುವ ನಾಗಾರ್ಜುನ ಮತ್ತು ಟಬು
‘ನಾನು ಯಾರೆಂದು ಸಹ ಅವರಿಗೆ ಗೊತ್ತಿರಲಿಲ್ಲ. ಆದರೂ ಅವರು ನನ್ನನ್ನು ಕೂರಿಸಿ ಊಟ ಹಾಕಿದರು. ನನ್ನ ಯೋಗಕ್ಷೇಮ ವಿಚಾರಿಸಿದರು. ನನ್ನ ಆತಂಕ ದೂರ ಮಾಡಿದರು. ಕೊನೆಗೆ ಒಬ್ಬಾತ ಬೈಕಿನಲ್ಲಿ ಜೊತೆಗೆ ನನಗೆ ಸರಿಯಾದ ದಾರಿ ತೋರಿಸಿದ’ ಎಂದಿದ್ದಾರೆ ನಟ ನಾಗಾರ್ಜು. ಹಳ್ಳಿಯಲ್ಲಿ ಅಂದು ನನಗೆ ಧಕ್ಕಿದ ಪ್ರೀತಿ, ಗೌರವ ಅಪರೂಪವಾದುದು, ನನಗೆ ಅದು ಇಂದಿಗೂ ನೆನಪಿದೆ. ಆದರೆ ನಗರದಲ್ಲಿ ಅಂಥಹಾ ಪ್ರೀತಿ ನಿರೀಕ್ಷಿಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ ನಾಗಾರ್ಜುನ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Wed, 19 August 26




