ಆ ನಿರ್ದೇಶಕನ ಮನೆ ಎದುರು ಕಾಯುತ್ತಾ ನಿಲ್ಲುತ್ತಿದ್ದರಂತೆ ಸ್ಟಾರ್ ನಟ ನಾಗಾರ್ಜುನ
Akkineni Nagarjuna: ತೆಲುಗು ಚಿತ್ರರಂಗದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಸ್ಟುಡಿಯೋ, ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಟಿವಿ ಚಾನೆಲ್ ಹಲವು ಅವರ ಬಳಿ ಇವೆ. ಇವೆಲ್ಲದರ ಜೊತೆಗೆ ಭಾರಿ ಸಂಭಾವನೆ ಪಡೆವ ನಟ. ಇಷ್ಟೆಲ್ಲ ಇದ್ದರೂ ಸಹ ನಾಗಾರ್ಜುನ ಒಂದು ಸಿನಿಮಾಕ್ಕಾಗಿ ನಿರ್ದೇಶಕನ ಮನೆ ಎದುರು ಹೋಗಿ ನಿಲ್ಲುತ್ತಿದ್ದರಂತೆ.

ಅಕ್ಕಿನೇನಿ ನಾಗಾರ್ಜುನ (Akkineni Nagarjuna), ತೆಲುಗು ಚಿತ್ರರಂಗದ ಅತ್ಯಂತ ಶ್ರೀಮಂತ ಸ್ಟಾರ್ ನಟರಲ್ಲಿ ಮೊದಲಿಗರು. ಅನ್ನಪೂರ್ಣೇಶ್ವರಿ ಸ್ಟುಡಿಯೋ, ಮಾ ಚಾನೆಲ್ ಸೇರಿದಂತೆ ಹಲವಾರು ಉದ್ಯಮಗಳನ್ನು ನಾಗಾರ್ಜುನ ಹೊಂದಿದ್ದಾರೆ. ನಾಗಾರ್ಜುನ ಈಗ ಶ್ರೀಮಂತರಲ್ಲ ಹುಟ್ಟುವಾಗಲೇ ಶ್ರೀಮಂತರು. ನಾಗಾರ್ಜುನ ತಂದೆ ಎಎನ್ಆರ್ (ಅಕ್ಕಿನೇನಿ ನಾಗೇಶ್ವರ ರಾವ್) ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ಭಾರಿ ಹಿನ್ನೆಲೆ ಇರುವ, ಕೋಟ್ಯಂತರ ಆಸ್ತಿ ಇರುವ ಅಕ್ಕಿನೇನಿ ನಾಗಾರ್ಜುನ ನಿರ್ದೇಶಕರೊಬ್ಬರ ಮನೆ ಮುಂದೆ ಪ್ರತಿದಿನ ನಿಂತು ಕಾಯುತ್ತಿದ್ದರಂತೆ.
ಅಕ್ಕಿನೇನಿ ನಾಗಾರ್ಜುನ ಇಂದು ಸೂಪರ್ ಸ್ಟಾರ್ ನಟ ಆದರೆ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. 1986 ರಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟ ನಾಗಾರ್ಜುನ, ಕಾಲೇಜು ಯುವಕ, ಕ್ರಾಂತಿಕಾರಿ ಯುವಕನ ಪಾತ್ರಗಳಲ್ಲಿ ಆರಂಭದಲ್ಲಿ ಮಿಂಚಿದರು. ಬಳಿಕ ರೊಮ್ಯಾಂಟಿಕ್ ಸಿನಿಮಾಗಳು, ಕೌಟುಂಬಿಕ ಸಿನಿಮಾಗಳು. ಫ್ಯಾಕ್ಷನಿಸಂ ಸಿನಿಮಾಗಳು ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸಿ, ಮೂರು ದಿನದ ಹಿಂದೆ ಬಿಡುಗಡೆ ಆದ ‘ಕೂಲಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ, ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿ, ‘ನಾನು ನಾಯಕನಾದಾಗ ನಮ್ಮ ತಂದೆಯ ಕಾರಣಕ್ಕೆ ಜನ ನನ್ನನ್ನು ನೋಡಲು ಬಂದರು. ಎಎನ್ಆರ್ ಮಗ ಹೇಗೆ ನಟಿಸಿದ್ದಾನೆ, ಅವರಿಗೆ ಸರಿ ಸಾಟಿಯಾ ಎಂದೆಲ್ಲ ಹೋಲಿಸಲು ನನ್ನ ಸಿನಿಮಾ ನೋಡುತ್ತಿದ್ದರು. ಆಗೆಲ್ಲ ಸಾಕಷ್ಟು ಟೀಕೆಗಳು ಸಹ ಎದುರಾಗುತ್ತಿದ್ದವು. ಆದರೆ ಆ ನಂತರ ನನಗೆ ಇದು ಹೀಗೆ ನಡೆಯುವುದಿಲ್ಲ ಎಂಬುದು ಅರ್ಥವಾಯ್ತು, ಹಾಗಾಗಿ ನನ್ನ ಸಿನಿಮಾ ವೃತ್ತಿ ಜೀವನವನ್ನು ನಾನೇ ತಿದ್ದಿಕೊಂಡೆ’ ಎಂದಿದ್ದಾರೆ.
ಇದನ್ನೂ ಓದಿ:ನನ್ನ ಕೂದಲು ಉದುರಿದೆ, ಆದರೆ ನಾಗಾರ್ಜುನ ಇನ್ನೂ ಯಂಗ್ ಆಗಿದ್ದಾರೆ: ರಜನಿಕಾಂತ್
ಮಣಿರತ್ನಂ ಮನೆಯ ಎದುರು ಬೆಳಿಗ್ಗೆ 6 ಗಂಟೆಗೆ ಹೋಗಿ ನಿಲ್ಲುತ್ತಿದ್ದೆ. ಅದೇ ಸಮಯಕ್ಕೆ ಅವರು ವಾಕಿಂಗ್ ಹೋಗುತ್ತಿದ್ದರು. ಸುಮಾರು ಆರು ತಿಂಗಳ ಕಾಲ ಹೀಗೆ ಮಾಡಿದ ಬಳಿಕ ಕೊನೆಗೆ ಅವರು ‘ಗೀತಾಂಜಲಿ’ ಸಿನಿಮಾ ನಿರ್ದೇಶನ ಮಾಡಲು ಒಪ್ಪಿದರು. ಮೊದಲಿಗೆ ಅವರು ಆ ಸಿನಿಮಾವನ್ನು ತಮಿಳಿನಲ್ಲಿ ಮಾಡಲು ನಿಶ್ಚಯ ಮಾಡಿದ್ದರು. ಆದರೆ ನಾನು ಬಲವಂತ ಮಾಡಿದ್ದಕ್ಕೆ ತೆಲುಗಿನಲ್ಲಿ ಮಾಡಲು ಒಪ್ಪಿಕೊಂಡರು. ಆ ಸಿನಿಮಾದಲ್ಲಿ ನಟಿಸಿದರೆ ನನ್ನ ಮಾರುಕಟ್ಟೆ ವಿಸ್ತಾರ ಆಗುತ್ತದೆ ಎಂಬುದು ನನಗೆ ಗೊತ್ತಿತ್ತು ಹಾಗಾಗಿ ಅವರನ್ನು ಕಷ್ಟಪಟ್ಟು ಒಪ್ಪಿಸಿ ಸಿನಿಮಾ ಮಾಡಿಸಿದೆ’ ಎಂದಿದ್ದಾರೆ ನಾಗಾರ್ಜುನ.
ಅಕ್ಕಿನೇನಿ ನಾಗಾರ್ಜುನ ‘ಕೂಲಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ‘ಕೂಲಿ’ ಸಿನಿಮಾನಲ್ಲಿ ಅವರ ವಿಲನ್ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಬಲು ಸ್ಟೈಲಿಷ್ ಆಗಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




